ಪರಭಾಷೆ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣ: ಸಿಎಂ ಸಿದ್ದರಾಮಯ್ಯ

|

Updated on: Jan 25, 2025 | 12:59 PM

CM Siddaramaiah: ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಟಿಕೆಟ್ ದರ ಬಹಳ ಹೆಚ್ಚಿದೆ. ಅದರಲ್ಲಿ, ಪರಭಾಷೆ ಸಿನಿಮಾಗಳು ಇನ್ನೂ ಹೆಚ್ಚಿನ ಬೆಲೆಗೆ ರಾಜ್ಯದಲ್ಲಿ ಟಿಕೆಟ್ ಮಾರಟ ಮಾಡುತ್ತಿವೆ. ಇದರ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪರಭಾಷೆ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣ: ಸಿಎಂ ಸಿದ್ದರಾಮಯ್ಯ
Cm Siddaramaiah
Follow us on

ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣಗಳಿಗೆ ಹೋಲಿಸಿದರೆ ಬೆಂಗಳೂರು ಹಾಗೂ ಕರ್ನಾಟಕದ ಇತರೆ ಭಾಗಗಳಲ್ಲಿ ಟಿಕೆಟ್ ದರ ಬಹಳ ಹೆಚ್ಚಿದೆ. ಪರಭಾಷೆಯ ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆ ಆದಾಗ ಟಿಕೆಟ್ ದರಗಳನ್ನು ದುಪ್ಪಟ್ಟು ಕೆಲವೊಮ್ಮೆ ಮೂರು ಪಟ್ಟು ಮಾಡಿ ಮಾರಾಟ ಮಾಡಿದ ಉದಾಹರಣೆಗಳೂ ಸಹ ಇವೆ. ಇದು ಪ್ರೇಕ್ಷಕರನ್ನು ಲೂಟಿ ಮಾಡುವ ಜೊತೆಗೆ ಸ್ಥಳೀಯ ಸಿನಿಮಾಗಳ ಮೇಲೆ ಪರೋಕ್ಷವಾಗಿ ಹೊಡೆತ ಬೀಳುತ್ತಿದೆ. ಪರಭಾಷೆ ಸಿನಿಮಾ ಟಿಕೆಟ್ ದರಗಳ ನಿಯಂತ್ರಣದ ಬಗ್ಗೆ ಕಳೆದ ಕೆಲ ತಿಂಗಳಿನಿಂದಲೂ ಕೂಗು ಕೇಳಿ ಬರುತ್ತಲೇ ಇತ್ತು. ಇದೀಗ ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪಕ್ಕದ ರಾಜ್ಯಗಳಲ್ಲಿ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲನೆ ಮಾಡಿ ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ಟಿಕೆಟ್ ದರಗಳನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ‘200 ಆಸನಗಳ ಮಿನಿ ಚಿತ್ರಮಂದಿರಗಳನ್ನು ರಾಜ್ಯದಾದ್ಯಂತ ಸ್ಥಾಪಿಸುವ ಯೋಜನೆ ಹೊಂದಿದ್ದು, ಅದರ ಅನುಷ್ಠಾನಕ್ಕೆ ಪ್ರಯತ್ನ ನಡೆಸಲಾಗುವುದು’ ಎಂದಿದ್ದಾರೆ.

ಇದನ್ನೂ ಓದಿ:ಮೆಟ್ರೋ ಟಿಕೆಟ್ ದರ ಏರಿಕೆ ಮುಂದಿನ ವಾರದಿಂದ ಬಹುತೇಕ ಖಚಿತ

ಡಾ ರಾಜ್​ಕುಮಾರ್ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ರಾಜ್​ಕುಮಾರ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೇ ಮಾದರಿ. ಡಾ ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟಿ. ಅವರಿಗೆ ಸಾಟಿ ಆಗುವವರು ಯಾರೂ ಇನ್ನೂ ಬಂದಿಲ್ಲ. ಡಾ.ರಾಜ್ ಗೋಕಾಕ್ ಚಳವಳಿಯಲ್ಲಿ ಭಾಗಿಯಾಗಿದ್ದಾಗ ನಾನೂ ಸಹ ಅವರ ಭಾಷಣ ಕೇಳಲು ಹೋಗಿದ್ದೆ. ರಾಜ್ ಅವರಿಂದಾಗಿ ಕನ್ನಡ ಹೆಚ್ಚು ಶಕ್ತಿಯುತವಾಗಿ ಬೆಳೆಯಿತು. ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್ ಅವರ ಪರಿಚಯ ಮೊದಲ ಬಾರಿ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನ ಇತ್ತು. ನನಗೆ ಕನ್ನಡ ನಾಡು, ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ