666 ಆಪರೇಷನ್ ಡ್ರೀಮ್ ಥಿಯೇಟರ್: ಶಿವರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ ಅವರು ಪ್ರಮುಖ ಪಾತಗಳನ್ನು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾಗೆ ಚಿತ್ರೀಕರಣ ಪ್ರಾರಂಭ ಆಗಲಿದೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ.

ಡಾಲಿ ಧನಂಜಯ, ಶಿವರಾಜ್‌ಕುಮಾರ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ (666 Operation Dream Theatre) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಿಂದ ಇತ್ತೀಚೆಗಷ್ಟೇ ಡಾಲಿ ಧನಂಜಯ ಅವರ ಎರಡು ಲುಕ್ ಬಿಡುಗಡೆ ಮಾಡಲಾಗಿತ್ತು. ಆ ಪೋಸ್ಟರ್ಗಳನ್ನು ನೋಡಿದ ಪ್ರೇಕ್ಷಕರ ನಿರೀಕ್ಷೆ ಜಾಸ್ತಿ ಆಗಿತ್ತು. ಈಗ ಈ ಸಿನಿಮಾದಿಂದ ಶಿವರಾಜ್‌ಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಶಿವರಾಜ್‌ಕುಮಾರ್ (Shivarajkumar) ಅವರು ಹೊಸ ಗೆಟಪ್ ಧರಿಸಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಈ ಮೂಲಕ ಕಾಣಿಸಿದೆ.
‘ಡ್ರೀಮ್ ಥಿಯೇಟರ್‌ಗೆ ಒಬ್ನೇ ರಾಜ’ ಎಂಬ ಕ್ಯಾಪ್ಷನ್ನೊಂದಿಗೆ ಶಿವರಾಜ್‌ಕುಮಾರ್ ಅವರ ಈ ಹೊಸ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಶಿವಣ್ಣ ಅವರ ಈ ಗೆಟಪ್ ರೆಟ್ರೋ ಶೈಲಿಯಲ್ಲಿದೆ. ಸೂಟ್ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು, ತೀಕ್ಷ್ಣ ನೋಟ ಬೀರುತ್ತಾ ಅವರು ಹೆಜ್ಜೆ ಹಾಕುತ್ತಿರುವ ಪೋಸ್ ಈ ಪೋಸ್ಟರ್ನಲ್ಲಿದೆ.
ಈ ಲುಕ್ ನೋಡುತ್ತಿದ್ದರೆ ಡಾ. ರಾಜ್ಕುಮಾರ್ ಅವರ ಸ್ಪೈ ಸಿನಿಮಾಗಳು ನೆನಪಾಗುತ್ತವೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಸ್ಪೈ ಪಾತ್ರ ಮಾಡುತ್ತಿದ್ದಾರೆ ಎಂಬ ಸುಳಿವನ್ನು ಈ ಫೊಸ್ಟರ್ ಮೂಲಕ ನೀಡಲಾಗಿದೆ. ಶಿವಣ್ಣ ಪ್ರತಿ ಚಿತ್ರದಲ್ಲೂ ಹೊಸತನದ ಪಾತ್ರಗಳನ್ನು ಪ್ರಯತ್ನಿಸುತ್ತಾರೆ. ಆ ಸಾಲಿಗೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಕೂಡ ಸೇರ್ಪಡೆ ಆಗುತ್ತಿದೆ.
View this post on Instagram
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರವು ಪ್ರೇಕ್ಷಕರಿಗೆ ಮರೆಯಲಾಗದ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾದಲ್ಲಿ ರೆಟ್ರೋ ಕಥೆ ಇರಲಿದೆ. ಹೇಮಂತ್ ಎಂ. ರಾವ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಡಾ. ವೈಶಾಕ್ ಜೆ. ಗೌಡ ಅವರು ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಶಿವರಾಜ್‌ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ಈ ಸಿನಿಮಾಗೆ ಚರಣ್ ರಾಜ್ ಅವರು ಸಂಗೀತ ನೀಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಶ್ವಾಸ್ ಕಶ್ಯಪ್ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ ಮತ್ತು ಶಿವರಾಜ್‌ಕುಮಾರ್ ಮಾತ್ರವಲ್ಲದೇ ಇನ್ನೂ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ಚಿತ್ರತಂಡ ನೀಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




