ಶೀಘ್ರದಲ್ಲೇ ಬಿಡುಗಡೆ ಆಗಲಿದೆ ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಸಿನಿಮಾ

‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಸಿನಿಮಾದಲ್ಲಿ ಕಾಮಿಡಿ ಕಥಾಹಂದರ ಇದೆ. ಈ ಚಿತ್ರಕ್ಕೆ ಕೆ. ಮೋಹನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ರಾಮನಗರ, ಹಂದಲಗೆರೆ, ಮೈಸೂರು ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಸೆನ್ಸಾರ್‌ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ.

ಶೀಘ್ರದಲ್ಲೇ ಬಿಡುಗಡೆ ಆಗಲಿದೆ ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಸಿನಿಮಾ
Tipparallili Timmanna Doctoru Team

Updated on: Jul 09, 2025 | 10:05 PM

ಟಿ.ಪಿ. ಕೈಲಾಸಂ ಸಾಹಿತ್ಯ, ಮೈಸೂರು ಅನಂತಸ್ವಾಮಿ ಗಾಯನ ಮತ್ತು ಸಂಗೀತದ ‘ತಿಪ್ಪಾರಳ್ಳಿ ಬಲುದೂರ’ ಹಾಡಿನ ಪದವನ್ನು ಇಟ್ಟುಕೊಂಡು ಹೊಸ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಎಂಬುದು ಹೊಸ ಚಿತ್ರದ ಟೈಟಲ್. ಈ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಈಗ ಪ್ರಚಾರದ ಮೊದಲ ಹಂತವಾಗಿ ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಟ್ರೇಲರ್ ಮತ್ತು ಹಾಡನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಚಿತ್ರತಂಡದವರು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಸಿನಿಮಾದಲ್ಲಿ ಬೆಳಗಾವಿ ಮೂಲದ ಉದ್ಯಮಿ ಗಿರೀಶ ಪ್ರಕಾಶ ಭಸ್ಮೇ ಅವರು ಹೀರೋ ಆಗಿ ನಟಿಸಿದ್ದಾರೆ. ಅಲ್ಲದೇ, ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ‘ಶ್ರೀ ದಾನಮ್ಮ ದೇವಿ ಫಿಲ್ಸ್ಮ್’ ಬ್ಯಾನರ್ ಮೂಲಕ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಲವು ವರ್ಷಗಳಿಂದ ಸಹ-ನಿರ್ದೇಶಕನಾಗಿ, ಸಹಾಯಕ ನಿರ್ದೇಶಕರಾಗಿ ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಕೆ. ಮೋಹನ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾಗೆ ಕೆ. ಮೋಹನ್ ಕುಮಾರ್ ಅವರೇ ಕಥೆ,ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮೂರು ಹಾಡುಗಳಿಗೆ ಅವರೇ ಸಾಹಿತ್ಯ ರಚಿಸಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಪಾವನಿ ಅವರು ಅಭಿನಯಿಸಿದ್ದಾರೆ. ಇವರೊಂದಿಗೆ ಮೈಸೂರು ರಮಾನಂದ್, ಸತೀಶ್‌ ಗೌಡ, ಆಲಿಶಾ, ಶೂಟಿಂಗ್ ಕೃಷ್ಣ ಮುಂತಾದವರು ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗಿರೀಶ್ ಪ್ರಕಾಶ ಭಸ್ಮೇ ಅವರು ಮಾತನಾಡಿದರು. ‘ನಾನು ಹೆಚ್2ಓ, ಶ್ರೀರಾಂಪುರ ಪೋಲೀಸ್ ಸ್ಟೇಷನ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ಒಮ್ಮೆ ನಿರ್ದೇಶಕರೊಂದಿಗೆ ಶುರುವಾದ ಪರಿಚಯ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಹೆಸರಿಗೆ ತಕ್ಕಂತೆ ಚಿತ್ರದಲ್ಲಿ ಹಾಸ್ಯ, ಭಾವನೆಗಳು, ಪ್ರೀತಿ ತುಂಬಿದೆ. ವೀಕ್ಷಕರಿಗೆ ಮನರಂಜನೆ ನೀಡಲಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಜೋಗತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ; ‘ವೇಷಗಳು’ ಸಿನಿಮಾದ ಟೀಸರ್ ಬಿಡುಗಡೆ

ಗೋಪಿ ಕಲಾಕಾರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹೊಸೂರು ಮಂಜು ಅವರು ಛಾಯಾಗ್ರಹಣ ಮಾಡಿದ್ದಾರೆ. ಸಂತೋಷ್ ರಾಥೋಡ್ ಅವರ ಸಾಹಸ ನಿರ್ದೇಶನ, ಡಾಲಿ ರಮೇಶ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.