ಮಹಿಳಾ ದಿನ ವಿಶೇಷ: ಪುರುಷ ಪ್ರಧಾನ ಚಿತ್ರರಂಗದಲ್ಲಿ ಕೆಚ್ಚೆದೆಯ ಕನ್ನಡ ವನಿತೆಯರು

ಆರಂಭದಿಂದಲೂ ಪುರುಷ ಪ್ರಧಾನವೇ ಆಗಿರುವ ಕನ್ನಡ ಚಿತ್ರರಂಗದಲ್ಲಿ, ತಮ್ಮ ಪ್ರತಿಭೆ, ಶಕ್ತಿಗಳ ಮೂಲಕ ಗಮನ ಸೆಳೆದ ಕೆಲವು ನಟಿಯರ ಪಟ್ಟಿ ಇಲ್ಲಿದೆ. ನಾಯಕ ಪ್ರಧಾನ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ನಟಿಯರಿವರು.

ಮಹಿಳಾ ದಿನ ವಿಶೇಷ: ಪುರುಷ ಪ್ರಧಾನ ಚಿತ್ರರಂಗದಲ್ಲಿ ಕೆಚ್ಚೆದೆಯ ಕನ್ನಡ ವನಿತೆಯರು
ಛಾಪು ಮೂಡಿಸಿದ ನಾಯಕಿಯರು
Follow us
| Updated By: ಮಂಜುನಾಥ ಸಿ.

Updated on: Mar 08, 2023 | 4:51 PM

ಕನ್ನಡ ಚಿತ್ರರಂಗ (Sandalwood) ಉದಯಿಸಿ ಎಂಟು ದಶಕಗಳಾಗಿವೆ. ಆಗಿನಿಂದ ಈಗಿನವರೆಗೂ ಮಹಿಳೆಯರ ಸ್ಥಾನ-ಮಾನ ಇದ್ದಂತೆಯೇ ಇದೆ. ಆಗಲೂ ಸಹ ಪುರುಷ ಪ್ರಧಾನವೇ ಆಗಿದ್ದ ಚಿತ್ರರಂಗ ಈಗಲೂ ಪುರುಷ ಪ್ರಧಾನವೇ. ಆದರೆ ಈ ಪುರುಷ ಪ್ರಧಾನ ಚಿತ್ರರಂಗದಲ್ಲಿಯೂ ತಮ್ಮ ಛಾಪು ಮೂಡಿಸಿದ ಕೆಲವು ಕೆಚ್ಚೆದೆಯ ನಟಿಯರಿದ್ದಾರೆ. ಪುರುಷರಿಗೇನು ಕಮ್ಮಿ ಎಂಬಂತೆ ತಮ್ಮ ಪ್ರತಿಭೆ, ಶಕ್ತಿ ಪ್ರದರ್ಶಿಸಿ ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಸ್ಟಾರ್ ನಟರಷ್ಟೆ ಗಮನ ಸೆಳೆದ ಕೆಲವು ನಟಿಯರ ಪಟ್ಟಿ ಇಲ್ಲಿದೆ.

ಕಲ್ಪನಾ, ಜಯಂತಿ, ಆರತಿ ಮಹಿಳೆಯನ್ನು ಗೃಹಿಣಿಯಾಗಿ, ಸಹಿಷ್ಣುವಾಗಿ, ಅಬಲೆಯಾಗಿ ತೋರಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಶರಪಂಜರ, ಗೆಜ್ಜೆಪೂಜೆ ಅಂಥಹಾ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡವರು ನಟಿ ಕಲ್ಪನಾ. ಇನ್ನು ನಟಿ ಜಯಂತಿ ಸಹ ಚಿತ್ರರಂಗದಲ್ಲಿ ನಾಯಕಿ ಪಾತ್ರಗಳಿಗಿದ್ದ ಕೆಲವು ಗಡಿಗಳನ್ನು ಮೀರಿದವರು. ಸ್ವಿಮ್ಮಿಂಗ್ ಸೂಟ್ ಧರಿಸುವುದಾಗಿರಬಹುದು, ವಿವಾಹೇತರ ಸಂಬಂಧಗಳನ್ನು ಹೊಂದಿದ ಪಾತ್ರಗಳಲ್ಲಿ ನಟಿಸುವುದಾಗಿರಬಹುದು ಆ ಕಾಲಕ್ಕೆ ಬೋಲ್ಡ್ ಆದ ಪಾತ್ರಗಳನ್ನು ಆರಿಸಿಕೊಳ್ಳುವ ದಿಟ್ಟತನ ತೋರಿದ್ದರು. ನಟಿ ಆರತಿ ಸಹ ರಂಗನಾಯಕಿ, ನಾಗರಹಾವು ಸಿನಿಮಾಗಳಲ್ಲಿ ಬೋಲ್ಡ್ ಆದ ಪಾತ್ರಗಳನ್ನು ಆರಿಸಿಕೊಂಡು ನಟಿಸಿದವರು.

ಮಾಲಾಶ್ರೀ ಪುರುಷರಿಗಷ್ಟೆ ಸೀಮಿತವಾಗಿದ್ದ ಫೈಟ್, ಮಾಸ್ ಡೈಲಾಗ್, ರಗಡ್ ಕುಣಿತಗಳನ್ನು ಮಹಿಳೆಯರೂ ಮಾಡಬಲ್ಲರು ಎಂದು ತೋರಿಸಿಕೊಟ್ಟಿದ್ದು ನಟಿ ಮಾಲಾಶ್ರೀ. ಆಕ್ಷನ್ ಸಿನಿಮಾಗಳ ಮೂಲಕ ಮಹಿಳೆಯರನ್ನಷ್ಟೆ ಅಲ್ಲ, ಪುರುಷ ಅಭಿಮಾನಿಗಳನ್ನೂ ಸಂಪಾದಿಸಿದ ಮಾಲಾಶ್ರೀ, ಕನ್ನಡದ ದುರ್ಗಿ, ಚಾಮುಂಡಿ ಎಲ್ಲವೂ.

ವಿಜಯಶಾಂತಿ ವಿಜಯಶಾಂತಿ ಕನ್ನಡದವರಲ್ಲವಾದರೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ತೀರ ಪರಿಚಿತರು. ಮಹಿಳಾ ಆಕ್ಷನ್ ಸಿನಿಮಾಗಳಿಗೆ ಹೊಸ ದಿಕ್ಕು ತಂದುಕೊಟ್ಟವರು ವಿಜಯಶಾಂತಿ. ತಮ್ಮ ಸಖತ್ ಆಕ್ಷನ್, ನಟನೆಯಿಂದಾಗಿ ಲೇಡಿ ಅಮಿತಾಬ್ ಬಚ್ಚನ್ ಎಂಬ ಹೆಸರು ಗಳಿಸಿದ್ದರು ಈ ಗಟ್ಟಿಗಿತ್ತಿ.

ಉಮಾಶ್ರೀ ನಟಿ ಉಮಾಶ್ರೀ ಕನ್ನಡ ಚಿತ್ರರಂಗದ ಕಂಡ ಪ್ರತಿಭಾವಂತ ಹಾಗೂ ದಿಟ್ಟ ನಟಿ. ಮಾಲಾಶ್ರೀ, ಶ್ರುತಿ ಅವರುಗಳಂತೆ ನಾಯಕಿಯಾಗಿ ನಟಿಸುವ ಅವಕಾಶಗಳು ಇವರಿಗೆ ಸಿಗಲಿಲ್ಲವಾದರೂ ನಟಿಸಿದ ಹಲವು ಸಿನಿಮಾಗಳಲ್ಲಿ ನಾಯಕನ ಪಾತ್ರವನ್ನು ಮೀರಿ ಗುರುತು ಪಡೆದುಕೊಂಡಿದ್ದಾರೆ. ಪುಟ್ನಂಜ, ತಾಯವ್ವ, ಕೋತಿಗಳು ಸಾರ್ ಕೋತಿಗಳು, ಗುಲಾಬಿ ಟಾಕೀಸ್, ಕನಸೆಂಬೊ ಕುದುರೆಯೇರಿ, ಕಲಾವು ಇತ್ತೀಚೆಗಿನ ರತ್ನನ್ ಪ್ರಪಂಚ ಸಿನಿಮಾಗಳಲ್ಲಿ ಅವರ ನಟನೆ ಅದ್ಭುತ.

ಶ್ರುತಿ-ತಾರಾ ನಟಿ ಶ್ರುತಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದರಾದರು ಅವರ ಬಹುತೇಕ ಸಿನಿಮಾಗಳಲ್ಲಿ ನಾಯಕಿಯು ಅಬಲೆಯಾಗಿ, ಸಹಿಷ್ಣುವಾಗಿ, ಅಳುಮುಂಜಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಪ್ರತಿರೋಧದ ಮನಸ್ಥಿತಿಯ ನಾಯಕಿಯ ಪಾತ್ರಗಳಲ್ಲಿ ಶ್ರುತಿ ನಟಿಸಿದ್ದು ಕಡಿಮೆ. ಆದರೆ ನಾಯಕ ಪ್ರಧಾನ ಸಿನಿಮಾಗಳ ನಡುವೆ ಶ್ರುತಿ ತಮ್ಮದೇ ಮಾದರಿಯ ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಗಮನ ಸೆಳೆದರು. ಅವರ ಸಮಕಾಲೀನರಾದ ನಟಿ ತಾರಾ ಸಹ ತಮ್ಮ ಬಹುತೇಕ ಸಿನಿಮಾಗಳಲ್ಲಿ ಸಿದ್ಧ ಮಾದರಿ ನಾಯಕಿ ಪಾತ್ರಗಳಲ್ಲಿ ಕಾಣಿಸಿಕೊಂಡರಾದರೂ ಆಗಾಗ ಕಾನೂರು ಹೆಗ್ಗಡತಿ, ಮುನ್ನುಡಿ, ಮತದಾನ, ಹಸೀನಾ ರೀತಿಯ ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿಗಳನ್ನೂ ಬಾಚಿಕೊಂಡರು.

ಪ್ರಿಯಾಂಕಾ ಉಪೇಂದ್ರ ನಟಿ ಪ್ರಿಯಾಂಕಾ ಉಪೇಂದ್ರ ಇತ್ತೀಚೆಗೆ ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಮ್ಮಿ, ಪ್ರಿಯಾಂಕಾ, ಮಿಸ್ ದೇವಕಿ, ಹೌರಾ ಬ್ರಿಡ್ಜ್ ಇನ್ನೂ ಕೆಲವು ಮಹಿಳಾ ಪ್ರಧಾನ ಸಿನಿಮಾಗಳನ್ನು ಪ್ರಿಯಾಂಕಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ರಾಗಿಣಿ-ಪೂಜಾ ಗಾಂಧಿ ನಟಿ ರಾಗಿಣಿ ಸಹ ಮಾಲಾಶ್ರೀ ಮಾದರಿಯಲ್ಲಿ ಸೂಪರ್ ಲೇಡಿ ಪಾತ್ರದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಯಶಸ್ಸು ಅವರ ಪಾಲಾಗಲಿಲ್ಲ. ಇನ್ನು ನಟಿ ಪೂಜಾ ಗಾಂಧಿ ಸಹ ಅಭಿನೇತ್ರಿ ಸೇರಿದಂತೆ ಇನ್ನು ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದರು. ಪ್ರಿಯಾ ಹಾಸನ್ ಸಹ ಕೆಲವು ಸೂಪರ್ ಲೇಡಿ ಮಾದರಿಯ ಸಿನಿಮಾಗಳನ್ನು ಮಾಡಿದರು ಆದರೆ ಅವರಿಗೂ ಸಹ ದೊಡ್ಡ ಯಶಸ್ಸು ಪ್ರಾಪ್ತವಾಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ