ತಮಿಳಿನ ಬಳಿಕ ತೆಲುಗೆಗೆ ಹಾರಿದ ನಟ ಉಪೇಂದ್ರ, ಹೊಸ ಸಿನಿಮಾ ಘೋಷಣೆ

Upendra: ಉಪೇಂದ್ರ ಇತ್ತೀಚೆಗಷ್ಟೆ ತಮಿಳಿನ ‘ಕೂಲಿ’ ಸಿನಿಮಾನಲ್ಲಿ ನಟಿಸಿ ಬಂದಿದ್ದಾರೆ. ಈ ಸಿನಿಮಾನಲ್ಲಿ ರಜನೀಕಾಂತ್ ನಾಯಕ. ಇದೀಗ ತಮಿಳು ಸಿನಿಮಾ ಮುಗಿಯುತ್ತಿದ್ದಂತೆ ಉಪೇಂದ್ರ ತೆಲುಗು ಸಿನಿಮಾನಲ್ಲಿ ನಟಿಸಲು ಆರಂಭಿಸಿದ್ದಾರೆ. ಉಪೇಂದ್ರ ನಟಿಸುತ್ತಿರುವ ಹೊಸ ತೆಲುಗು ಸಿನಿಮಾದ ಘೋಷಣೆ ಇದೀಗ ಆಗಿದೆ. ಸಿನಿಮಾದ ಹೆಸರೇನು? ನಾಯಕ ಯಾರು? ಇಲ್ಲಿದೆ ಪೂರ್ಣ ಮಾಹಿತಿ...

ತಮಿಳಿನ ಬಳಿಕ ತೆಲುಗೆಗೆ ಹಾರಿದ ನಟ ಉಪೇಂದ್ರ, ಹೊಸ ಸಿನಿಮಾ ಘೋಷಣೆ
Upendra

Updated on: May 13, 2025 | 1:30 PM

ಉಪೇಂದ್ರ (Upendra) ಸಹ ಪ್ಯಾನ್ ಇಂಡಿಯಾ (Pan India) ನಟರೇ. ‘ಕಬ್ಜ’ ಸಿನಿಮಾ ಬರುವುದಕ್ಕೆ ಮುಂಚೆಯೇ ಅವರು ಪರಭಾಷೆಗಳಲ್ಲಿ ನಟಿಸಿದ್ದರು ಅದೂ ನಾಯಕನಾಗಿ. ಇದೀಗ ಉಪೇಂದ್ರ ತಮ್ಮ ನೆಚ್ಚಿನ ನಟ ರಜನೀಕಾಂತ್ ಅವರ ಜೊತೆಗೆ ತಮಿಳಿನ ‘ಕೂಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ಅದರ ಬೆನ್ನಲ್ಲೆ ಉಪ್ಪಿ ಇದೀಗ ತೆಲುಗಿನಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ.

ತೆಲುಗಿನಲ್ಲಿ ಇನ್ನೂ ಹೆಸರಿಡದ ಸಿನಿಮಾನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ಸೂರ್ಯ ಕುಮಾರ್. ಸಿನಿಮಾ ಅನ್ನು ಸದ್ಯಕ್ಕೆ ‘RAPO22’ ಎಂದು ಕರೆಯಲಾಗುತ್ತಿದೆ. ಸಿನಿಮಾದಲ್ಲಿ ನಾಯಕನಾಗಿ ರಾಮ್ ಪೋತಿನೇನಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿ ಭಾಗ್ಯಶ್ರೀ ಬೋರ್ಸೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದೀಗ ನಟ ಉಪೇಂದ್ರ ಸಹ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಸಿನಿಮಾ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಭಾರಿ ಬಜೆಟ್​ನ ಸಿನಿಮಾ ಇದಾಗಿರಲಿದೆ. ಮಹೇಶ್ ಬಾಬು ಪಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಅಷ್ಟಕ್ಕೂ ಇದು ಉಪೇಂದ್ರ ಅವರಿಗೆ ಮೊದಲ ತೆಲುಗು ಸಿನಿಮಾ ಏನಲ್ಲ. ದಶಕಗಳಿಂದಲೂ ಅವರು ತೆಲುಗು ಚಿತ್ರರಂಗದೊಟ್ಟಿಗೆ ನಂಟು ಹೊಂದಿದ್ದಾರೆ. 1997 ರಲ್ಲಿ ಉಪೇಂದ್ರ, ‘ಓಂಕಾರ’ ಹೆಸರಿನ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದರು. ಅದು ಕನ್ನಡದ ‘ಓಂ’ ಸಿನಿಮಾದ ರೀಮೇಕ್. ಅದಾದ ಬಳಿಕ 1998 ರಲ್ಲಿ ಶ್ರೀಕಾಂತ್ ಜೊತೆಗೆ ‘ಕನ್ಯಾದಾನಂ’ ಸಿನಿಮಾನಲ್ಲಿ ನಟಿಸಿದರು. ಬಳಿಕ ಅವರೇ ನಾಯಕನಾಗಿ ‘ಒಕೇ ಮಾಟ’ ಅದಾದ ಬಳಿಕ ‘ನೀತೋನೆ ಉಂಟಾ’, ‘ರಾ’ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ತೆಲುಗಿನ ‘ಟಾಸ್’ ಸಿನಿಮಾನಲ್ಲಿ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ ನಟಿಸಿದರು. ಬಳಿಕ ‘ಸೆಲ್ಯೂಟ್’, 2015 ರಲ್ಲಿ ಅಲ್ಲು ಅರ್ಜುನ್ ಜೊತೆಗೆ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾನಲ್ಲಿ ನಟಿಸಿದರು. 2022 ರಲ್ಲಿ ‘ಗನಿ’ ಸಿನಿಮಾನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು. ಈಗ ತಮಿಳಿನಲ್ಲಿ ‘ಕೂಲಿ’ ಹಾಗೂ ತೆಲುಗಿನಲ್ಲಿ ಇನ್ನೂ ಹೆಸರಿಡದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಉಪೇಂದ್ರ ಡಿಸ್ಚಾರ್ಜ್; ರಿಯಲ್ ಸ್ಟಾರ್​ಗೆ ಎದುರಾದ ಆರೋಗ್ಯ ಸಮಸ್ಯೆ ಏನು?

ಉಪೇಂದ್ರ ಕನ್ನಡದಲ್ಲಿಯೂ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಕಬ್ಜ 2’ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ. ಅವರ ನಟನೆಯ ‘45’ ಸಿನಿಮಾ ಪೂರ್ಣಗೊಂಡಿದ್ದು ಶೀಘ್ರವೇ ಬಿಡುಗಡೆ ಸಹ ಆಗಲಿದೆ. ಈ ಸಿನಿಮಾನಲ್ಲಿ ಅವರು ಶಿವರಾಜ್ ಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಜೊತೆಗೆ ನಟಿಸಿದ್ದಾರೆ. ‘ಬುದ್ಧಿವಂತ 2’ ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಆರಂಭ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ