‘ನಂಬಿಕೆ ಸುಳ್ಳಾಗಿಸಿದ್ದಕ್ಕೆ ಧನ್ಯವಾದ’: ‘ಹಾಸ್ಟೆಲ್ ಹುಡುಗರಿಗೆ’ ಪತ್ರ ಬರೆದ ರಾಜ್ ಬಿ ಶೆಟ್ಟಿ

Hostel Hudugaru Bekagiddare: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡಕ್ಕೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಪತ್ರವೊಂದನ್ನು ಬರೆದಿದ್ದಾರೆ.

'ನಂಬಿಕೆ ಸುಳ್ಳಾಗಿಸಿದ್ದಕ್ಕೆ ಧನ್ಯವಾದ': 'ಹಾಸ್ಟೆಲ್ ಹುಡುಗರಿಗೆ' ಪತ್ರ ಬರೆದ ರಾಜ್ ಬಿ ಶೆಟ್ಟಿ
ಹಾಸ್ಟೆಲ್ ಹುಡುಗರು
Follow us
|

Updated on: Jul 21, 2023 | 8:47 PM

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel Hudugaru Bekagiddare) ಸಿನಿಮಾ ನಿರೀಕ್ಷೆಯಂತೆಯೇ ಮೊದಲ ದಿನ ಪ್ರೇಕ್ಷಕರ ಮನಗೆದ್ದಿದೆ. ಹೊಸಬರ ಸಿನಿಮಾಕ್ಕೆ ಪ್ರೇಕ್ಷಕರು ಬರುವುದಿಲ್ಲ ಎಂಬ ಸವಕಲು ಮಾತನ್ನು ಚಿತ್ರತಂಡ ತಮ್ಮ ಅಗಾಧ ಶ್ರಮ ಹಾಗೂ ಪರಿಶ್ರಮದಿಂದ ಸುಳ್ಳು ಮಾಡಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಕ್ಕೆ ಮೊದಲ ದಿನ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಟಾರ್ ನಟರ ಸಿನಿಮಾಗಳ ಮಾದರಿಯಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty), ‘ಹಾಸ್ಟೆಲ್ ಹುಡುಗರು’ ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.

”ಪ್ರೀತಿಯ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ, ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕನ್ನಡ ಪ್ರೇಕ್ಷಕರ ಕೊರತೆಯಿದೆ ಎಂಬ ಹತಾಶೆಯನ್ನು ಸತ್ಯವೆಂದು ನಂಬಿ ಕುಳಿತಿದ್ದೆವು ನಾವು. ಮೊದಲ ಬಾರಿಗೆ ನಮ್ಮ ನಂಬಿಕೆ ಸುಳ್ಳಾಗಿದ್ದಕ್ಕೆ ಅಪಾರ ಸಂತೋಷವಿದೆ. ಅದನ್ನು ಕೆಡವಿದ ನಿಮ್ಮ ತಂಡಕ್ಕೆ ನಮ್ಮ ಪ್ರಣಾಮಗಳು. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನುಗ್ಗಬೇಕಾದಲ್ಲಿ ನೂರಾರು ಕೋಟಿ ಬಜೆಟ್‌ನ ಅಗತ್ಯವಿದೆ, ಸ್ಟಾರ್ ನಟರ, ನಿರ್ದೇಶಕರ ಅನಿವಾರ್ಯತೆಯಿದೆ ಎಂಬೆಲ್ಲ ಸುಳ್ಳುಗಳನ್ನು ಸಮರ್ಥವಾಗಿ ನಿವಾಳಿಸಿ ಎಸೆದದ್ದಕ್ಕೆ ಧನ್ಯವಾದಗಳು” ಎಂದು ಪತ್ರದಲ್ಲಿ ಬರೆದಿದ್ದಾರೆ.

ಮುಂದುವರೆದು, ”ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ಇದು ಹುಚ್ಚು ಮನಸ್ಸಿನ ಅಭಿವ್ಯಕ್ತಿ. ಹತ್ತಾರು ಹುಡುಗರು ಗಂಭೀರವಾಗಿ ಮಾಡಿದ ತಮಾಷೆಯ ಸಿನಿಮಾ. ಜೊತೆಗೆ ಈ ಸಿನೆಮಾ ಮುಂದೆ ಬರುವ ಇನ್ನಷ್ಟು ಹುಚ್ಚು ಹುಡುಗರಿಗೆ ಧೈರ್ಯ. ಇಂಥ ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರೋದ್ಯಮಕ್ಕೆ ನಿಜವಾದ ಲಾಭ. ಕನಸುಗಳಿಗೆ ಬಂಡವಾಳದ ಭಯವಿರಬಾರದು, ಕನಸುಗಳಿಗೆ ಸಿದ್ದ ಸೂತ್ರಗಳ ಹೊರೆಯಿರಬಾರದು, ಕನಸುಗಳಿಗೆ ವ್ಯಾಪಾರದ ಹಂಗಿರಬಾರದು. ಕನಸುಗಳಿಗೆ ಪ್ರಾಮಾಣಿಕತೆ, ಹಸಿವು, ಧೈರ್ಯ, ಅಪಾರ ಹುಚ್ಚು, ಒಂದಷ್ಟು Practicality ಇಷ್ಟು ಜೊತೆಗಿದ್ದರೆ “ನೀವೂ” ಒಂದು ಸಿನಿಮಾ ಮಾಡಬಹುದು. ಇದನ್ನು ನಿರೂಪಿಸಿ ಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ ಜಯವಾಗಲಿ” ಎಂದು ಪ್ರೀತಿಯಿಂದ ರಾಜ್ ಬಿ ಶೆಟ್ಟಿ ಶುಭ ಕೋರಿದ್ದಾರೆ.

ಇದನ್ನೂ ಓದಿ:Hostel Hudugaru Bekagiddare: ಭಿನ್ನವಾಗಿದೆ ಬಾಯ್ಸ್​ ವರ್ಸಸ್​ ವಾರ್ಡನ್​ ಸನ್ನಿವೇಶ; ನಗಿಸುವುದೇ ಹಾಸ್ಟೆಲ್​ ಹುಡುಗರ ಮುಖ್ಯ ಉದ್ದೇಶ

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಬಹುತೇಕ ಹೊಸಬರೇ ಸೇರಿ ಮಾಡಿದ್ದಾರೆ. ಒಂದು ಹಾಸ್ಟೆಲ್​ಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳನ್ನೇ ಆಧರಿಸಿ ಮಾಡಿದ ಹಾಸ್ಯಮಿಶ್ರಿತ ಥ್ರಿಲ್ಲರ್ ಸಿನಿಮಾ ಇದು. ನಾಯಕ-ನಾಯಕಿ ಸಿದ್ಧಸೂತ್ರಕ್ಕೆ ಜೋತು ಬೀಳದೆ ಕತೆ, ಕತೆಯಲ್ಲಿನ ಘಟನಾವಳಿಗಷ್ಟೆ ಒತ್ತು ಕೊಟ್ಟು ಭಿನ್ನ ರೀತಿಯಲ್ಲಿ ನಿರ್ದೇಶನವನ್ನು ನಿತಿನ್ ಮಾಡಿದ್ದಾರೆ. ಸಿನಿಮಾದ ಭಿನ್ನತೆಯನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಕೋವಿಡ್ ಹಾಗೂ ಇತರ ಕಾರಣಗಳಿಂದ ಸುಮಾರು ಎರಡು ವರ್ಷ ಕಷ್ಟಪಟ್ಟು ಚಿತ್ರತಂಡ ಕೆಲಸ ಮಾಡಿದ್ದು, ಇದೀಗ ಸಿನಿಮಾ ಬಿಡುಗಡೆ ಆಗಿ ಮೊದಲ ದಿನವೇ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ