ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ತಿಕ್ಕಾಟ ಮುಂದುವರಿದಿದೆ. ಸುದೀಪ್ ಅವರು ಹಣ ಪಡೆದು, ಕಾಲ್ಶೀಟ್ ನೀಡಿಲ್ಲ ಎಂದು ಕುಮಾರ್ ಆರೋಪಿಸಿದ್ದರು. ಆದರೆ, ಸುದೀಪ್ ಅವರು ಇದನ್ನು ತಳ್ಳಿ ಹಾಕಿದ್ದರು. ಈಗ ಅವರು ಕುಮಾರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ಕುಮಾರ್ ಅವರು ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಅವರಿಗೆ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಸಾಥ್ ನೀಡಿದ್ದಾರೆ.
‘ನನಗೆ ಆಗಿರುವ ಸಮಸ್ಯೆ ಎಲ್ಲರಿಗೂ ಗೊತ್ತು. ಚಿತ್ರರಂಗಕ್ಕೆ ಫಿಲ್ಮ್ ಚೇಂಬರ್ ಒಂದುಮನೆ ಇದ್ದಹಾಗೆ. ಹೀಗಾಗಿ ನನ್ನ ಸಮಸ್ಯೆಯನ್ನು ಇಲ್ಲಿಯೇ ಬಗೆಹರಿಸಿಕೊಳ್ಳಲು ಬಂದಿದ್ದೇನೆ. ಸುದೀಪ್ ಅವರ ಬಗ್ಗೆ ನಾನು ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದಷ್ಟೇ ಹೇಳಿದ್ದೇನೆ. ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಮಾಡುತ್ತೇನೆ’ ಎಂದು ಕುಮಾರ್ ಹೇಳಿದ್ದಾರೆ.
‘ನಾನು ಯಾರ ಸಹಾಯವನ್ನೂ ಕೇಳಿಲ್ಲ. ನನ್ನದು ಏನಿದೆ ಅದನ್ನು ಕ್ಲಿಯರ್ ಮಾಡಿದರೆ ಸಾಕು. ನಾವು ನಿರ್ಮಾಪಕರು, ಸಾಕಷ್ಟು ಜನರನ್ನು ಬೆಳೆಸಿದ್ದೀವಿ. ಎಲ್ಲರ ಗೌರವವೂ ಉಳಿಯಬೇಕು. ನನಗೆ ತೊಂದರೆಯಾದಾಗ ನಾನು ಯಾರ ಮುಖಾಂತರ ಕೇಳಬೇಕು? ಮಾಧ್ಯಮದವರ ಮುಂದೆಯೇ ಕೇಳಬೇಕು. ನಾನು ಹಾಗೆಯೇ ಮಾಡಿದ್ದೇನೆ. ಅವರು ಸಭೆಗೆ ಬರಲಿ. ಆಗ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ’ ಎಂದಿದ್ದಾರೆ ಕುಮಾರ್.
ಇದನ್ನೂ ಓದಿ: ಸುದೀಪ್ ವಿರುದ್ಧ ದೂರು ನೀಡಿಲ್ಲ: ಉಲ್ಟಾ ಹೊಡೆದ ನಿರ್ಮಾಪಕ ಕುಮಾರ್
‘ರಾಜಿ ಸಂಧಾನಕ್ಕೆ ನಾವು ರೆಡಿ. ಅವರು ಕರೆಯಬೇಕಿತ್ತು, ಆದರೆ ನಾವೇ ಕರೆಯುತ್ತೀದ್ದೇವೆ. ಪ್ರೀತಿಯಿಂದ ನಡೆದರೆ ಮಾತ್ರ ವ್ಯವಹಾರ. ಯಾರನ್ನು, ಯಾವುದಕ್ಕೂ ಬಲವಂತ ಮಾಡುವುದಕ್ಕೆ ಆಗುವುದಿಲ್ಲ. ನಮ್ಮಲ್ಲಿರುವ ಹಿರಿಯರು ಅವರಿಗೆ ಮಾರ್ಗದರ್ಶನ ನೀಡಬೇಕು. ನಮ್ಮ ಅಧ್ಯಕ್ಷರು ಬಂದ ಮೇಲೆ ಶಿವಣ್ಣ ಭೇಟಿಯ ಬಗ್ಗೆ ನಿರ್ಧಾರ ಮಾಡುತ್ತೇವೆ. ಸೂರಪ್ಪ ಬಾಬು ಹಿಂದೆ ನಿಂತು ಮಾಡಿಸುತ್ತಿರುವ ವಿಚಾರ ಸುಳ್ಳು’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Mon, 17 July 23