‘ಟೋಬಿ’ ಕತೆ ಮೊದಲು ಹೇಳಿದ್ದು ಪುನೀತ್ ರಾಜ್​ಕುಮಾರ್​ಗೆ, ಆದರೆ ಅಪ್ಪು ನಟಿಸಲಿಲ್ಲ ಏಕೆ?

|

Updated on: Aug 04, 2023 | 9:11 PM

Toby-Puneeth Rajkumar: ರಾಜ್ ಬಿ ಶೆಟ್ಟಿ ನಟನೆಯ 'ಟೋಬಿ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ಕತೆಯನ್ನು ಮೊದಲು ಹೇಳಿದ್ದು ಪುನೀತ್ ರಾಜ್​ಕುಮಾರ್ ಅವರಿಗೆ, ಆದರೆ ಅವರು ನಟಿಸಲು ನಿರಾಕರಿಸಿದ್ದರು! ಕಾರಣ?

ಟೋಬಿ ಕತೆ ಮೊದಲು ಹೇಳಿದ್ದು ಪುನೀತ್ ರಾಜ್​ಕುಮಾರ್​ಗೆ, ಆದರೆ ಅಪ್ಪು ನಟಿಸಲಿಲ್ಲ ಏಕೆ?
ಟೋಬಿ-ಅಪ್ಪು
Follow us on

ರಾಜ್ ಬಿ ಶೆಟ್ಟಿ (Raj B Shetty) ಚಿತ್ರಕತೆ ಬರೆದು ನಟಿಸಿರುವ ‘ಟೋಬಿ‘ (Toby) ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 04) ಬಿಡುಗಡೆ ಆಗಿದೆ. ಸಿನಿಮಾ ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ. ‘ಟೋಬಿ’ ಕಾಲ್ಪನಿಕ ಕತೆಯಲ್ಲ, ಇದು ನಿಜ ವ್ಯಕ್ತಿಯೊಬ್ಬನ ಕತೆ. ಆತ ಬದುಕಿದ್ದ ರೀತಿ, ಪರಿಸರ, ಅವನ ವರ್ತನೆ ಇತ್ಯಾದಿಗಳನ್ನು ಆಧರಿಸಿ ಅದಕ್ಕೆ ಕತೆಯ ರೂಪ ನೀಡಿದ್ದು ಕಥೆಗಾರ ಟಿಕೆ ದಯಾನಂದ. ಅದನ್ನು ಚಿತ್ರಕತೆಯಾಗಿಸಿದ್ದು ರಾಜ್ ಬಿ ಶೆಟ್ಟಿ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಥೆಗಾರ ಟಿಕೆ ದಯಾನಂದ, ಟೋಬಿ ಕತೆಯನ್ನು ಮೊದಲಿಗೆ ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಹೇಳಿದ್ದಾಗಿ ಹೇಳಿದರು.

‘ಟೋಬಿ’ ಕತೆ ಬರೆದ ಬಳಿಕ ಅದು ನನ್ನನ್ನು ಬಹುವಾಗಿ ಕಾಡಲಾರಂಭಿಸಿತು. ಈ ಕತೆಯನ್ನು ಸಿನಿಮಾ ಮಾದರಿಯಲ್ಲಿ ಹೇಳಲು ಸಾಧ್ಯವಾಗುತ್ತದೆಯೇ ಎನಿಸಿ ಅದನ್ನು ಸಾರಾಂಶದ ರೀತಿ, ದೃಶ್ಯ, ಸನ್ನಿವೇಶಗಳ ಮಾದರಿಯಲ್ಲಿ ಬರೆದುಕೊಂಡೆ. ‘ಗ್ರಾಮಾಯಣ’ ಸಿನಿಮಾದ ನಿರ್ದೇಶಕ ದೇವನೂರು ಚಂದ್ರು ಹಾಗೂ ನನ್ನನ್ನು ಒಮ್ಮೆ ಪುನೀತ್ ರಾಜ್​ಕುಮಾರ್ ಅವರು ತಮ್ಮ ಕಚೇರಿಗೆ ಕರೆದರು. ಕತೆಯ ಬಗ್ಗೆ ಮಾತನಾಡುವಾಗ ನಾನು ಅಲ್ಲಿ ಮೊದಲ ಬಾರಿಗೆ ‘ಟೋಬಿ’ ಕತೆಯನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಅವರಿಗೆ ನರೇಟ್ ಮಾಡಿದೆ ಆಗ ಅಲ್ಲಿ ಅಶ್ವಿನಿ ಮ್ಯಾಡಂ ಅವರೂ ಸಹ ಇದ್ದರು” ಎಂದು ದಯಾನಂದ್ ನೆನಪು ಮಾಡಿಕೊಂಡರು.

ಇದನ್ನೂ ಓದಿ:Toby Trailer launch Live: ಟೋಬಿ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಲೈವ್ ಇಲ್ಲಿ ನೋಡಿ

”ಕತೆ ಕೇಳಿ ಇಷ್ಟಪಟ್ಟ ಪುನೀತ್ ರಾಜ್​ಕುಮಾರ್, ‘ಕತೆ ಬಹಳ ಚೆನ್ನಾಗಿದೆ. ಎಮೋಷನಲ್​ ಆಗಿ ಕಿತ್ತು ತಿನ್ನುವ ಕತೆ. ಮಲಯಾಳಂ ಸಿನಿಮಾಗಳ ಫೀಲ್ ಈ ಸಿನಿಮಾದಲ್ಲಿದೆ. ಆದರೆ ನಾನೀಗ ಕೌಟುಂಬಿಕ ಹಾಗೂ ಯುವ ಪ್ರೇಕ್ಷಕರನ್ನು ಸೆಳೆಯುವ ನಟ ಎಂಬ ಗುರುತು ಇದೆ. ಹೀಗಿದ್ದಾಗ ಈ ರೀತಿಯ ವಿಕ್ಷಿಪ್ತ ವ್ಯಕ್ತಿತ್ವದ ವ್ಯಕ್ತಿಯ ಮಾತ್ರವನ್ನು ಮಾಡಿದರೆ ಜನ ಸ್ವೀಕರಿಸುತ್ತಾರಾ ಎಂಬ ಅನುಮಾನವಿದೆ. ನನ್ನ ವೃತ್ತಿಯ ಈ ಹಂತದಲ್ಲಿ ಈ ರೀತಿಯ ಪ್ರಯೋಗ ಮಾಡುವುದು ತುಸು ಕಷ್ಟ’ ಎಂದರು ಅದಕ್ಕೆ ಅಶ್ವಿನಿ ಮ್ಯಾಡಂ ಅವರೇ ಸಾಕ್ಷಿ” ಎಂದರು ದಯಾನಂದ.

”ಅದಾದ ಬಳಿಕ ಕತೆಯನ್ನು ರಿಷಬ್ ಶೆಟ್ಟರಿಗೆ ಹೇಳಿದೆ. ಅವರು ಸಿನಿಮಾ ಮಾಡಲು ಒಪ್ಪಿಕೊಂಡರು. ಆದರೆ ಅದಾದ ಬಳಿಕ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆದ ಕಾರಣ, ಇದು ಮುಂದೆ ಹೋಗುತ್ತಿಲ್ಲ ಎನಿಸಿತು. ಅದೇ ಸಮಯದಲ್ಲಿ ರಾಜ್ ಶೆಟ್ರು ಕತೆ ಕೇಳಿದರು. ಆಗ ಹೋಟೆಲ್ ಒಂದರಲ್ಲಿ ಕೂತು ಕತೆ ಹೇಳಿದೆ. ರಾಜ್ ಅವರು ಕತೆಯನ್ನು ಒಪ್ಪಿಕೊಂಡು ಈಗ ಸಿನಿಮಾ ಆಗಿದೆ” ಎಂದರು ದಯಾನಂದ.

ಟೋಬಿ ಬಹಳ ವಿಕ್ಷಿಪ್ತ ವ್ಯಕ್ತಿ, ಅವನು ಬದುಕಿದ ರೀತಿಯೇ ಬಹಳ ವಿಚಿತ್ರ. ಅವನು ಹೀರೋ ಅಲ್ಲ ಅವನು ವಿಲನ್ ಸಹ ಅಲ್ಲ ಬಹಳ ವಿಚಿತ್ರವಾದ ವ್ಯಕ್ತಿ. ಈ ಕತೆಯನ್ನು ನಾಲ್ಕು ವರ್ಷದ ಹಿಂದೆ ಬರೆದಿದ್ದೆ, ನನ್ನನ್ನು ಅತಿಯಾಗಿ ಕಾಡಿದ ಪಾತ್ರ ಮತ್ತು ಕತೆ ಎಂದರೆ ಟೋಬಿ. ಈಗ ಸಿನಿಮಾ ಬಿಡುಗಡೆ ಆದ ದಿನ ಆ ಟೋಬಿಯಿಂದ ನಾನು ಬಿಡುಗಡೆ ಪಡೆಯುತ್ತೀನಿ ಎಂದು ಭಾವಿಸುತ್ತೇನೆ, ಆದರೆ ಸಿನಿಮಾ ನೋಡುವ ಪ್ರೇಕ್ಷಕರಿಗೆ ಒಂದು ಎಚ್ಚರಿಕೆ ಕೊಡುತ್ತೇನೆ, ‘ಟೋಬಿ’ ನಿಮ್ಮನ್ನು ಬಹುವಾಗಿ ಕಾಡಲಿದ್ದಾನೆ” ಎಂದಿದ್ದಾರೆ ದಯಾನಂದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ