ಹೊಂಬಾಳೆ ಫಿಲಮ್ಸ್ನ ‘ಮಹಾವತಾರ: ನರಸಿಂಹ’ ಟ್ರೈಲರ್ ಬಿಡುಗಡೆ, ಹೇಗಿದೆ?
Hombale Films: ಹೊಂಬಾಳೆ ಫಿಲಮ್ಸ್ ಪ್ರಸ್ತುತ ಪಡಿಸುತ್ತಿರುವ ‘ಮಹಾವತಾರ್’ ಯೂನಿವರ್ಸ್ನ ಏಳು ಸಿನಿಮಾಗಳಲ್ಲಿ ಮೊದಲ ಸಿನಿಮಾ ಆಗಿರುವ ‘ಮಹಾವತಾರ್: ನರಸಿಂಹ’ ಸಿನಿಮಾದ ಟ್ರೈಲರ್ ಇಂದು (ಜುಲೈ 09) ಬಿಡುಗಡೆ ಆಗಿದೆ. ಕ್ಲೀಮ್ ಪ್ರೊಡಕ್ಷನ್ಸ್ ಈ ಸಿನಿಮಾ ಅನ್ನು ನಿರ್ಮಾಣ ಮಾಡಿದ್ದು, ಹೊಂಬಾಳೆ ಫಿಲಮ್ಸ್ ಪ್ರಸ್ತುತ ಪಡಿಸುತ್ತಿದೆ.

ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ ಹೊಂಬಾಳೆ ಫಿಲಂಸ್ (Hombale Films) ಪ್ರಸ್ತುತಪಡಿಸಿರುವ “ಮಹಾವತಾರ್ ನರಸಿಂಹ” ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಹೊಂಬಾಳೆ ಪ್ರಸ್ತುತ ಪಡಿಸುತ್ತಿರುವ ‘ಮಹಾವತಾರ’ ಸರಣಿಯ ಮೊದಲ ಸಿನಿಮಾ ಇದಾಗಿದ್ದು, ಅನಿಮೇಷನ್ ಮೂಲಕ ವಿಷ್ಣುವಿನ ವಿವಿಧ ಅವತಾರಗಳ ಕತೆಯನ್ನು ಸಿನಿಮಾ ಕತೆಯಾಗಿ ಹೇಳುವ ಸಾಹಸಕ್ಕೆ ಹೊಂಬಾಳೆ ಕೈ ಜೋಡಿಸಿದೆ. ‘ಮಹಾವತಾರ: ನರಸಿಂಹ’ ಸಿನಿಮಾ ಈ ಮಹಾವತಾರ ಯೂನಿವರ್ಸ್ನ ಮೊದಲ ಸಿನಿಮಾ ಆಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
‘ಮಹಾವತಾರ: ನರಸಿಂಹ’ ಸಿನಿಮಾ, ಅನಿಮೇಷನ್ ಸಿನಿಮಾ ಆಗಿದ್ದು, ವಿಷ್ಣುವಿನ ನರಸಿಂಹ ಅವತಾರದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮಹಾವಿಷ್ಣು, ನರಸಿಂಹನ ಅವತಾರ ಎತ್ತಿ ಹಿರಣ್ಯಕಶ್ಯಪುವಿನ ವಧೆ ಮಾಡುವ ಕತೆಯನ್ನು ಅನಿಮೇಷನ್ ತಂತ್ರಜ್ಞಾನ ಬಳಸಿ ಸಿನಿಮಾ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಅನಿಮೇಷನ್ ಭಾರಿ ಅದ್ಭುತ ಎನ್ನುವಂತಿಲ್ಲದಿದ್ದರೂ, ಸಾಧಾರಣವಾಗಿಯಂತೂ ಇದೆ. ‘ಚೋಟಾ ಭೀಮ್’ ಅನಿಮೇಷನ್ ಗುಣಮಟ್ಟವನ್ನು ನೆನಪಿಸುವಂತಿದೆ ‘ಮಹಾವತಾರ: ನರಸಿಂಹ’ ಸಿನಿಮಾದ ಅನಿಮೇಷನ್ ಗುಣಮಟ್ಟ.
‘ಮಹಾವತಾರ: ನರಸಿಂಹ’ ಸಿನಿಮಾವನ್ನು ಅಶ್ವಿಕ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ನಿರ್ಮಾಪಕಿ ಶಿಲ್ಪಾ, ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ಮಾಪಕಿ, ‘ಐದು ವರ್ಷದ ಅವಿರತ ಪ್ರಯತ್ನದ ಬಳಿಕ, ನರಸಿಂಹ ಮತ್ತು ವರಾಹರ ದೈವಿಕ ಕಥೆಯನ್ನು ವಿಶ್ವದ ಮುಂದೆ ತರಲು ಸಜ್ಜಾಗಿದ್ದೇವೆ. ಪ್ರತಿಯೊಂದು ಕ್ಷಣ, ಪ್ರತಿಯೊಂದು ದೃಶ್ಯ, ಪ್ರತಿಯೊಂದು ಉಸಿರೂ ಈ ಕಥೆಯ ಆತ್ಮವಾಗಿದೆ. ನಿಮ್ಮ ಮನಸ್ಸು ತಲುಪುವ ದೃಶ್ಯ ವೈಭವಕ್ಕಾಗಿ ಸಿದ್ಧರಾಗಿ. ನರಸಿಂಹನ ಗರ್ಜನೆ ಬರಲಿದೆ” ಎಂದಿದ್ದಾರೆ.
ಮಹಾವತಾರ: ನರಸಿಂಹ ಟ್ರೈಲರ್
“ಮಹಾವತಾರ್” ಯೂನಿವರ್ಸ್
“ಮಹಾವತಾರ್ ನರಸಿಂಹ” ಸಿನಿಮಾ ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಬರಲಿರುವ ಸಿನಿಮಾ ಆಗಿರಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ‘ಮಹಾವತಾರ್’ ಯೂನಿವರ್ಸ್ನ ಏಳು ಸಿನಿಮಾಗಳು ತೆರೆಗೆ ಬರಲಿದೆ. ಸಿನಿಮಾಗಳ ಟೈಂಲೈನ್ ಹೀಗಿದೆ. “ಮಹಾವತಾರ್ ನರಸಿಂಹ” (2025), “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಮೂಡಿಬರಲಿವೆ. ಜುಲೈ 25ರಂದು “ಮಹಾವತಾರ್ ನರಸಿಂಹ” ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Wed, 9 July 25




