ಥಳಕು ಬಳುಕಿನ ಲೋಕದಲ್ಲಿ ‘ನೆಟ್’ವರ್ಥ್ ತುಳುಕುತ್ತಿತ್ತು! ಆದ್ರೂ ಇರುವುದೆಲ್ಲವ ಬಿಟ್ಟು..
ಥಳಕುಬಳುಕಿನ ಜೀವನದಲ್ಲಿ ‘ನೆಟ್’ವರ್ಥ್ ತುಳುಕುತ್ತಿತ್ತು.. ಆದರೂ ಇರುವುದೆಲ್ಲವ ಬಿಟ್ಟು ಸುಶಾಂತವಾಗಿ ಹೊರಟುಬಿಟ್ಟ ಸ್ಫುರದ್ರೂಪಿ ಸುಶಾಂತ! ಅಂತರ್ಜಾಲ ತಾಣದ ‘ನೆಟ್’ವರ್ಥ್ ಪ್ರಕಾರ ಲಕ್ಷಾಂತರ ಫಾಲೋಯರ್ಗಳಿದ್ದರು ಆತನಿಗೆ. ಇನ್ಸ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನೆಟ್ ಖಾತೆಗಳಲ್ಲಿ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದರು. ಆದ್ರೆ ಆ ವರ್ಚುಯಲ್ ಲೋಕ ಆತನಿಗೆ ಬೇಡವಾಗಿತ್ತು. ಇನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದ ಇದೇ ಸ್ಫುರದ್ರೂಪಿ ಸುಶಾಂತ! ಅದೂ ಅವನಿಗೆ ‘ಸಾಕು’ ಅನ್ನಿಸಲಿಲ್ಲ. ಆ ಚರಾಚರ ಆಸ್ತಿಯೂ ನಶ್ವರ ಎಂದು ಬಗೆದು ದೂರತೀರಕೆ ನಡೆದೇಬಿಟ್ಟ ಮುದ್ದಿನ […]
ಥಳಕುಬಳುಕಿನ ಜೀವನದಲ್ಲಿ ‘ನೆಟ್’ವರ್ಥ್ ತುಳುಕುತ್ತಿತ್ತು.. ಆದರೂ ಇರುವುದೆಲ್ಲವ ಬಿಟ್ಟು ಸುಶಾಂತವಾಗಿ ಹೊರಟುಬಿಟ್ಟ ಸ್ಫುರದ್ರೂಪಿ ಸುಶಾಂತ! ಅಂತರ್ಜಾಲ ತಾಣದ ‘ನೆಟ್’ವರ್ಥ್ ಪ್ರಕಾರ ಲಕ್ಷಾಂತರ ಫಾಲೋಯರ್ಗಳಿದ್ದರು ಆತನಿಗೆ. ಇನ್ಸ್ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನೆಟ್ ಖಾತೆಗಳಲ್ಲಿ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದರು. ಆದ್ರೆ ಆ ವರ್ಚುಯಲ್ ಲೋಕ ಆತನಿಗೆ ಬೇಡವಾಗಿತ್ತು. ಇನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದ ಇದೇ ಸ್ಫುರದ್ರೂಪಿ ಸುಶಾಂತ! ಅದೂ ಅವನಿಗೆ ‘ಸಾಕು’ ಅನ್ನಿಸಲಿಲ್ಲ. ಆ ಚರಾಚರ ಆಸ್ತಿಯೂ ನಶ್ವರ ಎಂದು ಬಗೆದು ದೂರತೀರಕೆ ನಡೆದೇಬಿಟ್ಟ ಮುದ್ದಿನ ಕುವರ ಸುಶಾಂತ್ ಸಿಂಗ್ ರಜಪೂತ್.
ನಟ ಸುಶಾಂತ್ ಸಿಂಗ್ ರಜಪೂತ್ರ ಹಠಾತ್ ಆತ್ಮಹತ್ಯೆ ಬರೀ ಬಾಲಿವುಡ್ಗೆ ಮಾತ್ರವಲ್ಲದೆ ಇಡೀ ದೇಶಕ್ಕೇ ಆಘಾತ ಉಂಟುಮಾಡಿತ್ತು. ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಕಥೆಯನ್ನಾಧಾರಿತ ಚಿತ್ರದಲ್ಲಿ ತಮ್ಮ ಮನೋಜ್ಞ ನಟನೆಯಿಂದ ಎಲ್ಲರ ಮನಸೆಳೆದಿದ್ದ ಸುಶಾಂತ್ ಇದ್ದಕ್ಕಿದಂತೆ ಜೀವನಕ್ಕೆ ಗುಡ್ಬೈ ಹೇಳಿದ್ದು ಎಲ್ಲರಿಗೂ ದೊಡ್ಡ ಶಾಕ್ ಆಗಿತ್ತು.
ಸುಶಾಂತ್ ನೇಣಿಗೆ ಶರಣಾಗಲು ಕಾರಣವೇನು..? ಇದೀಗ, ಅವರ ಸಾವಿಗೆ ಇದೇ ಕಾರಣವೆಂದು ನೂರಾರು ಕಥೆಗಳು ಹರಿದಾಡುತ್ತಿವೆ. ಆರ್ಥಿಕ ಸಂಕಷ್ಟ, ಸ್ನೇಹಿತರಿಲ್ಲದ ಕೊರಗು, ಮಾನಸಿಕ ಖಿನ್ನತೆ ಹೀಗೆ ಹತ್ತು ಹಲವು ವದಂತಿಗಳು ಕೇಳಿ ಬರುತ್ತಿವೆ. ಹಾಗಾದರೆ ಸುಶಾಂತ್ ತಮ್ಮ ಪ್ರಾಣ ತ್ಯಜಿಸಲು ಇವುಗಳೇ ಕಾರಣವಾಯ್ತಾ? ಎಂದು ನಿಖರ ಕಾರಣ ತಿಳಿದುಬಂದಿಲ್ಲ.
ಸುಶಾಂತ್ ತಮ್ಮ ಮನೋಜ್ಞ ನಟನೆ ಹಾಗೂ ಅತ್ಯುತ್ತಮ ಚಿತ್ರಗಳ ಆಯ್ಕೆಯ ಬಗ್ಗೆ ಸಾಕಷ್ಟು ಪ್ರಶಂಸೆ ಪಡೆದಿದ್ದರು. ಕೇವಲ ಬಾಕ್ಸ್ ಆಫೀಸ್ ಸಕ್ಸಸ್ ಅಪೇಕ್ಷಿಸದೆ ತಮ್ಮ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಒಳ್ಳೆಯ ಸಂದೇಶ ಸಾರುವ ಹಂಬಲವೂ ಅವರಲ್ಲಿ ಇತ್ತು.
ಹಣದ ಕೊರತೆಯಿತ್ತು ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಕೇವಲ ಯಶಸ್ಸನ್ನು ಅರಸುತ್ತಾ ಅದರ ಬೆನ್ನತ್ತದೆ, ಯಶಸ್ಸನ್ನೇ ತಮ್ಮ ಹತ್ರ ಸೆಳೆದಿದ್ದ ಈ 34 ವಯಸ್ಸಿನ ಸ್ಫುರದ್ರೂಪಿ ನಟನಿಗೆ ದುಡ್ಡಿನ ಕೊರತೆ ಎದುರಾಗಿತ್ತು ಅಂತಾ ನಂಬೋಕೆ ಕಷ್ಟಸಾಧ್ಯ! ಯಾಕಂದ್ರೆ ಇಹಲೋಕ ತ್ಯಜಿಸಿದ ಸುಶಾಂತ್ ಬಿಟ್ಟುಹೋದ ಆಸ್ತಿಯ ನಿವ್ವಳ ಮೌಲ್ಯ ಹತ್ತಾರು ಕೋಟಿ ರೂಪಾಯಿಗಳಲ್ಲಿ ಇತ್ತು ಎಂದು ತಿಳಿದುಬಂದಿದೆ. ಜೊತೆಗೆ ತಾವು ನಟಿಸಿದ ಪ್ರತಿ ಚಿತ್ರಕ್ಕೂ ಅವರು ಸುಮಾರು 5 ರಿಂದ 7 ಕೋಟಿಯನ್ನು ಸಂಭಾವನೆ ಪಡೆಯುತ್ತಿದ್ದರಂತೆ. ಹಾಗಾಗಿ ಇವರ ಆಸ್ತಿ ಹಾಗೂ ಆದಾಯದ ಒಟ್ಟು ಮೌಲ್ಯ ಸರಿಸುಮಾರು 39 ಕೋಟಿ ರೂಪಾಯಿಯಷ್ಟು ಇತ್ತು ಎಂದು ಹೇಳಲಾಗಿದೆ. ಹಾಗಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಹಣದ ಕೊರತೆ ಎಂದೇ ಹೇಳಲು ಸಾಧ್ಯವಿಲ್ಲ.
ಸ್ಟಾರ್ ನಟನ ಚಿತ್ತ ನಕ್ಷತ್ರಗಳತ್ತ, ಚಂದ್ರನ ಮೇಲೆ ಸೈಟ್ ಖರೀದಿ..! ನಟನೆಯಲ್ಲದೆ ಸುಶಾಂತ್ರನ್ನ ಆಕರ್ಷಿಸಿದ ಮತ್ತೊಂದು ವಿಷಯ ಎಂದರೆ ಅದು ಖಗೋಳಶಾಸ್ತ್ರ. ಬಾಹ್ಯಾಕಾಶ, ನಕ್ಷತ್ರ, ಮತ್ತು ಗ್ರಹಗಳ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ಸದಾ ಹಾತೊರೆಯುತ್ತಿತ್ತು ಸುಶಾಂತ್ರ ಮನಸ್ಸು. ಇದಕ್ಕಾಗಿಯೇ ತಮ್ಮ ಮನೆಯಲ್ಲಿ ಟೆಲಿಸ್ಕೋಪ್ ಒಂದನ್ನು ಖರೀದಿಸಿದ್ದರು.
ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಸುಶಾಂತ್ ಸಿಂಗ್ ರಜಪೂತ್ ಚಂದ್ರನ ಮೇಲೆ ಒಂದು ನಿವೇಶವನ್ನು ಕೂಡ ಖರೀದಿ ಮಾಡಿದ್ದರಂತೆ. ಹೌದು, ಅಂತಾರಾಷ್ಟ್ರೀಯ ಚಾಂದ್ರಮಾನ ನಿವೇಶನ ಕಚೇರಿ (International Lunar Land Registry) ಎಂಬ ಸಂಸ್ಥೆಯಿಂದ ಚಂದ್ರನ ಭೂಭಾಗದ ಮೇಲಿರುವ ಮಸ್ಕೊವಿ ಸಾಗರ (Sea of Muscovy) ಎಂಬ ಪ್ರದೇಶದಲ್ಲಿ ಒಂದು ನಿವೇಶನವನ್ನು ಕೊಂಡುಕೊಂಡಿದ್ದರು. ಜೊತೆಗೆ ಇಸ್ರೋ ಮತ್ತು ನಾಸಾ ಬಾಹ್ಯಾಕಾಶ ಸಂಸ್ಥೆಗಳಿಗೆ ಪ್ರತಿ ವರ್ಷ ಕನಿಷ್ಠ 50 ಮಕ್ಕಳನ್ನ ಕಳುಹಿಸಿಕೊಡಬೇಕೆಂದು ಯೋಜನೆ ಸಹ ಹೊಂದಿದ್ದರು. ಹಾಗಾಗಿ ಇಷ್ಟೆಲ್ಲ ಮಾಡಿರುವ ಸುಶಾಂತ್ಗೆ ಆರ್ಥಿಕ ಸಮಸ್ಯೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಲಕ್ಷಾಂತರ ಅಭಿಮಾನಿಗಳು ಮಾತ್ರ ಹುಟ್ಟಿಕೊಂಡಿದ್ದರು.
ಇನ್ಸ್ಟಾಗ್ರಾಮ್ನಲ್ಲಿ 13.7 ಮಿಲಿಯನ್, ಟ್ವಿಟರ್ನಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇದಕ್ಕೆ ಸಾಕ್ಷಿಯೆಂಬಂತೆ ನಟ ಸುಶಾಂತ್ ಸೋಶಿಯಲ್ ಮೀಡಿಯಾ ಖಾತೆಗಳನ್ನ ಲಕ್ಷ ಲಕ್ಷ ಅಭಿಮಾನಿಗಳು ಫಾಲೋ ಮಾಡ್ತಿದ್ರು. ಸುಶಾಂತ್ರ ಇನ್ಸ್ಟಾಗ್ರಾಮ್ನಲ್ಲಿ 13.7 ಮಿಲಿಯನ್ ಫಾಲೋವರ್ಸ್ ಇದ್ದರೆ, ಟ್ವಿಟರ್ನಲ್ಲಿ 2.2 ಮಿಲಿಯನ್ ಹಿಂಬಾಲಕರಿದ್ದರು. ಇದರಿಂದ ರಜಪೂತ್ಗೆ ಸ್ನೇಹಿತರ ಮತ್ತು ಅಭಿಮಾನಿಗಳ ಕೊರಗು ಇರಲಿಲ್ಲ ಎಂದು ಭಾಸವಾಗುತ್ತೆ.
ಆದರೆ, ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮೆಸೇಜ್ ಒಂದು ಸುಶಾಂತ್ಗೆ ಇಷ್ಟೆಲ್ಲಾ ಫಾಲೋವರ್ಸ್ ಇದ್ರೂ ಆತ ಏಕಾಂಗಿಯಾಗಿದ್ದ. ಹಾಗಾಗಿ ಅದು ಕೇವಲ ವರ್ಚುಯಲ್ ಗೆಳೆತನ; ಕೃತಕ ಸಂಬಂಧಗಳು ಎಂದು ಹೇಳಲಾಗಿದೆ.
ಫೇಸ್ಬುಕ್ ಖಾತೆಯ ಕವರ್ ಪಿಚ್ಚರ್ ಹೇಳಿತ್ತಾ ಖಿನ್ನತೆಯ ಕಥೆ..? ಇದನ್ನು ಸುಶಾಂತ್ ಅರಿತಿದ್ದರೆಂಬುದು ಗೊತ್ತಿಲ್ಲ. ಆದರೆ ಕುತೂಹಲದ ವಿಚಾರವೆಂದರೆ ಸುಶಾಂತ್ ತಮ್ಮ ಫೇಸ್ಬುಕ್ ಖಾತೆಯ ಕವರ್ ಪಿಚ್ಚರ್ನಲ್ಲಿ ಖ್ಯಾತ ಚಿತ್ರ ಕಲಾವಿದೆ ವಿನ್ಸೆಂಟ್ ವಾನ್ ಗೋ (Vincent Van Gogh) ಅವರ ಮಹಾನ್ ಚಿತ್ರಕಲೆ ‘ಸ್ಟಾರಿ ಸ್ಟಾರಿ ನೈಟ್’ (Starry starry night) ಹಾಕಿಕೊಂಡಿದ್ದರು. ಹಲವರು ಹೇಳುವ ಪ್ರಕಾರ ವಾನ್ ಗೋ ಅವರು ಕೂಡ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಸುಶಾಂತ್ರ ಮನಸ್ಥಿತಿ ಇತ್ತ ಕಡೆಗೆ ವಾಲಿರಬಹುದು ಎಂದು ಈ ಚಿತ್ರ ತೋರಿಸುತ್ತಿದೆ. ಆದರೆ ಈ ವಾದವನ್ನು ಕೆಲವರು ತಳ್ಳಿಹಾಕಿದ್ದಾರೆ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಒಟ್ನಲ್ಲಿ, ಬಾಲಿವುಡ್ನ ಉದಯೋನ್ಮುಖ ಪ್ರತಿಭೆಯಾಗಿ ಹೊರಹೊಮ್ಮತ್ತಿದ್ದ ಸುಶಾಂತ್ರನ್ನು ಸ್ವತಃ ಚಿತ್ರರಂಗದ ರಾಜಕೀಯವೇ ಬಲಿಪಡೆಯಿತು ಎಂಬ ಮಾತೂ ಎಲ್ಲೆಡೆಯು ಓಡಾಡುತ್ತಿದೆ. ಚಿತ್ರರಂಗದ ಕೆಲವು ನಟರು ಸುಶಾಂತ್ ತಮ್ಮ ಬಳಿಯಿದ್ದ ಟೆಲಿಸ್ಕೋಪ್ನಿಂದ ಅಕ್ಕಪಕ್ಕದವರ ಮನೆಯಲ್ಲಿ ಇಣುಕಿ ನೋಡುತ್ತಿದ್ದರು ಎಂದು ನೀಡಿರುವ ಸಣ್ಣತನದ ಹೇಳಿಕೆಗಳು ಚಿತ್ರರಂಗದಲ್ಲಿರುವವರ ಕೀಳು ಮನಸ್ಥಿತಿಯನ್ನು ತೋರುತ್ತದೆ ಎಂದು ಹೇಳುವವರೇ ಹೆಚ್ಚು.
ಆದರೆ ಏನೇ ಇರಲಿ, ಯಾವುದರ ಕೊರತೆ ಇಲ್ಲದ ಈ ಪ್ರತಿಭೆ ಇಂಥ ನಿರ್ಣಯವನ್ನು ತೆಗೆದುಕೊಂಡಿದ್ದು ನಿಜಕ್ಕೂ ದುರದೃಷ್ಟಕರ. ತಮ್ಮ ಅಂತಿಮ ನಿರ್ಧಾರಕ್ಕೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಏನೂ ಕೊರತೆ ಇಲ್ಲದ ತುಂಬು ಬದುಕನ್ನು ಬಿಟ್ಟು ಇಹಲೋಕವನ್ನ ತ್ಯಜಿಸಿದರು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಗೋಪಾಲಕೃಷ್ಣ ಅಡಿಗರ ಕವನದ ಸಾಲಿನಂತೆ ಯಾವ ಮೋಹನ ಮುರಳಿಯ ಕರೆಯು ಸುಶಾಂತ್ರನ್ನ ಪರಲೋಕದ ದೂರ ತೀರಕ್ಕೆ ಸೆಳೆಯಿತೋ ಗೊತ್ತಿಲ್ಲ.
Published On - 3:07 pm, Tue, 23 June 20