
ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪ ಅವರು ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ನಿರ್ಮಾಪಕಿಯಾಗಿ ಮೊದಲ ಸಿನಿಮಾ ‘ಕೊತ್ತಲವಾಡಿ’ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ತೆಲುಗಿನ ‘ಘಾಟಿ’ ಸಿನಿಮಾ ಅನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದರು. ತಾವು ಹವ್ಯಾಸಕ್ಕಾಗಿ ಬಂದವರಲ್ಲ, ವೃತ್ತಿಪರ ನಿರ್ಮಾಪಕಿ ಆಗಲೆಂದು ಬಂದವರು ಎಂದು ಈ ಹಿಂದೆ ಪುಷ್ಪ ಅವರು ಹೇಳಿದ್ದರು. ಅದರಂತೆ ಇದೀಗ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.
ವಿಜಯದಶಮಿಯಂದು ಪುಷ್ಪ ಅವರು ತಮ್ಮ ನಿರ್ಮಾಣದ ಎರಡನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮೊದಲ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀರಾಜ್ ಅವರೆ, ಪುಷ್ಪ ಅವರು ನಿರ್ಮಿಸುತ್ತಿರುವ ಎರಡನೇ ಸಿನಿಮಾ ಅನ್ನೂ ನಿರ್ದೇಶನ ಮಾಡಲಿದ್ದಾರೆ. ಅದು ಮಾತ್ರವೇ ಅಲ್ಲದೆ, ‘ಕೊತ್ತಲವಾಡಿ’ ಸಿನಿಮಾಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರು ಪುಷ್ಪ ಅವರ ಎರಡನೇ ಸಿನಿಮಾನಲ್ಲಿಯೂ ಕೆಲಸ ಮಾಡಲಿದ್ದಾರೆ. ಆದರೆ ಕಲಾವಿದರು ಮಾತ್ರ ಕತೆಗೆ ತಕ್ಕಂತೆ ಬದಲಾಗಲಿದ್ದಾರೆ.
ಪುಷ್ಪ ಅವರ ‘ಪಿಎ’ ಪ್ರೊಕ್ಷನ್ನ ಎರಡನೇ ಸಿನಿಮಾ ಇದಾಗಲಿದ್ದು, ಮೊದಲ ಸಿನಿಮಾಕ್ಕಿಂತಲೂ ಭಿನ್ನವಾದ ಕತೆಯುಳ್ಳ ಸಿನಿಮಾ ಅನ್ನು ನಿರ್ಮಿಸಲು ಪುಷ್ಪ ಅರುಣ್ಕುಮಾರ್ ಮುಂದಾಗಿದ್ದಾರೆ. ‘ಕೊತ್ತಲವಾಡಿ’ ಸಿನಿಮಾದ ಬಳಿಕ ನಿರ್ದೇಶಕ ಶ್ರೀರಾಜ್ ಅವರ ವಿರುದ್ಧ ಕೆಲ ಕಲಾವಿದರು ಸಂಭಾವನೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಆರೋಪಗಳನ್ನು ಮಾಡಿದ್ದರು. ಹಾಗಿದ್ದರೂ ಸಹ ಪುಷ್ಪ ಅವರು ಮತ್ತೊಮ್ಮೆ ಶ್ರೀರಾಜ್ ಅವರ ಮೇಲೆ ನಂಬಿಕೆ ಇಟ್ಟು ಅವರಿಗೆ ಸಿನಿಮಾ ನಿರ್ದೇಶನದ ಜವಾಬ್ದಾರಿ ವಹಿಸುತ್ತಿದ್ದಾರೆ.
ಇದನ್ನೂ ಓದಿ:‘ನಮಗೆ ಮೋಸ ಆಗಿದ್ದು ನಿಜ’; ಪುಷ್ಪಾ ಬಗ್ಗೆ ‘ಕೊತ್ತಲವಾಡಿ’ ಕಲಾವಿದೆ ಸ್ವರ್ಣ ಬೇಸರ
ಪುಷ್ಪ ಅವರು ತಮ್ಮ ಎರಡನೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಕೆಲವೇ ದಿನಗಳಲ್ಲಿ ಸಿನಿಮಾದ ಹೆಸರು, ಪಾತ್ರವರ್ಗ ಇನ್ನಿತರೆ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಪುಷ್ಪ ಅವರು ತಿಳಿಸಿದ್ದಾರೆ.
ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಣ ಮಾಡಿದ್ದ ‘ಕೊತ್ತಲವಾಡಿ’ ಸಿನಿಮಾ ಹಳ್ಳಿ ಕತೆಯನ್ನು ಹೊಂದಿದ್ದು, ಸಿನಿಮಾನಲ್ಲಿ ಪೃಥ್ವಿ ಅಂಬರ್ ನಾಯಕನಟನಾಗಿ ನಟಿಸಿದ್ದರು. ಸಿನಿಮಾದ ಟ್ರೈಲರ್ ಗಮನ ಸೆಳೆದಿತ್ತು. ಇದೀಗ ಭಿನ್ನ ಕತೆಯುಳ್ಳ ಸಿನಿಮಾ ಅನ್ನು ನೀಡಲು ಪುಷ್ಪ ಅವರು ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Thu, 2 October 25