ದಾನಿಗಳು ಕೊಟ್ಟ ಹಣದಲ್ಲಿ ಭಾರೀ ಗೋಲ್ಮಾಲ್? ಸಹಕಲಾವಿದರಿಂದ ಗಂಭೀರ ಆರೋಪ
ಕೊವಿಡ್ನಿಂದ ಚಿತ್ರರಂಗದ ಸಾಕಷ್ಟು ಜನರಿಗೆ ತೊಂದರೆ ಉಂಟಾಯಿತು. ಇದನ್ನು ಅರಿತ ನಿರ್ಮಾಪಕರು, ನಟರು ಹಾಗೂ ಸರ್ಕಾರ ಇವರ ಸಹಾಯಕ್ಕೆ ನಿಂತಿದ್ದಾರೆ.
ಕೊವಿಡ್ ಎರಡನೇ ಅಲೆಗೆ ಸ್ಯಾಂಡಲ್ವುಡ್ ತತ್ತರಿಸಿದೆ. ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದ ಅನೇಕರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ಗಳು ಸಿನಿಮಾ ರಂಗದಲ್ಲಿರುವವರಿಗೆ ಸಹಾಯ ಮಾಡುವ ಕೆಲಸ ಮಾಡಿದ್ದಾರೆ. ಆದರೆ, ಅವರು ನೀಡಿದ ಹಣ, ಫುಡ್ಕಿಟ್ ನಮ್ಮ ಕೈ ಸೇರುತ್ತಿಲ್ಲ ಎಂದು ಸಹಕಲಾವಿದರು ಆರೋಪಿಸಿದ್ದಾರೆ.
ಕೊವಿಡ್ ಎರಡನೇ ಅಲೆಯಿಂದ ಲಾಕ್ಡೌನ್ ಘೋಷಣೆ ಮಾಡಲಾಯಿತು. ಇದರಿಂದ ಚಿತ್ರರಂಗದ ಕೆಲಸಗಳು ನಿಂತವು. ಹೀಗಾಗಿ, ಸಾಕಷ್ಟು ಜನರಿಗೆ ತೊಂದರೆ ಉಂಟಾಯಿತು. ಇದನ್ನು ಅರಿತ ನಿರ್ಮಾಪಕರು, ನಟರು ಹಾಗೂ ಸರ್ಕಾರ ಇವರ ಸಹಾಯಕ್ಕೆ ನಿಂತಿದ್ದಾರೆ. ಆದರೆ, ಇದಾವುದೂ ನಮಗೆ ತಲುಪಿಲ್ಲ ಎಂದು ಸಹಕಲಾವಿದರ ಸಂಘದವರು ಆರೋಪಿಸಿದ್ದಾರೆ.
‘ದಾನಿಗಳು ನೀಡೋ ನೆರವು ಸಹಕಲಾವಿದರಿಗೆ ಸಿಗುತ್ತಿಲ್ಲ. ಹಲವರು ಲಕ್ಷ, ಲಕ್ಷ ದುಡ್ಡು ಕೊಡುತ್ತಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳೇ ಇದನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಸಿನಿಮಾ ಕಲಾವಿದರಿಗೆ , ಕಾರ್ಮಿಕರಿಗೆ ಸಹಾಯ ಮಾಡ್ತಾರೆ. ಆದರೆ, ಅದು ನಮಗೆ ಮಾತ್ರ ಸಿಗುತ್ತಿಲ್ಲ. ಊಟ ಇಲ್ಲದೇ ಸಹಕಲಾವಿದರು ಬೀದಿ, ಬೀದಿಯಲ್ಲಿ ಅಲೆಯುತ್ತಿದ್ದಾರೆ. ನಮಗೆ ಒಂದು ಕೆಜಿ ಅಕ್ಕಿ ಕೂಡ ಕೊಟ್ಟಿಲ್ಲ’ ಎಂದು ಸಹಕಲಾವಿದರ ಸಂಘದ ಅಧ್ಯಕ್ಷ ಗಂಗಾಧರ್ ಹೇಳಿದ್ದಾರೆ.
ಈ ಬಗ್ಗೆ ಗಂಗಾಧರ್ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕ ಸಂಘಕ್ಕೆ ದೂರು ನೀಡಿದ್ದಾರೆ. ಸೋಮವಾರ (ಜೂನ್ 28) ಆನಂದ್ ರಾವ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ನಟ ಯಶ್, ಉಪೇಂದ್ರ, ನಿರ್ಮಾಪಕ ವಿಜಯ್ ಕಿರಗಂದೂರು, ಕೆ. ಮಂಜು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಚಿತ್ರರಂಗದಲ್ಲಿ ಕಷ್ಟದಲ್ಲಿರುವವರ ಸಹಾಯ ಮಾಡೋಕೆ ಮುಂದೆ ಬಂದಿದ್ದಾರೆ. ಇನ್ನು, ಸರ್ಕಾರ ಕೂಡ ಎರಡನೇ ಹಂತದ ಪ್ಯಾಕೇಜ್ನಲ್ಲಿ ಪರಿಹಾರ ಘೋಷಣೆ ಮಾಡಿದೆ. ಇವೆಲ್ಲವನ್ನೂ ತಲುಪಿಸುವ ಕೆಲಸ ಸದ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ:
ಮಂಡ್ಯಕ್ಕೆ ಹೈಟೆಕ್ ICU, 2 ಆಮ್ಲಜನಕ ಘಟಕ ನೀಡಿದ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು