ಜೋಗತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ; ‘ವೇಷಗಳು’ ಸಿನಿಮಾದ ಟೀಸರ್ ಬಿಡುಗಡೆ
ರವಿ ಬೆಳಗೆರೆ ಅವರು ಬರೆದ ಕಥೆಯನ್ನು ಆಧರಿಸಿ ‘ವೇಷಗಳು’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ. ಜೋಗತಿ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿರುವುದು ವಿಶೇಷ. ಆ ಪಾತ್ರದ ಫಸ್ಟ್ ಲುಕ್ ಅನಾವರಣ ಆಗಿದೆ. ಆ ಮೂಲಕ ಸಿನಿಮಾ ಬಗ್ಗೆ ಕುತೂಹಲ ಮೂಡಿಸಲಾಗಿದೆ.

ನಟ ಶ್ರೀನಗರ ಕಿಟ್ಟಿ (Srinagara Kitty) ಅವರು ಈಗಾಗಲೇ ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಇನ್ನೊಂದು ಸವಾಲಿನ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಕುರಿತು ಬರೆದಿರುವ ‘ವೇಷಗಳು’ ಎಂಬ ಸಣ್ಣಕಥೆಯನ್ನು ಆಧರಿಸಿ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ‘ವೇಷಗಳು’ (Veshagalu) ಎಂದೇ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಮೂಲಕ ಜೋಗತಿ (Jogathi) ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹೇಗೆ ಕಾಣಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ.
‘ಗ್ರೀನ್ ಟ್ರೀ ಸ್ಟುಡಿಯೋಸ್’ ಮೂಲಕ ಕಿಶನ್ ರಾವ್ ದಳವಿ ಅವರು ‘ವೇಷಗಳು’ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದವರು ಭಾಗಿಯಾಗಿದ್ದರು. ಈ ಸಿನಿಮಾದಲ್ಲಿ ರಂಗಭೂಮಿಯ ಪ್ರತಿಭೆಗಳೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ಶ್ರೀನಗರ ಕಿಟ್ಟಿ ಅವರು ಜುಲೈ 8ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅದೇ ದಿನ ‘ವೇಷಗಳು’ ಟೈಟಲ್ ಟೀಸರ್ ರಿಲೀಸ್ ಮಾಡಲಾಯಿತು. ಆ ಮೂಲಕ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕ ಕಿಶನ್ ರಾವ್ ಅವರು ಮಾತನಾಡಿದರು. ಈ ಸಿನಿಮಾ ಶುರುವಾದ ಬಗೆಯನ್ನು ಅವರು ವಿವರಿಸಿದರು. ರವಿ ಬೆಳಗೆರೆ ಮಗಳು ಭಾವನಾ ಅವರಿಂದ ಈ ಸಿನಿಮಾಗೆ ಅವರು ಒಪ್ಪಿಗೆ ಪಡೆದುಕೊಂಡಿದ್ದಾರೆ.
‘ವೇಷಗಳು’ ಸಿನಿಮಾದಲ್ಲಿ ಜೋಗತಿಯರ ಬಗ್ಗೆ ಮತ್ತು ಅವರ ಜೀವನ ಶೈಲಿಯ ಬಗ್ಗೆ ಹೇಳಲಾಗುತ್ತಿದೆ. ಶ್ರೀನಗರ ಕಿಟ್ಟಿ ಅವರು ಬಸಪ್ಪ ಮತ್ತು ಬಸಮ್ಮ ಜೋಗತಿಯಾಗಿ ಎರಡು ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಈ ಪಾತ್ರಕ್ಕಾಗಿ ಶ್ರೀನಗರ ಕಿಟ್ಟಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಮಂಜಮ್ಮ ಜೋಗತಿ ಅವರನ್ನು ಸಂಪರ್ಕಿಸಿ ಜೋಗತಿಯರ ನಡೆ-ನುಡಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡ ಸಿನಿಮಾಗೆ ಬೆಳಗ್ಗೆ 9.30ಕ್ಕೆ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಶೀಘ್ರದಲ್ಲೇ ‘ವೇಷಗಳು’ ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ. ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಮತ್ತು ಮೈಸೂರಲ್ಲಿ ಚಿತ್ರೀಕರಣ ನಡೆಯಲಿದೆ. ಸಿನಿಮಾದಲ್ಲಿ ನಟಿಸಲಿರುವ ಇತರೆ ಕಲಾವಿದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ. ಕೌಶಿಕ್ ಹರ್ಷ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ರಾಜ್ ಗುರು ದತ್ತರಾಜ್ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅಕ್ಷಯ್ ಪಿ. ರಾವ್ ಅವರು ಸಂಕಲನ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




