ವಿಷ್ಣು ಸಮಾಧಿ ತೆರವು ವಿಚಾರ: ಸಿಎಂ ಸಿದ್ದರಾಮಯ್ಯರ ಭೇಟಿಯಾದ ನಟ ಅನಿರುದ್ಧ್
Vishnuvardhan memorial: ಇಂದು (ಆಗಸ್ಟ್ 28) ವಿಷ್ಣುವರ್ಧನ್ ಸಮಾಧಿ ಸ್ಥಳದ ವಿಚಾರ ಹಾಗೂ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದರು. ಸಿಎಂ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅನಿರುದ್ಧ್ ಸಿಎಂ ಸ್ಪಂದನೆ ಹೇಗಿತ್ತು ಎಂಬುದನ್ನು ತಿಳಿಸಿದ್ದಾರೆ.

ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಬಾಲಣ್ಣ ಕುಟುಂಬದವರು ನೆಲಸಮ ಮಾಡಿ ತಿಂಗಳಿಗೂ ಹೆಚ್ಚು ಸಮಯವಾಗಿದೆ. ಈ ಘಟನೆ ವಿಷ್ಣುವರ್ಧನ್ ಕುಟುಂಬದವರು ಮತ್ತು ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಅಭಿಮಾನಿಗಳು ಕೆಲವರು ವಿಷ್ಣುವರ್ಧನ್ ಕುಟುಂಬದವರನ್ನು ದೂರುವ ಕಾರ್ಯವನ್ನೂ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ಕರೆದಿದ್ದ ನಟ ಅನಿರುದ್ಧ್ ವಿಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳಲು ಕುಟುಂಬ ಮಾಡಿದ ಪ್ರಯತ್ನಗಳ ಪಟ್ಟಿಯನ್ನೇ ನೀಡಿದ್ದರು. ಇಂದು (ಆಗಸ್ಟ್ 28) ವಿಷ್ಣುವರ್ಧನ್ ಸಮಾಧಿ ಸ್ಥಳದ ವಿಚಾರ ಹಾಗೂ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದರು.
ಸಿಎಂ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅನಿರುದ್ಧ್, ‘ವಿಷ್ಣುವರ್ಧನ್ ಸಮಾಧಿ ಸ್ಥಳದ ಬಗ್ಗೆ ಈ ಹಿಂದೆಯೂ ಸಿದ್ದರಾಮಯ್ಯ ವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇಂದೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವಿಷಯವನ್ನು ಸಚಿವ ಸಂಪುಟದಲ್ಲಿಟ್ಟು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ’ ಎಂದರು. ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಮಾತನಾಡಿದ ಅನಿರುದ್ಧ್, ‘ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳುವುದು ಸರಿಯಾದ ಕ್ರಮವಲ್ಲ. ಏಕೆಂದರೆ ವಿಷ್ಣುವರ್ಧನ್ ಅವರು ಆ ಪ್ರಶಸ್ತಿಗೆ ಅರ್ಹರು ಹಾಗಾಗಿ ಅವರ ಅರ್ಹತೆಯನ್ನು ಮತ್ತೊಮ್ಮೆ ಸಿಎಂ ಅವರಿಗೆ ನೆನಪಿಸಿದ್ದೇನೆ’ ಎಂದರು.
‘ವಿಷ್ಣುವರ್ಧನ್ ಸಮಾಧಿ ಧ್ವಂಸ ವಿಚಾರ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಗಮನದಲ್ಲಿದೆ. ಹಿಂದೆ ನಾವು ಕೇಳಿದ ಹಾಗೆ ಕರ್ನಾಟಕ ಸರ್ಕಾರ ಅಪ್ಪ ಅವರ ಸ್ಮಾರಕ ಮಾಡಿದ್ದಾರೆ, ಈಗಾಗಲೇ ಸರ್ಕಾರ ಐದು ಎಕರೆ ಜಮೀನಿನಲ್ಲಿ ಸ್ಮಾರಕ ಮಾಡಿದೆ, ಮೊನ್ನೆ ಸಮಾಧಿ ದ್ವಂಸ ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದೇನೆ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಸರ್ಕಾರ ಮಾಡಿದೆ, ಹೀಗಾಗಿ ಬೆಂಗಳೂರಿನಲ್ಲಿಯೂ ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ’ ಎಂದರು.
ಇದನ್ನೂ ಓದಿ:ವಿಷ್ಣುವರ್ಧನ್ ಸಮಾಧಿ ಉಳಿವಿಗೆ ಪ್ರಯತ್ನಿಸಿದ ಸ್ಟಾರ್ ನಟರು ಯಾರು?
‘ವಿಷ್ಣುವರ್ಧನ್ ಅವರ ಸ್ಮಾರಕ ಇರೋದನ್ನ ದ್ವಂಸ ಮಾಡಿದ್ದು ದುರಂತ, ಅಲ್ಲಿಯೇ ಅವರ ಅಂತ್ಯಕ್ರಿಯೆ ಆಗಿರೋದ್ರಿಂದ ಅದಕ್ಕೆ ಆದ್ಯತೆ, ಪ್ರಾಮುಖ್ಯತೆ ಇದೆ. ಬಾಲಣ್ಣ ಅವರ ಜಾಗದಲ್ಲಿಯೂ ನಾವು ಸ್ಮಾರಕ ಬೇಕು ಅನ್ನೊದು ತಪ್ಪಾಗುತ್ತದೆ. ರಾಜ್ಯ ಸರ್ಕಾರ ಆ ಜಾಗ ಖರೀದಿ ಮಾಡುತ್ತದೆಯಾ ನೋಡಬೇಕು, ಒಂದು ದುರಂತದ ಘಟನೆಯಾಗಿದೆ, ಆ ಜಮೀನು ಬಾಲಣ್ಣ ಕುಟುಂಬಕ್ಕೆ ಸೇರಿದೆ, ಬಾಲಣ್ಣ ಕುಟುಂಬದ ಬಳಿಯೂ ಕೂಡ ಅಭಿಮಾನಿಗಳಿಗಾಗಿ 10 ಗುಂಟೆ ಜಾಗ ಕೇಳಿದ್ದೆ ಸರ್ಕಾರ ಇದನ್ನು ಏನು ಮಾಡುತ್ತದೆ ಗೊತ್ತಿಲ್ಲ’ ಎಂದಿದ್ದಾರೆ.
‘ನಾವು ಕುಟುಂಬದವರಾಗಿ ಮತ್ತೆ ಮತ್ತೆ ಕೇಳೋದು ತಪ್ಪಾಗುತ್ತದೆ. ನಾವು ಕೇಳಿದ ಹಾಗೆ ಮೈಸೂರಿನಲ್ಲಿ ಸ್ಮಾರಕವಾಗಿದೆ, ಮತ್ತೆ ಇಲ್ಲಿಯೂ ಮಾಡಿ ಎನ್ನೋದರಲ್ಲಿ ಅರ್ಥ ಇಲ್ಲ, ಬಾಲಣ್ಣ ಕುಟುಂಬ ಮನಸು ಮಾಡಿ ಮತ್ತೆ ಸ್ಮಾರಕ ಕಟ್ಟೋಕೆ ಅವಕಾಶ ಮಾಡಿಕೊಡಬೇಕು’ ಎಂದು ಅನಿರುದ್ಧ್ ಹೇಳಿದ್ದಾರೆ.
ಇದೀಗ ಅಭಿಮಾನಿಗಳೆಲ್ಲ ಸೇರಿಕೊಂಡು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಹರಿದಾಡುತ್ತಿರುವ ಸುದ್ದಿಯಂತೆ ನಟ ಸುದೀಪ್ ಅವರು ವಿಷ್ಣುವರ್ಧನ್ ಅವರ ನೆಲಸಮಗೊಂಡ ಸ್ಮಾರಕಕ್ಕೆ ಸಮೀಪದಲ್ಲಿಯೇ ಜಾಗ ಖರೀದಿ ಮಾಡಿದ್ದು ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




