‘ಸೂಪರ್ ಸ್ಟಾರ್’ ರಜನಿಕಾಂತ್ ಜೊತೆ ನಟಿಸಬೇಕು ಎಂಬ ಆಸೆ ಬಹುತೇಕ ಎಲ್ಲ ಕಲಾವಿದರಿಗೆ ಇರುತ್ತದೆ. ಉಪೇಂದ್ರ ಅವರಿಗೆ ಆ ಆಸೆ ಈಡೇರುತ್ತಿದೆ. ಬಹುನಿರೀಕ್ಷಿತ ‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಉಪೇಂದ್ರ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸಲು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ನಲ್ಲಿ ಮೂಡಿಬಂದ ಈ ಪೋಸ್ಟರ್ ಕಂಡು ಉಪೇಂದ್ರ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
‘ಕೂಲಿ’ ಸಿನಿಮಾದಲ್ಲಿ ಬಹುತಾರಾಗಣ ಇದೆ. ರಜನಿಕಾಂತ್ ಜೊತೆ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ರಚಿತಾ ರಾಮ್, ಉಪೇಂದ್ರ ಮುಂತಾದವರು ಪಾತ್ರವರ್ಗಕ್ಕೆ ಸೇರ್ಪಡೆ ಆಗಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬಾಲಿವುಡ್ ನಟ ಆಮಿರ್ ಖಾನ್ ಕೂಡ ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಖಚಿತತೆ ಸಿಗಬೇಕಿದೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಕಾಲಿಗೆ ನಮಸ್ಕರಿಸಲು ಬಂದ ರಜನಿಕಾಂತ್; ಬಿಗ್ ಬಿ ಪ್ರತಿಕ್ರಿಯೆ ಏನು?
ಉಪೇಂದ್ರ ಅವರು ‘ಕೂಲಿ’ ಸಿನಿಮಾದಲ್ಲಿ ಕಾಲೇಶ ಎಂಬ ಪಾತ್ರ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಹಂಚಿಕೊಂಡ ಉಪೇಂದ್ರ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಆಶೀರ್ವಾದದಿಂದ ನನ್ನ ಗುರು, ನನ್ನ ಸೂಪರ್ ಸ್ಟಾರ್ ರಜನಿ ಸರ್ ಜೊತೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ಧನ್ಯವಾದಗಳು’ ಎಂದು ಉಪೇಂದ್ರ ಪೋಸ್ಟ್ ಮಾಡಿದ್ದಾರೆ. ‘ಸನ್ ಪಿಕ್ಚರ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್ ಸ್ಟಾರ್ ರಜನಿ ಸರ್ ಜೊತೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ 🙏
Feeling blessed to share screenspace with Superstar Rajni Sir 🙏
Thank you
Dir_Lokesh @rajinikanth sir @anirudhofficial @anbariv @girishganges @philoedit… pic.twitter.com/wz0mivnKig— Upendra (@nimmaupendra) September 1, 2024
ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಉಪೇಂದ್ರ ಅವರಿಗೆ ಖ್ಯಾತಿ ಇದೆ. ಈಗ ಅವರು ‘ಯುಐ’ ಸಿನಿಮಾದ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಉಪೇಂದ್ರ ಆ್ಯಕ್ಷನ್-ಕಟ್ ಹೇಳಿದ ಸಿನಿಮಾ ಎಂಬ ಕಾರಣದಿಂದ ‘ಯುಐ’ ಹೆಚ್ಚು ಹೈಪ್ ಸೃಷ್ಟಿ ಮಾಡಿದೆ. ಅಕ್ಟೋಬರ್ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.