ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್‌ಕುಮಾರ್
ಗುರುಪೂರ್ಣಿಮೆಯಂದು ರಾಜ್‌ಕುಮಾರ್ ಅವರ ರಾಯರ ಭಕ್ತಿಯನ್ನು ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತ. ರಾಘವೇಂದ್ರ ಸ್ವಾಮಿಗಳ ಮೇಲಿನ ಅವರ ಅಪಾರ ನಂಬಿಕೆ 'ಮಂತ್ರಾಲಯ ಮಹಾತ್ಮೆ' ಚಿತ್ರದ ಮೂಲಕ ವ್ಯಕ್ತವಾಗಿದೆ. ಜಗ್ಗೇಶ್ ಅವರೊಂದಿಗಿನ ಅವರ ಚರ್ಚೆಗಳು ಕೂಡ ರಾಯರ ಭಕ್ತಿಯನ್ನು ಸೂಚಿಸುತ್ತವೆ. ಆ ಬಗ್ಗೆ ಇಲ್ಲಿದೆ ವಿವರ.

ಇಂದು (ಜುಲೈ 10) ಗುರಪೂರ್ಣಿಮೆ. ಇದರ ಜೊತೆಗೆ ರಾಯರ ದಿನವೂ ಹೌದು. ಎರಡೂ ವಿಶೇಷತೆಗಳು ಒಂದೇ ದಿನ ಬರೋದು ಅಪರೂಪ. ಈ ದಿನದಂದು ರಾಜ್‌ಕುಮಾರ್ ಅವರ ರಾಯರ ಭಕ್ತಿಯನ್ನು ನೆನಪಿಸಿಕೊಳ್ಳಲೇಬೇಕು. ರಾಜ್‌ಕುಮಾರ್ (Rajkumar) ಅವರು ರಾಘವೇಂದ್ರ ಸ್ವಾಮಿಗಳನ್ನು ಅಪರಾವಾಗಿ ನಂಬುತ್ತಿದ್ದರು. ಇದಕ್ಕಾಗಿ ಅವರು ರಾಯರ ಮೇಲೆ ಸಿನಿಮಾವನ್ನೇ ಮಾಡಿದ್ದರು. ರಾಘವೇಂದ್ರ ಸ್ವಾಮಿಗಳ ಬಗ್ಗೆ ಹಾಡುಗಳನ್ನು ಕೂಡ ಹಾಡಿದ್ದಾರೆ.
ಜಗ್ಗೇಶ್ ಸಿಕ್ಕಾಗ..
ಜಗ್ಗೇಶ್ ಅವರು ಕೂಡ ರಾಯರ ಭಕ್ತರು. ರಾಜ್‌ಕುಮಾರ್ ಹಾಗೂ ಜಗ್ಗೇಶ್ ಸಿಕ್ಕಾಗ ಇದೇ ರೀತಿಯ ಚರ್ಚೆಗಳೇ ನಡೆಯುತ್ತಿದ್ದವು. ‘ಅಧ್ಯಾತ್ಮದ ಬಗ್ಗೆ ರಾಜ್ಕುಮಾರ್ಗೆ ಅಪಾರ ಆಸಕ್ತಿ ಇತ್ತು. ನಾನು ಹಾಗೂ ರಾಜ್‌ಕುಮಾರ್ ಸಿಕ್ಕಾಗ ರಾಘವೇಂದ್ರ ಸ್ವಾಮಿಗಳ ಬಗ್ಗೆಯೇ ಮಾತನಾಡುತ್ತಿದ್ದೆವು. ರಾಯರ ಜೊತೆಗೆ ಅವರು ಬೆರೆತು ಹೋಗಿದ್ದರು. ಅವರು ಪರಮ ದೈವ ಭಕ್ತ ಆಗಿದ್ದರು’ ಎಂದು ಜಗ್ಗೇಶ್ ಹೇಳಿದ್ದರು.
ಮಗನಿಗೂ ಹೆಸರು..
ರಾಜ್‌ಕುಮಾರ್ ತಮಗೆ ಜನಿಸಿದ ಮೊದಲ ಮಗನಿಗೆ ರಾಯರ ಹೆಸರನ್ನೇ ಇಟ್ಟಿದ್ದಾರೆ. ರಾಘವೇಂದ್ರ ಎಂಬುದು ರಾಜ್‌ಕುಮಾರ್ ಅವರ ಹಿರಿಯ ಮಗನ ಹೆಸರು. ರಾಜ್ಕುಮಾರ್ಗೆ ರಾಯರ ಮೇಲೆ ಎಷ್ಟು ನಂಬಿಕೆ ಇತ್ತು ಎಂದು ಈ ವಿಚಾರ ಸಾರುತ್ತದೆ.
ಸಿನಿಮಾ ಮಾಡಲು ಆಸಕ್ತಿ..
1966ರಲ್ಲಿ ‘ಮಂತ್ರಾಲಯ ಮಹಾತ್ಮೆ’ ಹೆಸರಿನ ಸಿನಿಮಾ ಬಂತು. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಈ ಪಾತ್ರವನ್ನು ಅಕ್ಷರಶಃ ಜೀವಿಸಿದ್ದರು. ಈ ಸಿನಿಮಾ ಮಾಡಲು ಸ್ಫೂರ್ತಿ ನೀಡಿದ್ದು ಕೂಡ ರಾಯರೇ.
ಇದನ್ನೂ ಓದಿ: 666 ಆಪರೇಷನ್ ಡ್ರೀಮ್ ಥಿಯೇಟರ್: ಶಿವರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ರಾಜ್‌ಕುಮಾರ್ ಅವರು ಮಂತ್ರಾಲಯಕ್ಕೆ ತೆರಳಿ ರಾಯರ ಗುಡಿಯಲ್ಲೇ ಮಲಗಿದ್ದರು. ಬೆಳಿಗ್ಗೆ ಎದ್ದ ತಕ್ಷಣ ಅವರಿಗೆ ಏನನ್ನಿಸಿತೋ ಏನೋ, ನೇರವಾಗಿ ಎದ್ದು, ದೇವರಿಗೆ ನಮಿಸಿ ಬೆಂಗಳೂರಿಗೆ ಬಂದರು. ಅವರು ನಿರ್ಮಾಪಕರ ಕರೆದು ಈ ರೀತಿಯ ಸಿನಿಮಾನ ತಾವು ಮಾಡಬೇಕು ಎಂದು ಬೇಡಿಕೆ ಇಟ್ಟರು. ಆ ಬಳಿಕ ಸಿನಿಮಾ ಆಯಿತು. ‘ಹಾಲಲ್ಲಾದರೂ ಹಾಕು..’ ಹಾಡನ್ನು ರಾಜ್‌ಕುಮಾರ್ ಅವರು ಶ್ರದ್ಧೆಯಿಂದ ಹಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Thu, 10 July 25








