ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದರು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಝೂನಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಮಾದರಿ ಆಗುತ್ತಿದ್ದಾರೆ. ಈಗ ನಟ ಉಪೇಂದ್ರ ಕೂಡ ಒಂದು ಆನೆಯನ್ನು ದತ್ತು ಪಡೆದಿದ್ದಾರೆ.
ಕೊವಿಡ್ ಎರಡನೇ ಅಲೆ ಜೋರಾಗಿದೆ. ಇದರಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಲಾಕ್ಡೌನ್ ಇರುವ ಕಾರಣ ಪ್ರವಾಸಿ ತಾಣಗಳು ಹಾಗೂ ಝೂಗಳು ಕ್ಲೋಸ್ ಆಗಿವೆ. ಹೀಗಾಗಿ ಝೂನಲ್ಲಿರುವ ಪ್ರಾಣಿಗಳ ನಿರ್ವಹಣೆ ಕಷ್ಟವಾಗಿದೆ. ಈ ಕಾರಣಕ್ಕೆ ದರ್ಶನ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.
ಈಗ ದರ್ಶನ್ ಅವರ ಕರೆಗೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸ್ಪಂದಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರಾಣಿಗಳೇ ಗುಣದಲಿ ಮೇಲು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದಿದ್ದೇನೆ. ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇನೆ’ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.
ಉಪೇಂದ್ರ ಅವರ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಪೇಂದ್ರ ಮಾಡಿದ ಕಾರ್ಯದಿಂದ ಮತ್ತೊಂದಷ್ಟು ಜನರಿಗೆ ಸ್ಫೂರ್ತಿ ಸಿಕ್ಕಿದ್ದು, ಅವರು ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ. ಈ ಬಗ್ಗೆ ದರ್ಶನ್ ಕೂಡ ಪ್ರತಿಕ್ರಿಯಿಸಿದ್ದು, ‘ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಶ್ರೀ ಉಪೇಂದ್ರ ಅವರಿಗೆ ಹೃದಯಪೂರ್ವಕ ಧನ್ಯವಾದಗಳು’ ಎಂದಿದ್ದಾರೆ.
ಹಾಗಾದರೆ, ಒಂದು ಆನೆ ದತ್ತು ಪಡೆದರೆ ಒಂದು ವರ್ಷಕ್ಕೆ ಬರುವ ಖರ್ಚೆಷ್ಟು? ಈ ವಿಚಾರವನ್ನು ದರ್ಶನ್ ಅವರೇ ಹೇಳಿಕೊಂಡಿದ್ದರು. ಲವ್ಬರ್ಡ್ಗೆ 1 ಸಾವಿರ ರೂಪಾಯಿ, ಹುಲಿಗೆ 1 ಲಕ್ಷ ರೂಪಾಯಿ ಹಾಗೂ ಆನೆ ದತ್ತುಪಡೆಯಬೇಕು ಎಂದರೆ 1.70 ಲಕ್ಷ ರೂಪಾಯಿ ನೀಡಬೇಕು ಎಂದಿದ್ದರು.
ಇದನ್ನೂ ಓದಿ: Darshan: ದರ್ಶನ್ ಕೊಟ್ಟ ಆ ಒಂದು ಕರೆಗೆ ಅಭಿಮಾನಿಗಳಿಂದ ಬಂತು ಅಭೂತಪೂರ್ವ ಪ್ರತಿಕ್ರಿಯೆ; ಸಾಕ್ಷಿ ತೋರಿಸಿದ ಡಿ ಬಾಸ್