AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮನ್ನಾ ಭಾಟಿಯಾರನ್ನು ಕಾಡಿದ್ದ ‘ಟೋಬಿ’: ಮಿಲ್ಕಿ ಬ್ಯೂಟಿ ‘ಟೋಬಿ’ ಬಗ್ಗೆ ಹೇಳಿದ್ದ ಮಾತೇನು?

Tamanna Bhatia: ರಾಜ್ ಬಿ ಶೆಟ್ಟಿ ನಟಿಸಿರುವ 'ಟೋಬಿ' ಸಿನಿಮಾದ ಕತೆ ಓದಿದ್ದ ತಮನ್ನಾ, ಕತೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

ತಮನ್ನಾ ಭಾಟಿಯಾರನ್ನು ಕಾಡಿದ್ದ 'ಟೋಬಿ': ಮಿಲ್ಕಿ ಬ್ಯೂಟಿ 'ಟೋಬಿ' ಬಗ್ಗೆ ಹೇಳಿದ್ದ ಮಾತೇನು?
ಟೋಬಿ-ತಮನ್ನಾ
ಮಂಜುನಾಥ ಸಿ.
|

Updated on: Aug 04, 2023 | 10:26 PM

Share

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ‘ಟೋಬಿ‘ (Toby) ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 04) ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ‘ಟೋಬಿ’ ಕತೆ ರಚಿಸಿರುವ ಟಿಕೆ ದಯಾನಂದ, ಈ ಕತೆಯ ಕಾಡುವ ಗುಣದ ಬಗ್ಗೆ ಮಾತನಾಡುತ್ತಾ, ಮಿಲ್ಕಿ ಬ್ಯೂಟಿ ಖ್ಯಾತಿಯ ನಟಿ ತಮನ್ನಾ ಭಾಟಿಯಾ ‘ಟೋಬಿ’ ಕತೆಯನ್ನು ಮೆಚ್ಚಿ ಹೇಳಿದ್ದ ಮಾತುಗಳನ್ನು ಹಂಚಿಕೊಂಡರು.

”ಟೋಬಿ ಎನ್ನುವ ವ್ಯಕ್ತಿ ಇದ್ದ. ಅವನನ್ನು ಹತ್ತಿರದಿಂದ ನೋಡಿ, ಅವನ ಸುತ್ತ ಇದ್ದ ವ್ಯಕ್ತಿಗಳಿಂದ ಅವನು ಬದುಕಿದ ರೀತಿ ಕೇಳಿದ್ದ ನಾನು ಎಮೋಷನಲ್ ಆಗಿ ಪಾತ್ರಕ್ಕೆ ಹತ್ತಿರವಾಗಿದ್ದೆ. ಆ ವ್ಯಕ್ತಿ, ಅವನ ಜೀವನ ನನ್ನನ್ನು ಬಹಳ ಕಾಡಿತ್ತು. ಟೋಬಿ ಒಂದು ರೀತಿ ಪೀಡೆ, ಹೆಗಲೇರಿದ ಪಿಶಾಚಿಯಂತೆ ಕಾಡಲು ಆರಂಭಿಸಿತು. ಅವನಿಂದ ಬಿಡುಗಡೆಗೆ ಹಂಬಲಿಸಿದ್ದೆ. ಅದೇ ಸಮಯಕ್ಕೆ ಸಿಗ್ನೇಚರ್ ಮಾಸ್ಟರ್ ಕ್ಲಾಸ್​ ಹೆಸರಿನ ಬಾಲಿವುಡ್​ನ ಕತಾ ಸ್ಪರ್ಧೆಯ ನಾಲ್ಕನೇ ಆವೃತ್ತಿ ಆಯೋಜನೆಗೊಂಡಿತ್ತು. ಆ ಸ್ಪರ್ಧೆಗೆ ಕಳಿಸಲೆಂದು ಟೋಬಿಯ ಜೀವನದ ಕತೆ ಬರೆದು ಕಳಿಸಿ ಸುಮ್ಮನಾಗಿದ್ದೆ. ಆದರೆ ಅಲ್ಲಿಂದ ಕರೆ ಬಂದು, ನಿಮ್ಮ ಕತೆ ಶಾರ್ಟ್ ಲಿಸ್ಟ್ ಆಗಿದೆ ಮುಂಬೈಗೆ ಬನ್ನಿ ಎಂದು ಕರೆದರು” ಎಂದು ಕೆಲವು ವರ್ಷಗಳ ಹಿಂದಿನ ಕತೆಯನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ:ಟೋಬಿ ಕತೆ ಮೊದಲು ಹೇಳಿದ್ದು ಪುನೀತ್ ರಾಜ್​ಕುಮಾರ್​ಗೆ, ಆದರೆ ಅಪ್ಪು ನಟಿಸಲಿಲ್ಲ ಏಕೆ?

”ಅಲ್ಲಿ ಹೋದಾಗ ಟೋಬಿ ಕತೆಯೊಟ್ಟಿಗೆ ಆಯ್ಕೆ ಆಗಿದ್ದ ಇನ್ನೂ ನಾಲ್ವರು ಕತೆಗಾರರು ಇದ್ದರು. ಆ ಸ್ಪರ್ಧೆಗೆ ತೀರ್ಪುಗಾರರಾಗಿದ್ದಿದ್ದು ಬಾಲಿವುಡ್ ನಟರಾದ ಆಯುಷ್ಮಾನ್ ಖುರಾನಾ, ಬೆಂಗಳೂರಿನವರೇ ಆದ ಬಾಲಿವುಡ್ ನಟಿ ಕುಬ್ರಾ ಸೇಠ್, ರಾಜ್​ಕುಮಾರ್ ರಾವ್ ಮತ್ತು ನಟಿ ತಮನ್ನಾ. ಮುಂಬೈನಲ್ಲಿ ತರಬೇತಿ ಮುಗಿದ ಬಳಿಕ ಮತ್ತೆ ಹೈದರಾಬಾದ್​ಗೆ ಕರೆದರು. ಅಲ್ಲಿ ಹೋದಾಗ ಅಲ್ಲಿ ಟೋಬಿ ಕತೆಗೆ ಪ್ರಶಸ್ತಿ ಬಂತು. ಸುಮಾರು 3.70 ಲಕ್ಷ ಕತೆಗಳ ನಡುವೆ ಟೋಬಿ ಕತೆ ಗೆದ್ದಿತ್ತು” ಎಂದರು ದಯಾನಂದ.

”ಅದೇ ದಿನ ತೀರ್ಪುಗಾರರೊಟ್ಟಿಗೆ ಊಟ ಆಯೋಜನೆ ಮಾಡಿದ್ದರು. ಅಂದು ತಮನ್ನಾ ನನ್ನೊಟ್ಟಿಗೆ ಕತೆಯ ಬಗ್ಗೆ ಮಾತನಾಡಿ, ಈ ಕತೆಯನ್ನು ನೀನು ಏಕೆ ಬರೆದೆಯೋ, ಹೇಗೆ ಬರೆದೆಯೋ ಗೊತ್ತಿಲ್ಲ ಆದರೆ, ನಿನ್ನ ‘ಟೋಬಿ’ ಕತೆ ನನ್ನನ್ನು ಬಹಳ ಕಾಡಿಬಿಟ್ಟಿತು’ ಎಂದರು. ಟೋಬಿಗೆ ಇದ್ದ ಮೂಲ ಗುಣವೇ ಅದು. ಅವನು ಎಲ್ಲರನ್ನೂ ಕಾಡಿಬಿಡುತ್ತಾನೆ. ಅವನ ಬದುಕಿದ ರೀತಿಯೇ ಹಾಗಿತ್ತು” ಎಂದು ನೆನಪು ಮಾಡಿಕೊಂಡರು ದಯಾನಂದ.

ಟೋಬಿ ಸಿನಿಮಾ ನಿಜ ವ್ಯಕ್ತಿಯನ್ನು ಆಧರಿಸಿದ ಸಿನಿಮಾ. ಟಿಕೆ ದಯಾನಂದ್, ನಿಜ ವ್ಯಕ್ತಿಯ ಜೀವನ ಆಧರಿಸಿ ‘ಟೋಬಿ’ ಕತೆ ರಚಿಸಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಅವರೇ ಹೇಳಿರುವಂತೆ, ಟೋಬಿ ಹೇಗಿದ್ದನೋ, ಹೇಗೆ ಬದುಕಿದ್ದನೊ ಅದನ್ನಷ್ಟೆ ನಾನು ಬರೆದಿದ್ದೇನೆ, ವಿಶೇಷವಾಗಿ ನಾನು ಸೃಷ್ಟಿಸಿರುವುದು ಅದರಲ್ಲಿ ಏನೂ ಇಲ್ಲ. ಆದರೆ ಆ ಟೋಬಿ ಬದುಕಿದ್ದ ರೀತಿಯೇ ಬಹಳ ವಿಚಿತ್ರ, ವಿಕ್ಷಿಪ್ತ, ಅವನಿಗೆ ಎಲ್ಲರನ್ನೂ ಕಾಡುವ ಗುಣ ಇದೆ. ಟೋಬಿ ಸಿನಿಮಾದ ಕತೆ ದಯಾನಂದ್ ಅವರದ್ದಾದರೂ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಸಿನಿಮಾವನ್ನು ಬಾಸಿಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಚೈತ್ರಾ ಆಚಾರ್, ಸಂಯುಕ್ತಾ ಹೆಗಡೆ, ಗೋಪಾಲ್ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಇನ್ನಿತರರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ