
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅದೆಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ ಎಂದರೆ ಯಾವುದೇ ಪ್ರಮುಖ ವಿಷಯಗಳು ಲೀಕ್ ಆಗುತ್ತಿಲ್ಲ. ಈ ಸಿನಿಮಾಗೆ ಮ್ಯೂಸಿಕ್ ಯಾರು ಮಾಡ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕನ್ನಡದ ಮ್ಯೂಸಿಕ್ ಕಂಪೋಸರ್ನ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ.
‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ರಿಲೀಸ್ ಆಗುತ್ತಿದೆ. ಎರಡೂ ಭಾಷೆಯಲ್ಲಿ ಒಟ್ಟಿಗೆ ಸಿನಿಮಾನ ಶೂಟ್ ಮಾಡಲಾಗುತ್ತಿದೆ. ಹಾಲಿವುಡ್ ಮಾರುಕಟ್ಟೆಯಲ್ಲಿ ಸಿನಿಮಾ ಮಾರಾಟ ಆಗಬೇಕು ಎಂದರೆ ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಈ ಕಾರಣದಿಂದಲೇ ‘ಟಾಕ್ಸಿಕ್’ಗೆ ತಂಡದವರು ಹೆಚ್ಚು ಶ್ರಮ ಹಾಕುತ್ತಿದ್ದಾರೆ. ಈ ಸಿನಿಮಾಗೆ ರಾಜೀವ್ ರವಿ ಛಾಯಾಗ್ರಹಣ ಮಾಡಿದರೆ, ಸ್ಟಂಟ್ಗಳನ್ನು ಹಾಲಿವುಡ್ನ ಜೆಜೆ ಪೆರ್ರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡೋದು ಯಾರು ಎಂಬ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರವಿ ಬಸ್ರೂರು ಅವರೇ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರಂತೆ.
ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಮ್ಯೂಸಿಕ್ ಮಾಡುತ್ತಾರೆ ಎಂಬ ಸುದ್ದಿ ಈ ಮೊದಲು ಹರಿದಾಡಿತ್ತು. ಚಿತ್ರಕ್ಕಾಗಿ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯೂ ಕೇಳಿ ಬಂದಿತ್ತು. ಅನಿರುದ್ಧ್ ಕೊಡೋ ಸಂಗೀತ ಗಮನ ಸೆಳೆಯುವ ರೀತಿಯಲ್ಲಿರುತ್ತದೆ ಎಂಬ ಕಾರಣದಿಂದಲೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ಈಗ ‘ಟಾಕ್ಸಿಕ್’ ತಂಡ ಮನಸ್ಸು ಬದಲಿಸಿದಂತೆ ಇದೆ.
ರವಿ ಬಸ್ರೂರು ಅವರು ‘ಟಾಕ್ಸಿಕ್’ ಕೆಲಸದಲ್ಲಿ ಬ್ಯುಸಿ ಆಗಿದೆಯಂತೆ. ಯಶ್ ಹಾಗೂ ತಂಡದವರು ಆಗಾಗ ರವಿ ಅವರ ಸ್ಟುಡಿಯೋಗೆ ಭೇಟಿ ನೀಡಿ ಕೆಲಸದ ಬಗ್ಗೆ ಅಪ್ಡೇಟ್ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಯಶ್ ನಟನೆಯ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಯಶಸ್ಸು ಕಾಣುವಲ್ಲಿ ರವಿ ಬಸ್ರೂರು ಅವರ ಸಂಗೀತದ ಕೊಡುಗೆ ತುಂಬಾ ದೊಡ್ಡದಿದೆ. ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ರೀತಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಮೊದಲು ರಿಲೀಸ್ ಆಗಿದ್ದ ‘ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ಗೆ ರವಿ ಅವರೇ ಸಂಗೀತ ಸಂಯೋಜನೆ ಮಾಡಿದ್ದರು.
ಇದನ್ನೂ ಓದಿ: ‘ಟಾಕ್ಸಿಕ್’ ಎದುರು ಬರಲಿದೆ ಸಲ್ಮಾನ್ ಸಿನಿಮಾ; ಶಾರುಖ್ಗೆ ಆದ ಗತಿ ನೆನಪಿಸಿದ ಫ್ಯಾನ್ಸ್
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘ಟಾಕ್ಸಿಕ್’ ನಿರ್ಮಾಣ ಮಾಡುತ್ತಿದೆ. ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್’ ಕೂಡ ಇದಕ್ಕೆ ಕೈ ಜೋಡಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಇದ್ದಾರೆ. ಮಾರ್ಚ್ 19ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.