ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ದ್ವಾರಕೀಶ್ (Dwarakish) ಅವರು ಇಂದು (ಏಪ್ರಿಲ್ 16) ನಿಧನ ಹೊಂದಿದ್ದಾರೆ. ಇಂದು ಮುಂಜಾನೆ ಅವರಿಗೆ ಹೃದಯಾಘಾತ ಆಗಿದೆ. ಕಾಫಿ ಕುಡಿದು ಮಲಗಿದ ಅವರು ಮತ್ತೆ ಏಳಲೇ ಇಲ್ಲ. ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಹಲವು ದಿಗ್ಗಜರ ಜೊತೆ ಅವರು ನಟಿಸಿದ್ದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಅವರ ಸಿನಿ ಜರ್ನಿ ಬಗ್ಗೆ ಇಲ್ಲಿದೆ ಮಾಹಿತಿ.
1942ರಲ್ಲಿ ದ್ವಾರಕೀಶ್ ಅವರು ಜನಿಸಿದರು. ಅವರ ಮೂಲ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ. ನಿರ್ದೇಶಕ ಸಿವಿ ಶಿವಶಂಕರ್ ಅವರು ದ್ವಾರಕೀಶ್ ಎನ್ನುವ ಹೆಸರನ್ನು ಅವರಿಗೆ ನೀಡಿದ್ದರು. 1964ರಲ್ಲಿ ಬಿಡುಗಡೆ ಆದ ‘ವೀರ ಸಂಕಲ್ಪ’ ದ್ವಾರಕೀಶ್ ನಟನೆಯ ಮೊದಲ ಸಿನಿಮಾ, ಹುಣಸೂರು ಕೃಷ್ಣಮೂರ್ತಿ ಈ ಸಿನಿಮಾದ ನಿರ್ದೇಶಕರು. ಮೊದಲ ಸಿನಿಮಾದಲ್ಲಿಯೇ ಮುಖ್ಯ ಭೂಮಿಕೆಯಲ್ಲಿ ದ್ವಾರಕೀಶ್ ನಟಿಸಿದ್ದರು. ನಂತರ 1966ರಲ್ಲಿ ರಿಲೀಸ್ ಆದ ‘ಮಮತೆಯ ಬಂಧನ’ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿ ಬಡ್ತಿ ಪಡೆದರು. ಇವರ ಜೊತೆ ಇನ್ನೂ ಕೆಲವರು ಸಹ ನಿರ್ಮಾಪಕರಾಗಿ ಇದ್ದರು.
ದ್ವಾರಕೀಶ್ ಅವರು ಸ್ವತಂತ್ರ ನಿರ್ಮಾಪಕರು ಎನಿಸಿಕೊಂಡಿದ್ದು 1969ರಲ್ಲಿ ರಿಲೀಸ್ ಆದ ‘ಮೇಯರ್ ಮುತ್ತಣ್ಣ’ ಸಿನಿಮಾ ಮೂಲಕ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಡಾ ರಾಜ್ಕುಮಾರ್ ನಟಿಸಿದ್ದರು. ಆ ಸಿನಿಮಾ ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು. ಆ ನಂತರ ನೂರಾರು ಸಿನಿಮಾಗಳಿಗೆ ದ್ವಾರಕೀಶ್ ಬಂಡವಾಳ ಹೂಡಿದರು. ಹಲವಾರು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು.
‘ಪ್ರಚಂಡ ಕುಳ್ಳ’,‘ಕಳ್ಳ ಕುಳ್ಳ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ನಿರ್ಮಾಪಕರಾಗಿಯೂ ಅವರು ಗಮನ ಸೆಳೆದರು. ‘ಭಾಗ್ಯವಂತರು’, ‘ಕಿಟ್ಟು ಪುಟ್ಟು’, ‘ಕುಳ್ಳ ಕುಳ್ಳಿ’, ‘ಗುರು ಶಿಷ್ಯರು’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ರಿಲೀಸ್ ಆದ ‘ಆಯುಷ್ಮಾನ್ಭವ’ ಅವರ ನಿರ್ಮಾಣದ ಕೊನೆಯ ಸಿನಿಮಾ.
ಇದನ್ನೂ ಓದಿ: ಹೃದಯಾಘಾತದಿಂದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ
ನಿರ್ದೇಶಕರಾಗಿಯೂ ದ್ವಾರಕೀಶ್ ಹೆಸರು ಮಾಡಿದ್ದರು. ‘ನೀ ಬರೆದ ಕಾದಂಬರಿ’ ಅವರ ನಿರ್ದೇಶನದ ಮೊದಲ ಸಿನಿಮಾ. ಆ ಬಳಿಕ, ‘ಆಫ್ರಿಕಾದಲ್ಲಿ ಶೀಲಾ’, ‘ಕಿಲಾಡಿಗಳು’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದರು. 2001ರ ಈಚೆಗೆ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Tue, 16 April 24