‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಿಂದ ಧನಂಜಯ ಫಸ್ಟ್ ಲುಕ್ ರಿಲೀಸ್
ಶೀರ್ಷಿಕೆ ಮೂಲಕ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸಾಕಷ್ಟು ಕೌತುಕ ಮೂಡಿಸಿದೆ. ಈಗ ನಟ ಡಾಲಿ ಧನಂಜಯ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಇದರಿಂದ ನಿರೀಕ್ಷೆ ಹೆಚ್ಚಿದೆ. ವೈಶಾಕ್ ಜೆ. ಗೌಡ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಹೇಮಂತ್ ಎಂ. ರಾವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ (666 Operation Dream Theatre) ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ ಅವರ ನಟಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಶೂಟಿಂಗ್ ಶುರು ಮಾಡಿದ್ದ ಚಿತ್ರತಂಡವೀಗ ಡಾಲಿ ಧನಂಜಯ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದೆ. ಮಾಸ್ ಮತ್ತು ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ಹೊಸ ಗೆಟಪ್ ಧರಿಸುತ್ತಿದ್ದಾರೆ. ರೆಟ್ರೋ ಲುಕ್ನಲ್ಲಿ ಧನಂಜಯ (Daali Dhananjaya) ಅವರು ರಂಜಿಸಲಿದ್ದಾರೆ. ಫಸ್ಟ್ ಲುಕ್ ನೋಡಿದರೆ ಹಳೇ ಕಾಲ ನೆನಪಾಗುತ್ತದೆ. ಇದರಿಂದಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಎರಡನೇ ಲುಕ್ನ ಪೋಸ್ಟರ್‌ನಲ್ಲಿ 999 ಸರಣಿಯ ಸಿನಿಮಾಗಳ ಉಲ್ಲೇಖ ಇದೆ.
ಧನಂಜಯ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ‘ಒಬ್ಬ ನಟ ದೊಡ್ಡ ದೃಷ್ಟಿಕೋನ ಹಾಗೂ ಸಿನಿಮಾದ ಬಗ್ಗೆ ಉತ್ಸಾಹ ಹೊಂದಿರುವ ನಿರ್ದೇಶಕರನ್ನು ಕಂಡುಕೊಂಡಾಗ ಮಗುವಿನಂತೆ ನಟರು ನಟನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಆ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾನೆ. ತಂಡವು ತಮ್ಮ ಹೃದಯ ಮತ್ತು ಆತ್ಮವನ್ನು ಒಂದು ಯೋಜನೆಗೆ ಸೇರಿಸಿದಾಗ ಆ ನಟ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾನೆ’ ಎಂದಿದ್ದಾರೆ.
‘ಹೇಮಂತ್ ಎಂ. ರಾವ್, ನಿರ್ಮಾಪಕ ವೈಶಾಕ್ ಜೆ. ಗೌಡ, ಸಂಗೀತ ನಿರ್ದೇಶಕ ಚರಣ್ ರಾಜ್, ಕ್ಯಾಮೆರಾ ಮ್ಯಾನ್ ಅದ್ವೈತ ಗುರುಮೂರ್ತಿ ಅವರಂತಹ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. 666 ಆಪರೇಷನ್ ಡ್ರೀಮ್ ಥಿಯೇಟರ್, ಪ್ರೇಕ್ಷಕರನ್ನು ಆರಂಭದಿಂದಲೇ ಹಿಡಿದಿಟ್ಟುಕೊಳ್ಳುವ ಸಿನಿಮಾ. ನಾನು ಖಚಿತವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಈ ಚಿತ್ರವು ವಿಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ನಾವು ಹಲವಾರು ಅಚ್ಚರಿಗಳನ್ನು ಜೋಡಿಸಿದ್ದೇವೆ’ ಎಂದಿದ್ದಾರೆ ಧನಂಜಯ.
ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ಮಿಸಲಾಗುತ್ತಿದೆ. ಹೇಮಂತ್ ಎಂ. ರಾವ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮುಂದಿನ ದಿನಗಳಲ್ಲಿ ತಂಡವು ಚಿತ್ರದ ತಾರಾಬಳಗ ಮತ್ತು ಪ್ರಕಾರದ ಕುರಿತು ಅಭಿಮಾನಿಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದೆ.
ಇದನ್ನೂ ಓದಿ: ನಾನು ಡಾಲಿ ಧನಂಜಯ್ ಅಭಿಮಾನಿ ಎಂದ ಸಿದ್ಧಾರ್ಥ್, ಕೊಟ್ಟರು ಕಾರಣ
ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅವರ ಲುಕ್ ಬಿಡುಗಡೆಯಾಗುವ ಬಗ್ಗೆ ಈಗಾಗಲೇ ಮಾತುಗಳು ಕೇಳಿಬರುತ್ತಿವೆ. 666 ಆಪರೇಷನ್ ಡ್ರೀಮ್ ಥಿಯೇಟರ್‌ನಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜುಲೈನಲ್ಲಿ ಅವರ ಪಾತ್ರದ ಚಿತ್ರೀಕರಣ ಪ್ರಾರಂಭ ಆಗುವ ನಿರೀಕ್ಷೆಯಿದೆ. ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Fri, 4 July 25




