AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದೆ ‘ಯಾರಿಗೂ ಹೇಳ್ಬೇಡಿ’, ಈ ಬಾರಿ ನಾಯಕ ಯಾರು?

Yarigu Helbedi Kannada Movie: ‘ಯಾರಿಗೂ ಹೇಳ್ಬೇಡಿ’ ಕನ್ನಡ ಚಿತ್ರರಂಗದ ಬಲು ಜನಪ್ರಿಯ ಕೌಟುಂಬಿಕ ಹಾಸ್ಯ ಸಿನಿಮಾ. 1994 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಇದೇ ಹೆಸರಿನಲ್ಲಿ ಮತ್ತೊಂದು ಕನ್ನಡ ಸಿನಿಮಾ ನಿರ್ಮಾಣವಾಗಿದ್ದು, ಸಿನಿಮಾದ ಟ್ರೈಲರ್ ನೋಡಿದರೆ ಇದು ಸಹ ಸಂಪೂರ್ಣ ಹಾಸ್ಯಮಯ ಸಿನಿಮಾ ಎನಿಸುತ್ತಿದೆ. ಹೊಸ ‘ಯಾರಿಗೂ ಹೇಳ್ಬೇಡಿ’ ಬಗೆಗಿನ ಮಾಹಿತಿ ಇಲ್ಲಿದೆ.

ಮತ್ತೆ ಬರುತ್ತಿದೆ ‘ಯಾರಿಗೂ ಹೇಳ್ಬೇಡಿ’, ಈ ಬಾರಿ ನಾಯಕ ಯಾರು?
Yarigu Helbedi
ಮಂಜುನಾಥ ಸಿ.
|

Updated on: Oct 21, 2025 | 5:38 PM

Share

‘ಯಾರಿಗೂ ಹೇಳ್ಬೇಡಿ’ (Yarigu Helbedi) ಸಿನಿಮಾ ಯಾರಿಗೆ ನೆನಪಿಲ್ಲ. ಕನ್ನಡದ ಅತ್ಯುತ್ತಮ ಕೌಟುಂಬಿಕ ಹಾಸ್ಯ ಸಿನಿಮಾಗಳಲ್ಲಿ ಒಂದು ‘ಯಾರಿಗೂ ಹೇಳ್ಬೇಡಿ’. ಈಗಲೂ ಸಹ ಕೆಲ ಕನ್ನಡ ವಾಹಿನಿಗಳಲ್ಲಿ ಆ ಸಿನಿಮಾ ಪ್ರದರ್ಶನ ಆಗುತ್ತಲೇ ಇರುತ್ತದೆ. ಸಿನಿಮಾದ ಹಾಸ್ಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಅನಂತ್ ನಾಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾ ಆಗಲೇ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಹೆಸರು ಇರಿಸಿಕೊಂಡು ಸಿನಿಮಾ ಒಂದು ಕನ್ನಡದಲ್ಲಿ ನಿರ್ಮಾಣ ಆಗಿದ್ದು ಇದೇ ತಿಂಗಳು ಬಿಡುಗಡೆ ಸಹ ಆಗುತ್ತಿದೆ.

‘ಯಾರಿಗೂ ಹೇಳ್ಬೇಡಿ’ ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಈಗಾಗಲೇ ಬಿಡುಗಡೆ ಮಾಡಿದ್ದು, ಸಿನಿಮಾದ ಬಗ್ಗೆ ಮತ್ತು ಸಿನಿಮಾ ತಂಡದ ಬಗ್ಗೆ ಕೆಲ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಟ್ರೈಲರ್​​​ನಲ್ಲಿ ಸಾಕಷ್ಟು ಹಾಸ್ಯಮಯ ದೃಶ್ಯಗಳಿದ್ದು, ಸಿನಿಮಾ ಸಹ ಸಂಪೂರ್ಣ ಹಾಸ್ಯಮಯ ಸಿನಿಮಾ ಆಗಿದೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿರುವ ಹೈದರಬಾದ್‌ನ ಹರೀಶ್ ಅಮ್ಮಿನೇನಿ ಕನ್ನಡ ಭಾಷೆಯ ಅಭಿಮಾನದ ಮೇಲೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸುನಿಲ್‌ಕುಮಾರ್ ನಿರ್ಮಾಣದಲ್ಲಿ ಸಹಕಾರ ನೀಡಿದ್ದಾರೆ. ಶಿವಗಣೇಶ್ ನಿರ್ದೇಶನ ಮಾಡಿದ್ದಾರೆ.

ಚೇತನ್ ವಿಕ್ಕಿ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ನಾಯಕನ ಸ್ನೇಹಿತನ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ’ಟೋಬಿ’ ಮತ್ತು ’ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ಅಭಿನಯಿಸಿದ್ದ ಚೈತ್ರಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ಅಶ್ವಿನಿ ಪೊಲೆಪಲ್ಲಿ ಸಹ ಮತ್ತೊಬ್ಬ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಚೈತ್ರಾರಾವ್, ಶಭರೇಶ್, ಕಾರ್ತಿಕ್ ಇನ್ನೂ ಕೆಲವರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಒಟಿಟಿಗಳಿಂದ ನಿರ್ಲಕ್ಷ್ಯ, ಕನ್ನಡ ಸಿನಿಮಾಗಳ ನೆರವಿಗೆ ಬಂದ ಸರ್ಕಾರ

ಸಿನಿಮಾ ಬಗ್ಗೆ ಮಾತನಾಡಿರುವ ನಾಯಕ ಚೇತನ್ ವಿಕ್ಕಿ, ‘ಇದೊಂದು ಸಂಪೂರ್ಣ ಹಾಸ್ಯಮಯ ಸಿನಿಮಾ. ನನ್ನದು ವಿಡಿಯೋ ಜಾಕಿ ಪಾತ್ರ. ಮದುವೆ ಮುಂಚಿನ ಒಂದು ಘಟನೆಗೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತೇನೆ ಆ ನಂತರ ಅದರಿಂದ ಹಲವು ಕಷ್ಟಗಳಿಗೆ ಸಿಲುಕುತ್ತೇನೆ. ಅದನ್ನು ಯಾರಿಗೂ ಹೇಳ್ಬೇಡಿ ಎಂದು ಸುಳ್ಳಿನ ಸರಮಾಲೆಯನ್ನೆ ಕಟ್ಟುತ್ತೇನೆ. ಕೊನೆಗೆ ಅದನ್ನು ಮುಚ್ಚಿಡಲು ಹೋದಾಗ ಏನೆಲ್ಲಾ ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತೇನೆ ಎಂಬುದು ಕಾಮಿಡಿ ಮೂಲಕ ಹೇಳಲಾಗಿದೆ. ನೋಡುಗರಿಗೆ ಪೈಸಾ ವಸೂಲ್ ಸಿನಿಮಾ’ ಎಂದರು.

ಸಿನಿಮಾಕ್ಕೆ ಶಶಾಂಕ್ ಶೇಷಗಿರಿ ಅವರು ಸಂಗೀತ ನೀಡಿದ್ದಾರೆ. ಡೇವಿಡ್ ‌ಆನಂದರಾಜ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಸಂಭಾಷಣೆ ಶಿವರಾಜ್ ಡಿಎನ್‌ಎಸ್ ಅವರದ್ದು. ಹಿನ್ನಲೆ ಶಬ್ದ ಉದಿತ್‌ ಹರಿದಾಸ್, ಸಾಹಸ ಕುಂಫು ಚಂದ್ರು ಅವರದ್ದು. ಸಾಹಿತ್ಯ ಕವಿರಾಜ್-ಪ್ರಮೋದ್ ಮರವಂತೆ, ಸಂಕಲನ ದೀಪಕ್.ಸಿ.ಎಸ್ ಅವರದ್ದಾಗಿದೆ. ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ. ದಿನಾಂಕ ನಿಗದಿ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ