ಅತ್ಯಾಚಾರ ಪ್ರಕರಣ ರದ್ದು ಕೋರಿ ಮಡೆನೂರು ಮನು ಅರ್ಜಿ
Madenuru Manu:ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ನಟ ಮಡೆನೂರು ಮನು. ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಒಪ್ಪಿತ ಲೈಂಗಿಕ ಸಂಪರ್ಕವನ್ನು ಈಗ ಅತ್ಯಾಚಾರ ಎಂದು ದೂರು ನೀಡಲಾಗಿದೆ ಎಂದು ಮಡೆನೂರು ಮನು ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟ ಮಡೆನೂರು ಮನು (Madenuru Manu), ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದು, ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೈಕೋರ್ಟ್ನಲ್ಲಿ ಮಡೆನೂರು ಮನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಮನು ಪರ ವಕೀಲರು, ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿ, ಈಗ ಅತ್ಯಾಚಾರ ಆರೋಪ ಮಾಡಲಾಗಿದೆ ಎಂದು ವಾದಿಸಿದ್ದಾರೆ.
ಮಡೆನೂರು ಮನು ಮತ್ತು ದೂರುದಾರ ಮಹಿಳೆ ಒಂದೇ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಒಂದೇ ಬಾಡಿಗೆ ಮನೆಯಲ್ಲಿ ಕೆಲ ವರ್ಷಗಳ ಕಾಲ ಬಾಡಿಗೆಗೆ ಸಹ ಇದ್ದರು. ಇಬ್ಬರ ನಡುವೆ ಒಪ್ಪಿತ ಲೈಂಗಿಕ ಸಂಪರ್ಕ ನಡೆದಿದೆ. ಆದರೆ ಮಡೆನೂರು ಮನು ವಿರುದ್ಧ ದ್ವೇಷ ಕಾರಣಕ್ಕೆ ಅವರ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ, 2022 ರಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ 2025 ರಲ್ಲಿ ದೂರು ನೀಡಲಾಗಿದೆ. ಎಂದು ಮನು ಪರ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿದೆ.
ಮಡೆನೂರು ಮನು ಜೊತೆಗೆ ರಿಯಾಲಿಟಿ ಶೋನಲ್ಲಿ ಕೆಲಸ ಮಾಡಿದ್ದ ಯುವತಿಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಈ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಮನು ಅನ್ನು ಬಂಧಿಸಿದ್ದರು. ಕೆಲ ದಿನ ಪೊಲೀಸರ ವಶದಲ್ಲಿದ್ದ ಮನು ಆ ನಂತರ ಜಾಮೀನು ಪಡೆದು ಹೊರಬಂದರು.
ಇದನ್ನೂ ಓದಿ:ಮಡೆನೂರು ಮನುಗೆ ಬಿಗ್ ರಿಲೀಫ್; ಕನ್ನಡ ಚಿತ್ರರಂಗದಲ್ಲಿ ಹೇರಿದ್ದ ಬ್ಯಾನ್ ತೆರವು
ಅದೇ ಸಂದರ್ಭದಲ್ಲಿ ಮನು ಅವರದ್ದು ಎನ್ನಲಾದ ಆಡಿಯೋ ಅನ್ನು ಸಂತ್ರಸ್ತ ಮಹಿಳೆ ಬಿಡುಗಡೆ ಮಾಡಿದರು. ಆಡಿಯೋನಲ್ಲಿ ಮಡೆನೂರು ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಇನ್ನೂ ಕೆಲವು ನಟರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ರೆಕಾರ್ಡ್ ಆಗಿತ್ತು. ಇದರಿಂದಾಗಿ ಮನು ವಿರುದ್ಧ ನಿಷೇಧ ಸಹ ಹೇರಲಾಗಿತ್ತು. ಆದರೆ ಇತ್ತೀಚೆಗಷ್ಟೆ ಮನು ಬೇಷರತ್ ಕ್ಷಮೆ ಯಾಚಿಸಿದ ಕಾರಣಕ್ಕೆ ನಿಷೇಧವನ್ನು ತೆರವು ಮಾಡಲಾಯ್ತು. ಆ ಬಳಿಕ ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಅವರುಗಳ ಬಳಿ ವಿಡಿಯೋ ಮೂಲಕ ಕ್ಷಮೆ ಕೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




