Upendra: ಸಿನಿಮಾ ಕಾರ್ಮಿಕರ ಸಾವಿರಾರು ಕುಟುಂಬಗಳಿಗೆ ಉಚಿತ ದಿನಸಿ ಕಿಟ್​ ವಿತರಿಸಲಿರುವ ಉಪೇಂದ್ರ

|

Updated on: May 10, 2021 | 12:49 PM

Karnataka Lockdown: ಲಾಕ್​ಡೌನ್​ನಿಂದ ಕಷ್ಟದಲ್ಲಿ ಇರುವವರಿಗೆ ಆಯಾ ಒಕ್ಕೂಟಗಳ ಮೂಲಕ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ನೀಡಲು ಉಪೇಂದ್ರ ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

Upendra: ಸಿನಿಮಾ ಕಾರ್ಮಿಕರ ಸಾವಿರಾರು ಕುಟುಂಬಗಳಿಗೆ ಉಚಿತ ದಿನಸಿ ಕಿಟ್​ ವಿತರಿಸಲಿರುವ ಉಪೇಂದ್ರ
ಉಪೇಂದ್ರ
Follow us on

ಒಂದು ಕಡೆ ಕೊರೊನಾ, ಇನ್ನೊಂದು ಕಡೆ ಬಡತನ. ಮನೆಯಿಂದ ಹೊರಗೆ ಹೋದರೆ ಕೊವಿಡ್​ ಕಾಟ, ದುಡಿಮೆ ಇಲ್ಲದೇ ಮನೆಯೊಳಗೆ ಕೂತಿದ್ದರೆ ಹಸಿವಿನ ಕಾಟ. ಇಂಥ ಕಷ್ಟದ ಪರಿಸ್ಥಿತಿಗೆ ಅನೇಕರು ಸಿಲುಕಿದ್ದಾರೆ. ಲಾಕ್​ಡೌನ್​ನಿಂದಾಗಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್​ ಸಂಪೂರ್ಣ ನಿಂತುಹೋಗಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಬಡ ಕಲಾವಿದರು ಬದುಕು ನಡೆಸುವುದು ಕಷ್ಟ ಆಗಿದೆ. ಅಂಥವರ ಸಹಾಯಕ್ಕೆ ನಟ ಉಪೇಂದ್ರ ಧಾವಿಸಿದ್ದಾರೆ.

ಸಿನಿಮಾ ಚಟುವಟಿಕೆಗಳು ಸ್ಥಗಿತ ಆಗಿರುವುದರಿಂದ ಕೆಲಸ ಇಲ್ಲದೆ ಸಂಸಾರ ಸಾಗಿಸಲು ಕಷ್ಟಪಡುತ್ತಿರುವ ನೂರಾರು ಸಿನಿಮಾ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಸಾವಿರಾರು ಕುಟುಂಬಗಳಿಗೆ ಉಪೇಂದ್ರ ಉಚಿತ ರೇಷನ್​ ಕಿಟ್​ಗಳನ್ನು ಹಂಚುವುದಾಗಿ ತಿಳಿಸಿದ್ದಾರೆ. ಕಷ್ಟದಲ್ಲಿ ಇರುವವರಿಗೆ ಆಯಾ ಒಕ್ಕೂಟಗಳ ಮೂಲಕ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ನೀಡಲು ಅವರು ಮುಂದಾಗಿದ್ದಾರೆ. ಉಪೇಂದ್ರ ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಉಪೇಂದ್ರ ಇಂಥದ್ದೊಂದು ಸಮಾಜಮುಖಿ ಕೆಲಸ ಮಾಡಲು ಮುಂದಾಗಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ದೇಣಿಗೆ ಕೂಡ ಸಂಗ್ರಹವಾಗಲು ಆರಂಭಿಸಿದೆ. ‘ಎಸ್​.ಕೆ. ಸ್ಟೀಲ್ಸ್​ ಕಂಪನಿಯವರು 5 ಲಕ್ಷ ರೂ.ಗಳನ್ನು ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಈ ಹಣವನ್ನು ಪ್ರತ್ಯೇಕವಾಗಿ ಕೊರೊನಾದಿಂದ ಸಂಕಷ್ಟಟದಲ್ಲಿ ಇರುವ ಕಿರುತೆರೆ ಕಲಾವಿದರು ಮತ್ತು ಕಾರ್ಮಿಕರಿಗೆ ನೀಡಲು ಇಚ್ಛಿಸುತ್ತೇನೆ. ಸದ್ಯದಲ್ಲೇ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುತ್ತೇನೆ’ ಎಂದು ಉಪೇಂದ್ರ ತಿಳಿಸಿದ್ದಾರೆ.

ಉಪೇಂದ್ರ ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಜನರ ಸಹಾಯಕ್ಕೆ ಮುಂದಾಗಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್​ ಗೌಡ ತಮ್ಮದೇ ಹೆಲ್ಪ್​ಲೈನ್​ ಆರಂಭಿಸಿ ಜನರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಅರ್ಜುನ್​ ಗೌಡ ಅವರು ಈ ಕಷ್ಟಕಾಲದಲ್ಲಿ ಆ್ಯಂಬುಲೆನ್ಸ್​ ಚಾಲಕನಾಗಿ ಕೆಲಸ ಮಾಡುವ ಮೂಲಕ ಜನಸೇವೆಗೆ ನಿಂತಿದ್ದಾರೆ. ಅಗತ್ಯ ಇರುವವರಿಗೆ ಆಕ್ಸಿಜನ್​ ಸಿಲಿಂಡರ್​ ತಲುಪಿಸುವ ಕೆಲಸವನ್ನು ಜಗ್ಗೇಶ್​ ಮಾಡುತ್ತಿದ್ದಾರೆ. ನಟ ಶ್ರೀಮುರಳಿ ಅವರು ಬೆಂಗಳೂರಿನ 5 ಸರ್ಕಾರಿ ಆಸ್ಪತ್ರೆಗಳ ವೈದ್ಯರು, ನರ್ಸ್​ಗಳು ಹಾಗೂ ಸಿಬ್ಬಂದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಇದನ್ನೂ ಓದಿ:

Sri Murali: ಕೊವಿಡ್​ ಸಂಕಷ್ಟದಲ್ಲಿ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಊಟ ನೀಡುತ್ತಿರುವ ನಟ ಶ್ರೀಮುರಳಿ

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ