
ಸಿನಿಮಾದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳು ಇದ್ದರೂ ತಕ್ಷಣ ವಿವಾದ (Controversy) ಸೃಷ್ಟಿಯಾಗುವ ಕಾಲವಿದು. ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಈಗ ‘ತಿಕ್ಲು ರಾಮ’ (Thiklu Rama) ಸಿನಿಮಾದ ಟೈಟಲ್ ಕೂಡ ವಿವಾದಕ್ಕೆ ಒಳಗಾಗಿದೆ. ಸಾಹಿತಿ, ಗಾಯಕ, ಸಂಗೀತ ಸಂಯೋಜಕ ಮಂಜುಕವಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಶೇಕಡ 40ರಷ್ಟು ಮುಗಿದಿದೆ. ಆದರೆ ಈಗ ಟೈಟಲ್ ಬದಲಾವಣೆ ಮಾಡಬೇಕು ಎಂದು ದೂರು ನೀಡಲಾಗಿದೆ.
‘ತಿಕ್ಲು ರಾಮ’ ಸಿನಿಮಾಗೆ ಡಾ. ರಾಜ್‌ವೀರ್ ಅವರು ಕಥೆ ಬರೆದಿದ್ದಾರೆ. ಆ ಪಾತ್ರದಲ್ಲಿ ಅವರೇ ನಟಿಸುತ್ತಿದ್ದಾರೆ. ರಾಮನವಮಿ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆದರೆ ಸಿನಿಮಾದ ಶೀರ್ಷಿಕೆ ಸರಿಯಿಲ್ಲವೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತ ಗಿರೀಶ್ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿ, ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ವಿಷಯದ ಬಗ್ಗೆ ಚಿತ್ರತಂಡದವರು ಮಾತನಾಡಿದ್ದಾರೆ. ‘ರಾಮ ಮತ್ತು ಹನುಮನ ಹೆಸರಿಗೆ ಧಕ್ಕೆ ಬರುವಂತೆ ಇಲ್ಲಿಯವರೆಗೂ ಯಾವುದೇ ಕೆಲಸವನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಟೈಟಲ್ ಬಗ್ಗೆ ಆಕ್ಷೇಪ ಕಂಡುಬಂದಲ್ಲಿ, ಅದನ್ನು ಸರಿಪಡಿಸಿಕೊಳ್ಳುವುದಾಗಿ ನಿರ್ಮಾಪಕಿ ಶ್ರುತಿ ಜಿ.ಬಿ. ಮತ್ತು ನಿರ್ದೇಶಕ ಮಂಜುಕವಿ ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ರಾಮ, ಹನುಮನ ಅವಹೇಳನ ದೃಶ್ಯಗಳು ಇದ್ದಲ್ಲಿ ಅದನ್ನು ತೆಗೆದು ಹಾಕಲಾಗುವುದು’ ಎಂದು ಡಾ. ರಾಜ್‌ವೀರ್ ಹೇಳಿದ್ದಾರೆ.
‘ತಿಕ್ಲು ರಾಮ’ ಒಂದು ಪರಿಸರ ಪ್ರೇಮಿ, ಹೃದಯ ಸ್ಪರ್ಶಿ ಕಾದಂಬರಿ ಆಗಿದೆ. ಇದನ್ನು ಓದಿದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಚು ಚಿತ್ರತಂಡ ತಿಳಿಸಿದೆ. ಸಿನಿಮಾದಲ್ಲಿ ಉತ್ತಮವಾದ ಸಂದೇಶಗಳು ಇರಲಿದೆ. ತಿಕ್ಲುರಾಮ ಸಾಮಾಜಿಕ ಕಳಕಳಿಯ ಕೆಲಸದಲ್ಲಿ ತೊಡಗಿಕೊಂಡು, ಪರಿಸರ ಕಾಪಾಡುತ್ತಾ, ಜೀವನ ನಡೆಸುತ್ತಿರುವಾಗ ಆತನ ಬದುಕಲ್ಲಿ ಏನೆಲ್ಲಾ ಆಗುಹೋಗುಗಳು ಆಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನೂ ಓದಿ: ‘ಧುರಂಧರ್ 3’ ಸಿನಿಮಾ ಬರಲಿದೆಯೇ? ಕುತೂಹಲದ ಪ್ರಶ್ನೆಗೆ ಉತ್ತರ ನೀಡಿದ ನಟ ರಾಕೇಶ್ ಬೇಡಿ
ಶ್ರೀರಾಮನಿಗೆ ಅವಮಾನ ಆಗಬಾರದು ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರಬಾರದೆಂಬ ಉದ್ದೇಶದಿಂದ ‘ತಿಕ್ಲು ರಾಮ’ ಶೀರ್ಷಿಕೆಯನ್ನು ಬದಲಾಯಿಸಲು ಸೂಚಿಸಲಾಗಿದೆ. ಅದರ ಬದಲು ಬೇರೆ ಯಾವ ಹೆಸರು ಇಡಲಾಗುವುದು ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಲಾಗುವುದು ಎಂದು ಡಾ. ರಾಜ್‌ವೀರ್ ಮಾಹಿತಿ ಹಂಚಿಕೊಂಡಿದ್ದಾರೆ. ವಿನು ಮನಸು ಅವರ ಹಿನ್ನಲೆ ಸಂಗೀತ, ರಾಜ್ ಕಡೂರು-ಭರತ್ ಅವರ ಛಾಯಾಗ್ರಹಣ, ಅಲ್ಟಿಮೇಟ್ ಶಿವು-ಮಾಸ್ ಮಾದ ಅವರ ಸಾಹಸ ನಿರ್ದೇಶನ, ಜಗ್ಗು ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.