ಈ ವಾರ ಕನ್ನಡ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ: ಯಾವ ಚಿತ್ರಗಳು ರಿಲೀಸ್?

ಕನ್ನಡದಲ್ಲಿ 8ಕ್ಕೂ ಅಧಿಕ ಸಿನಿಮಾಗಳು ಜನವರಿ 30ರಂದು ರಿಲೀಸ್ ಆಗುತ್ತಿವೆ. ಯಾವುದು ನೋಡೋದು, ಯಾವುದು ಬಿಡೋದು ಎಂಬುದು ಪ್ರೇಕ್ಷಕರ ಪ್ರಶ್ನೆ. ‘ರಕ್ತ ಕಾಶ್ಮೀರ’, ‘ಅಮೃತ ಅಂಜನ್’, ‘ಚೌಕಿದಾರ್’, ‘ವಲವಾರ’, ‘ವಿಕಲ್ಪ’ ಮುಂತಾದ ಸಿನಿಮಾಗಳು ತೆರೆಕಾಣುತ್ತಿವೆ. ಕಳೆದ ವಾರ ಬಿಡುಗಡೆ ಆದ ಚಿತ್ರಗಳು ಕೂಡ ಪೈಪೋಟಿ ನೀಡುತ್ತಿವೆ.

ಈ ವಾರ ಕನ್ನಡ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ: ಯಾವ ಚಿತ್ರಗಳು ರಿಲೀಸ್?
New Kannada Cinema
Image Credit source: Tv9 Kannada

Updated on: Jan 29, 2026 | 9:35 PM

2026ನೇ ಸಾಲಿನ ಮೊದಲ ತಿಂಗಳು ಕೊನೆಗೊಳ್ಳುತ್ತಿದೆ. ‘ಲ್ಯಾಂಡ್​ಲಾರ್ಡ್’ ಮತ್ತು ‘ಕಲ್ಟ್’ ಸಿನಿಮಾಗಳಿಂದ ಕನ್ನಡ ಚಿತ್ರರಂಗ (Kannada Film Industry) ಉತ್ತಮ ಓಪನಿಂಗ್ ಪಡೆದುಕೊಂಡಿತು. ಜನವರಿ ಕೊನೇ ವಾರದಲ್ಲಿ ಒಂದಷ್ಟು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬೇರೆ ಬೇರೆ ಪ್ರಕಾರದ ಸಿನಿಮಾಗಳು ತೆರೆಕಾಣುತ್ತಿವೆ. ‘ವಲವಾರ’, ‘ವಿಕಲ್ಪ’, ‘ಅಮೃತ ಅಂಜನ್’, ‘ರಕ್ತ ಕಾಶ್ಮೀರ’, ‘ಸೀಟ್ ಎಡ್ಜ್’, ‘ಚೌಕಿದಾರ್’ (Chowkidar) ಮುಂತಾದ ಸಿನಿಮಾಗಳು ಪ್ರೇಕ್ಷಕರ ಎದುರು ಬರುತ್ತಿವೆ. ಆ ಮೂಲಕ ಸಿನಿಪ್ರಿಯರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಜನವರಿ 30ರಂದು ತೆರೆಕಾಣಲಿರುವ ಸಿನಿಮಾಗಳ (Kannada Cinema) ಬಗ್ಗೆ ಇಲ್ಲಿದೆ ಮಾಹಿತಿ..

ವಲವಾರ: ಟ್ರೇಲರ್ ಮೂಲಕ ‘ವಲವಾರ’ ಸಿನಿಮಾ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಮಕ್ಕಳು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಸುತನ್ ಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋಗಳ ಮೂಲಕ ‘ವಲವಾರ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಅಮೃತ ಅಂಜನ್: ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಕಲಾವಿದರು ಸೇರಿಕೊಂಡು ‘ಅಮೃತ ಅಂಜನ್’ ಸಿನಿಮಾ ಮಾಡಿದ್ದಾರೆ. ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ಕಾರ್ತಿಕ್ ಶ್ರೀಭಾಗ್ಯ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಮಿಡಿ ಇಷ್ಟಪಡುವ ಪ್ರೇಕ್ಷಕರು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

ರಕ್ತ ಕಾಶ್ಮೀರ: ಹಲವು ವರ್ಷಗಳ ಹಿಂದೆಯೇ ಚಿತ್ರೀಕರಣಗೊಂಡಿದ್ದ ‘ರಕ್ತ ಕಾಶ್ಮೀರ’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಮ್ಯಾ ದಿವ್ಯ ಸ್ಪಂದನಾ, ಉಪೇಂದ್ರ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ವಿಶೇಷ ಹಾಡಿನಲ್ಲಿ ದರ್ಶನ್, ಪುನೀತ್ ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರಮೇಶ್ ಅರವಿಂದ್, ಆದಿತ್ಯ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ವಿಕಲ್ಪ: ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಬೆಂಗಳೂರು ಮತ್ತು ಮಲೆನಾಡಿನ ಭಾಗದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಪೃಥ್ವಿರಾಜ್ ಪಾಟೀಲ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸಿದ್ದಾರೆ. ನಾಗಶ್ರೀ ಹೆಬ್ಬಾರ್, ಆಯುಷ್, ಗಣಪತಿ ಹೆಗಡೆ, ಸ್ವರೂಪ್, ಸಂಧ್ಯಾ, ಪೂಜಾ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ

ಸೀಟ್ ​ಎಡ್ಜ್: ಯೂಟ್ಯೂಬ್ ವ್ಲಾಗರ್ ಕಹಾನಿ ಇರುವ ‘ಸೀಟ್ ಎಡ್ಜ್’ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ನಟಿಸಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಹಾನಿ ಈ ಸಿನಿಮಾದಲ್ಲಿ ಇದೆ. ಹಾರರ್, ಥ್ರಿಲ್ಲರ್ ಪ್ರಕಾರದ ಈ ಸಿನಿಮಾದಲ್ಲಿ ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಚೌಕಿದಾರ್: ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಧನ್ಯಾ ರಾಮ್​ಕುಮಾರ್, ಸಾಯಿಕುಮಾರ್, ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್ ಕಥೆ ಈ ಸಿನಿಮಾದಲ್ಲಿದೆ. ಈ ಸಿನಿಮಾಗಳ ಜೊತೆ ‘ಶ್ರೀಜಗನ್ನಾಥ ದಾಸರು 2’, ‘ಮಾವುತ’ ಮುಂತಾದ ಸಿನಿಮಾಗಳು ಕೂಡ ಬಿಡುಗಡೆ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:12 pm, Thu, 29 January 26