‘ಮಲಯಾಳಂ ರೀತಿಯ ಸಿನಿಮಾ ಮಾಡೋಕೆ ಅವರಿದ್ದಾರೆ, ನಾವು ನಮ್ಮ ಕಥೆ ಹೇಳಬೇಕು’; ರಾಜ್ ಬಿ. ಶೆಟ್ಟಿ
ಇತ್ತೀಚೆಗೆ ರಾಜ್ ಬಿ. ಶೆಟ್ಟಿ ನಟನೆಯ ‘ರೂಪಾಂತರ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಮಲಯಾಳಂ ಸಿನಿಮಾಗಳನ್ನು ನೋಡುತ್ತಾರೆ, ಕನ್ನಡ ಸಿನಿಮಾಗಳನ್ನು ನೋಡಲ್ಲ ಎನ್ನುವ ಮಾತು ಇದೆ. ಈ ಮಾತನ್ನು ರಾಜ್ ಶೆಟ್ಟಿ ಒಪ್ಪುವುದಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ರಾಜ್ ಬಿ. ಶೆಟ್ಟಿ ನಟನೆಯ ‘ರೂಪಾಂತರ’ ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಈ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಶುರುವಾಗಿದೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಲೇಖಾ ನಾಯ್ಡು, ಭರತ್ ಜಿಬಿ, ಅಂಜನ್ ಭಾರದ್ವಾಜ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿರುವುದಕ್ಕೆ ರಾಜ್ ಅವರು ಮೆಚ್ಚುಗೆಯ ಮಾತನಾಡಿದ್ದಾರೆ. ಈ ಚಿತ್ರವನ್ನು ಮಿಥಿಲೇಶ್ ಎಡವಲತ್ ಅವರು ನಿರ್ದೇಶನ ಮಾಡಿದ್ದಾರೆ.
‘ಕನ್ನಡ ಸಿನಿಮಾಗೆ ಜನ ಬರುತ್ತಿಲ್ಲ ಅನ್ನೋ ಮಾತು ಇತ್ತೀಚೆಗೆ ಹೆಚ್ಚಿದೆ. ಆದರೆ, ನಮ್ಮ ಸಿನಿಮಾಗೆ ನಾವು ಅಂದುಕೊಂಡಿದ್ದಕ್ಕಿಂತಲೂ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಎಲ್ಲರಿಗೂ ಸಲ್ಲುವ ಸಿನಿಮಾ ಅಲ್ಲ ಅನ್ನೋದು ನಮಗೆ ಗೊತ್ತು. ಇದು ತುಂಬಾ ಗಂಭೀರ ಸಿನಿಮಾ. ಸಿನಿಮಾನ ತುಂಬಾನೇ ಇಷ್ಟಪಡುವವರಿಗೆ ನಮ್ಮ ಚಿತ್ರ ಇಷ್ಟ ಆಗುತ್ತದೆ. ಆದಾಗ್ಯೂ ಈ ಸಿನಿಮಾನ ವಯಸ್ಸಾದವರು, ಫ್ಯಾಮಿಲಿ ಮಂದಿ ನೋಡುತ್ತಿದ್ದಾರೆ’ ಎಂದಿದ್ದಾರೆ ಅವರು.
ಮಲಯಾಳಂ ಸಿನಿಮಾಗಳನ್ನು ನೋಡುತ್ತಾರೆ, ಕನ್ನಡ ಸಿನಿಮಾಗಳನ್ನು ನೋಡಲ್ಲ ಎನ್ನುವ ಮಾತು ಇದೆ. ಈ ಮಾತನ್ನು ರಾಜ್ ಶೆಟ್ಟಿ ಒಪ್ಪುವುದಿಲ್ಲ. ‘ಮಲಯಾಳಂ ಸಿನಿಮಾಗಳು ಪೀಕ್ ಆಗಿರೋದು ನಾಲ್ಕೈದು ವರ್ಷಗಳ ಹಿಂದೆ. ಅವರು ಇದಕ್ಕಾಗಿ 15 ವರ್ಷ ದುಡಿದಿದ್ದಾರೆ. ಹೀಗಾಗಿ ಮಾರುಕಟ್ಟೆ ಅಲ್ಲಿ ಸೆಟ್ ಆಗಿದೆ. ಆದರೆ, ನಮ್ಮವರು ಆ ರೀತಿ ಸೆಟ್ ಮಾಡಿಲ್ಲ. ಅಲ್ಲಿಯೂ ಸಾಕಷ್ಟು ಸಿನಿಮಾಗಳು ರೆಡಿ ಆಗುತ್ತವೆ. ಆದರೆ, ಎಲ್ಲವೂ ಇಲ್ಲಿ ಬರಲ್ಲ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
View this post on Instagram
‘ಮಲಯಾಳಂ ಸಿನಿಮಾನ ನೋಡುವ ಆಡಿಯನ್ಸ್ ಇದ್ದಾರೆ. ಆ ಒಂದು ಸಂಸ್ಕೃತಿನ ನಾವು ಇಲ್ಲಿ ಡೆವಲಪ್ ಮಾಡಿಲ್ಲ. ಮಲಯಾಳಂ ತರ ಸಿನಿಮಾ ಮಾಡೋಕೆ ಮಲಯಾಳಂನವರು ಇದ್ದಾರೆ. ನಾವು ನಮ್ಮ ರೀತಿಯ ಸಿನಿಮಾ ಮಾಡಬೇಕು. ಇಲ್ಲಿಯವರ ಕಥೆಯನ್ನು ನಾವು ಹೇಳಬೇಕು. ಸಿನಿಮಾ ಚೆನ್ನಾಗಿ ಮಾಡಿದಾಗ ಜನ ಒಪ್ಪಿಕೊಳ್ಳುತ್ತಾರೆ. ಹೋಟೆಲ್ ಚೆನ್ನಾಗಿ ನಡೆಯುತ್ತಿಲ್ಲ ಎಂದಾಗ ಹೋಟೆಲ್ ಎದುರು ಬಂದು ಅತ್ತರೆ ಪ್ರಯೋಜನ ಇಲ್ಲ. ಏನು ಬದಲಾಯಿಸಬೇಕು ಎಂಬುದನ್ನು ನೋಡಬೇಕು. ಭಾವನಾತ್ಮಕವಾಗಿ ಮಾತನಾಡುವುದನ್ನು ನಿಲ್ಲಸಬೇಕು’ ಎಂಬುದು ರಾಜ್ ಬಿ. ಶೆಟ್ಟಿ ಸಲಹೆ.
ಇದನ್ನೂ ಓದಿ: ಸಿನಿಮಾಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಹೆಸರಿಟ್ಟಿದ್ದೇಕೆ? ವಿವರಿಸಿದ್ದಾರೆ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ಅವರು ಸದ್ಯ ಶಿವರಾಜ್ಕುಮಾರ್ ನಟನೆಯ ‘45’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಬಾಕಿ ಇದೆ. ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಆ ಬಗ್ಗೆ ಘೋಷಣೆ ಇನ್ನಷ್ಟೇ ಆಗಬೇಕಿದೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:02 pm, Mon, 29 July 24