ಡಾ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿ 24 ವರ್ಷಗಳಾಗಿವೆ. 24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್ಕುಮಾರ್ ಅಪಹರಣವಾಗಿತ್ತು. ಅಷ್ಟಕ್ಕೂ ರಾಜ್ಕುಮಾರ್ ಅವರನ್ನೇ ಅಪಹರಣ ಮಾಡಬೇಕು ಎಂಬ ಐಡಿಯಾ ವೀರಪ್ಪನ್ಗೆ ಬಂದಿದ್ದು ಹೇಗೆ? ಅಸಲಿಗೆ ವೀರಪ್ಪನ್, ಕಾಡಿನಲ್ಲಿ ಕುಕೃತ್ಯಗಳನ್ನು 1980ರಲ್ಲಿಯೇ ಪ್ರಾರಂಭ ಮಾಡಿದ ಆದರೆ 1990ರ ದಶಕದ ಅಂತ್ಯದ ವೇಳೆಗೆ ಪೊಲೀಸ್, ಅರಣ್ಯ ಇಲಾಖೆಯವರ ಶಿಸ್ತಿನ ಕಾರ್ಯಾಚರಣೆಗಳಿಂದ ಗಂಧದ ಕಳ್ಳಸಾಗಣೆ, ಆನೆದಂತದ ವ್ಯಾಪಾರಗಳು ಕ್ಷೀಣಿಸಿದ್ದವು. ಎಸ್ಐಟಿ ಅಧಿಕಾರಿ ಕೆ ವಿಜಯ್ ಕುಮಾರ್ ಹೇಳುವಂತೆ 1995 ರಿಂದ ಆಚೆಗೆ ವೀರಪ್ಪನ್ ಬಳಿ ಹಣವೇ ಇರಲಿಲ್ಲವಂತೆ. ತೀರ ಸಣ್ಣ ಪುಟ್ಟ ಹಣಕ್ಕೂ ಕಾಡಿನಲ್ಲಿ ದರೋಡೆಗಳನ್ನು ಮಾಡಲು ಪ್ರಾರಂಭಿಸಿದ್ದನಂತೆ ವೀರಪ್ಪನ್. ಒಂದು ಬಾರಿಯಂತೂ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೂ ಸಹ ಅಡವಿಟ್ಟು ಹಣ ಪಡೆದಿದ್ದನಂತೆ. ಅದೇ ಸಮದಯಲ್ಲಿ ವೀರಪ್ಪನ್ಗೆ ಅಪಹರಣದ ಐಡಿಯಾ ಬಂದಿದ್ದು.
ಯಾರನ್ನೇ ಅಪಹರಿಸಿದರೂ ಹಣ ಸಿಕ್ಕಿಬಿಡುತ್ತದೆ ಎಂಬ ಮೂಡನಂಬಿಕೆಯಲ್ಲಿದ್ದ ವೀರಪ್ಪನ್ ರಾಜ್ಕುಮಾರ್ ಅವರನ್ನು ಅಪಹರಿಸುವ ಮುನ್ನ ಕರ್ನಾಟಕದ ಖ್ಯಾತ ವನ್ಯಜೀವಿ ಸಂಶೋಧಕರೂ ಫೊಟೊಗ್ರಾಫರ್ಗಳೂ ಆಗಿರುವ ಕೃಪಾಕರ ಮತ್ತು ಸೇನಾನಿಯನ್ನು ಅಪಹರಣ ಮಾಡಿದ್ದ. ಆದರೆ ಆ ಇಬ್ಬರೂ, ವೀರಪ್ಪನ್ ಗೆ ಚೆನ್ನಾಗಿ ಮನವರಿಕೆ ಮಾಡಿಸಿದ ಬಳಿಕ ಇಬ್ಬರನ್ನೂ ಬಿಟ್ಟು ಕಳಿಸಿದ್ದ. ಅದಾದ ಬಳಿಕ ಫ್ರೊಫೆಸರ್ ಒಬ್ಬನನ್ನು ಕಿಡ್ನ್ಯಾಪ್ ಮಾಡಿದ್ದ. ಆದರೆ ಅದರಿಂದಲೂ ಆತನಿಗೆ ಹಣ ಸಿಗಲಿಲ್ಲ. ಆಗ ವೀರಪ್ಪನ್ಗೆ ಅರಿವಾಗಿದ್ದು ದೊಡ್ಡ ವ್ಯಕ್ತಿಗಳನ್ನು ಅಪಹರಿಸಿದರೆ ಮಾತ್ರವೇ ಹಣ ಸಿಗುತ್ತದೆ ಎಂದು.
ವೀರಪ್ಪನ್ ಮೊದಲಿಗೆ ಅಪಹರಣ ಮಾಡಬೇಕು ಎಂದುಕೊಂಡಿದ್ದು ಖ್ಯಾತ ನಟ ರಜನೀಕಾಂತ್ ಅವರನ್ನು. ರಜನೀಕಾಂತ್ ಅವರನ್ನು ಅಪಹರಿಸಲು ಯೋಜನೆ ಸಹ ನಡೆದಿತ್ತು. ವೀರಪ್ಪನ್ನ ಕೆಲವು ಸಹಚರರು ಚೆನ್ನೈಗೆ ಬಂದು ರಜನೀಕಾಂತ್ ಅವರ ಜೀವನ ಶೈಲಿ, ಓಡಾಟಗಳನ್ನೆಲ್ಲ ವೀಕ್ಷಿಸಿದ್ದರು. ಆದರೆ ಚೆನ್ನೈಗೆ ಹೋಗಿ ಅಪಹರಿಸಿ ಅಲ್ಲಿಂದ ತಮ್ಮ ಕಾಡುಗಳಿಗೆ ರಜನೀಕಾಂತ್ ಅನ್ನು ಕರೆತರುವುದು ಸಾಧ್ಯವಿಲ್ಲದ ಮಾತೆಂದು ಆ ಯೋಜನೆಯನ್ನು ಕೈಬಿಟ್ಟರು.
ಇದನ್ನೂ ಓದಿ:ಮತ್ತೆ ಶಿವಣ್ಣನೊಂದಿಗೆ ಕೈ ಜೋಡಿಸಿದ ‘ಕಿಲ್ಲಿಂಗ್ ವೀರಪ್ಪನ್’ ನಿರ್ಮಾಪಕ
ಅದಾದ ಬಳಿಕ ರಾಜಕಾರಣಿ ಸ್ಟಾಲಿನ್ ಅನ್ನು ಅಪಹರಣ ಮಾಡುವ ಯೋಜನೆ ರೂಪಿತವಾಯ್ತು. ಸಿಎಂ ಕರುಣಾನಿಧಿ ಪುತ್ರ ಸ್ಟಾಲಿನ್ ಅನ್ನು ಅಪಹರಣ ಮಾಡಿದರೆ ಒಳ್ಳೆಯ ಹಣ ಸಿಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿತು ವೀರಪ್ಪನ್ ಗುಂಪು. ಆದರೆ ಇಲ್ಲಿ ಇನ್ನೂ ದೊಡ್ಡ ಸಮಸ್ಯೆ ಎದುರಾಯ್ತು. ಈಗ ತಮಿಳುನಾಡಿನ ಸಿಎಂ ಆಗಿರುವ ಸ್ಟಾಲಿನ್ ಆಗ ಚೆನ್ನೈ ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದರು. ಸಿಎಂ ಪುತ್ರ ಸಹ ಆಗಿದ್ದ ಕಾರಣ ಅವರ ಸುತ್ತ ಗನ್ಮ್ಯಾನ್ಗಳು ಯಾವಾಗಲೂ ಇರುತ್ತಿದ್ದರು. ಅವರನ್ನು ಭೇದಿಸಿ ಸ್ಟಾಲಿನ್ ಅನ್ನು ಅಪಹರಣ ಮಾಡುವುದು ಕಷ್ಟವೆಂಬ ಕಾರಣಕ್ಕೆ ಸ್ಟಾಲಿನ್ ಅನ್ನು ಅಪಹರಿಸುವ ಯೋಜನೆಯನ್ನು ಕೈಬಿಡಲಾಯ್ತು.
ಆಗ ವೀರಪ್ಪನ್ ತಂಡದಲ್ಲಿದ್ದ ಗಾಜನೂರಿನ ವ್ಯಕ್ತಿಯೇ ಒಬ್ಬ ರಾಜ್ಕುಮಾರ್ ಅವರನ್ನು ಅಪಹರಿಸುವ ಐಡಿಯಾ ಕೊಟ್ಟ. ಆ ವ್ಯಕ್ತಿ, ರಾಜ್ಕುಮಾರ್ ಅವರ ಗಾಜನೂರಿನ ಮನೆ ಕಟ್ಟುವ ಕಾರ್ಮಿಕನಾಗಿ ಕೆಲಸ ಮಾಡಿದ್ದ ಎನ್ನಲಾಗುತ್ತದೆ. ಆದರೆ ರಾಜ್ಕುಮಾರ್ ಹೆಸರು ಕೇಳುತ್ತಿದ್ದಂತೆ ವೀರಪ್ಪನ್ ಖುಷಿಯಾಗಿಬಿಟ್ಟ. ಅದಾದ ಬಳಿಕ ತನ್ನ ಈ ಯೋಜನೆಯನ್ನು ತನ್ನ ಕೆಲವು ‘ಸಲಹೆಗಾರ’ರೊಟ್ಟಿಗೆ ಚರ್ಚಿಸಿದ. ಅವರಿಂದಲೂ ಯೋಜನೆಗೆ ಅನುಮೋದನೆ ಸಿಕ್ಕಿತು ಮಾತ್ರವಲ್ಲದೆ. ರಾಜ್ಕುಮಾರ್ ಅಪಹರಣದ ಬಳಿಕ ತಾನೊಬ್ಬ ಹೀರೋ ಆಗಿಬಿಡಬಹುದು ಎಂಬ ಮುಂದಾಲೋಚನೆಯೂ ವೀರಪ್ಪನ್ಗೆ ಮೂಡಿತು. ಹಾಗಾಗಿ ರಾಜ್ಕುಮಾರ್ ಅವರನ್ನು ಅಪಹರಿಸಿದ್ದು ಮಾತ್ರವೇ ಅಲ್ಲದೆ, ಅಪಹರಣದ ಬಳಿಕ ಇಟ್ಟ ಬೇಡಿಕೆಗಳನ್ನು ಸಹ ಬಹಳ ಎಚ್ಚರಿಕೆಯಿಂದ ಮತ್ತು ತನ್ನ ಇಮೇಜನ್ನು ಉತ್ತಮಪಡಿಸಿಕೊಳ್ಳುವ ಬೇಡಿಕೆಗಳನ್ನೇ ಇಟ್ಟಿದ್ದ. 2000ನೇ ಇಸವಿಯ ಜುಲೈ 30 ರಂದು ಗಾಜನೂರಿನ ಮನೆಯಿಂದ ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ. ವಿಶೇಷವೆಂದರೆ ಅಪಹರಣ ನಡೆದ ದಿನ ಗಾಜನೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿ ವಿಶೇಷ ದಳ ಎಸ್ಟಿಎಫ್, ವೀರಪ್ಪನ್ ಬಗ್ಗೆ ವಿಶೇಷ ಸಭೆಯನ್ನು ನಡೆಸಿತ್ತು. ಆದರೆ ಎರಡು ಸರ್ಕಾರಗಳು, ಎರಡು ರಾಜ್ಯಗಳ ಪೊಲೀಸ್ ಪಡೆಗಳ ಕಣ್ಣು ತಪ್ಪಿಸಿ ಆತ ಕರ್ನಾಟಕದ ಮೇರು ನಟನನ್ನು ಅಪಹರಿಸಿದ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ