ವಿಜಯ್ ಪ್ರಕಾಶ್ ಧ್ವನಿಯಲ್ಲಿ ಪರಿಸರದ ಕುರಿತು ಹಾಡು; ‘ಜಲತಾಪ’ ಚಿತ್ರಕ್ಕೆ ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ

|

Updated on: Aug 30, 2023 | 2:03 PM

ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ಸಾದ್ವಿನಿ ಕೊಪ್ಪ ಅವರು ‘ಜಲಪಾತ’ ಸಿನಿಮಾ ಮೂಲಕ ಮ್ಯೂಸಿಕ್​ ಡೈರೆಕ್ಟರ್​ ಆಗುತ್ತಿದ್ದಾರೆ. ‘ಎದೆಯ ದನಿಯ ಹಾಡು ಕೇಳು..’ ಗೀತೆಯನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ರಜನೀಶ್ ಮತ್ತು ನಾಗಶ್ರೀ ಬೇಗಾರ್ ಅವರು ಈ ಸಿನಿಮಾದಲ್ಲಿ ನಾಯಕ-ನಾಯಕಿ ಆಗಿ ನಟಿಸಿದ್ದಾರೆ. ‘ಜಲಪಾತ’ ಸಿನಿಮಾದ ಬಗ್ಗೆ ಇಲ್ಲಿದೆ ಮಾಹಿತಿ..

ವಿಜಯ್ ಪ್ರಕಾಶ್ ಧ್ವನಿಯಲ್ಲಿ ಪರಿಸರದ ಕುರಿತು ಹಾಡು; ‘ಜಲತಾಪ’ ಚಿತ್ರಕ್ಕೆ ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ
‘ಜಲಪಾತ’ ಸಿನಿಮಾ ತಂಡ
Follow us on

ಶೀರ್ಷಿಕೆಯ ಕಾರಣದಿಂದ ‘ಜಲಪಾತ’ ಸಿನಿಮಾ (Jalapatha Movie) ಕೌತುಕ ಸೃಷ್ಟಿ ಮಾಡಿದೆ. ಟೈಟಲ್​ಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಪರಿಸರ ಕಾಳಜಿ ಇದೆ. ಟಿ.ಸಿ. ರವೀಂದ್ರ ತುಂಬರಮನೆ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಮೇಶ್ ಬೇಗಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡು ಬಿಡುಗಡೆ ಮಾಡಲಾಗಿದೆ. ‘ಜಲಪಾತ’ ಸಿನಿಮಾಗಾಗಿ ರಮೇಶ್ ಬೇಗಾರ್ ಅವರು ‘ಎದೆಯ ದನಿಯ ಹಾಡು ಕೇಳು..’ ಎಂಬ ಹಾಡನ್ನು ಬರೆದಿದ್ದಾರೆ. ಈ ಗೀತೆಯು ಪರಿಸರದ ಕುರಿತಾಗಿದೆ. ‘ಎ2 ಮ್ಯೂಸಿಕ್​’ ಮೂಲಕ ಈ ಸಾಂಗ್​​ ರಿಲೀಸ್​ ಮಾಡಲಾಗಿದೆ. ಜನಪ್ರಿಯ ಸಿಂಗರ್​ ವಿಜಯ್ ಪ್ರಕಾಶ್ (Vijay Prakash) ಅವರ ಸುಮಧುರ ಕಂಠದಲ್ಲಿ ‘ಎದೆಯ ದನಿಯ ಹಾಡು ಕೇಳು..’ ಹಾಡು ಮೂಡಿಬಂದಿದೆ. ಈ ಗೀತೆಗೆ ಸಾದ್ವಿನಿ ಕೊಪ್ಪ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ಸಾದ್ವಿನಿ ಕೊಪ್ಪ ಅವರು ‘ಜಲಪಾತ’ ಸಿನಿಮಾ ಮೂಲಕ ಮ್ಯೂಸಿಕ್​ ಡೈರೆಕ್ಟರ್​ ಆಗುತ್ತಿದ್ದಾರೆ ಎಂಬುದು ವಿಶೇಷ. ‘ಎದೆಯ ದನಿಯ ಹಾಡು ಕೇಳು..’ ಹಾಡನ್ನು ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಅವರು ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ. ‘ಈ ಸಿನಿಮಾದಲ್ಲಿ ಮೂರು ಹಾಡುಗಳು ಮತ್ತು ಕೆಲವು ಬಿಟ್ಸ್ ಇವೆ. ಈ ಗೀತೆಯ ಸಾಹಿತ್ಯವನ್ನು ನೋಡಿದ ಬಳಿಕ ವಿಜಯ್ ಪ್ರಕಾಶ್ ಅವರ ಧ್ವನಿಯೇ ಸೂಕ್ತ ಎನಿಸಿತು. ತಮ್ಮ ಕೆಲಸದ ಒತ್ತಡದ ನಡುವೆಯೂ ಈ ಗೀತೆಯನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ನಮ್ಮೆಲ್ಲರ ಕಡೆಯಿಂದ ಧನ್ಯವಾದಗಳು?’ ಎಂದು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಹೇಳಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಅದ್ದೂರಿಯಾಗಿ ರಿಲೀಸ್​ ಆಯ್ತು ‘ಕುದ್ರು’ ಹಾಡು; ಈ ಚಿತ್ರದಲ್ಲಿದೆ ಕೋಲ, ಕಂಬಳ, ಯಕ್ಷಗಾನ

‘ಜಲಪಾತ’ ಸಿನಿಮಾ ಕುರಿತು ನಿರ್ದೇಶಕ ರಮೇಶ್ ಬೇಗಾರ್ ಮಾತನಾಡಿದ್ದಾರೆ. ಅವರಿಗೆ ಇದು ಎರಡನೇ ಸಿನಿಮಾ. ‘ಪರಿಸರದ ಬಗ್ಗೆ ಜಗೃತಿ ಮೂಡಿಸುವ ಅನೇಕ ಹಾಡುಗಳು ಈಗಾಗಲೇ ಬಂದಿವೆ. ಆದರೆ ನಮ್ಮ ಸಿನಿಮಾದ ಈ ಗೀತೆ ಸ್ವಲ್ಪ ವಿಭಿನ್ನವಾಗಿದೆ. ಪರಿಸರ ನಮಗೆ ಏನೆಲ್ಲಾ ನೀಡಿದೆ ಮತ್ತು ನಮ್ಮಿಂದ ಪರಿಸರ ಏನಾಗುತ್ತಿದೆ ಎಂಬುದನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಈ ಸಾಂಗ್​ ಕೇಳುವುದೇ ಚೆಂದ. ಸಾದ್ವಿನಿ ಅವರ ಸಂಗೀತ ಕೂಡ ತುಂಬ ಚೆನ್ನಾಗಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ‘ಫೈಟರ್​’ ಆಗಿ ಬರ್ತಿದ್ದಾರೆ ಮರಿ ಟೈಗರ್ ವಿನೋದ್ ಪ್ರಭಾಕರ್; ಟೀಸರ್​ ಹೇಗಿದೆ ನೋಡಿದ್ರಾ?

ರಜನೀಶ್ ಮತ್ತು ನಾಗಶ್ರೀ ಬೇಗಾರ್ ಅವರು ‘ಜಲಪಾತ’ ಸಿನಿಮಾದಲ್ಲಿ ನಾಯಕ-ನಾಯಕಿ ಆಗಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಅವರು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಲೆನಾಡಿನ ಕೆಲವು ರಂಗಭೂಮಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ‘ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು. ಪರಿಸರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಹಂಬಲದಿಂದ ನಾನು ‘ಜಲಪಾತ’ ಸಿನಿಮಾವನ್ನು ನಿರ್ಮಿಸಿದ್ದೇನೆ. ಮಲೆನಾಡ ಸೊಗಡಿನಿಂದ ಕೂಡಿರುವ ಈ ಸಿನಿಮಾವು ಪ್ರೇಕ್ಷಕರ ಮನಸ್ಸಿಗೆ ಹತ್ತಿರ ಆಗಲಿದೆ’ ಎಂದು ನಿರ್ಮಾಪಕ ರವೀಂದ್ರ ತುಂಬರಮನೆ ಭರವಸೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.