‘ಕಾಂತಾರ: ಚಾಪ್ಟರ್ 1’ ಜೊತೆ ಪ್ರದರ್ಶನ ಕಾಣುತ್ತಿದೆ ‘ಕೋಣ’ ಸಿನಿಮಾ ಟ್ರೇಲರ್
ನಟ ಕೋಮಲ್ ಕುಮಾರ್, ನಟಿ ತನಿಷಾ ಕುಪ್ಪಂಡಾ ಅವರು ‘ಕೋಣ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿತ್ತರ ಆಗುತ್ತಿದೆ. ‘ಕಾಂತಾರ: ಚಾಪ್ಟರ್ 1’ ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಗಳಲ್ಲಿ ‘ಕೋಣ’ ಟ್ರೇಲರ್ ಪ್ರದರ್ಶಿಸಲಾಗುತ್ತಿದೆ.

ಈಗ ಎಲ್ಲೆಲ್ಲೂ ‘ಕಾಂತಾರ: ಚಾಪ್ಟರ್ 1’ ಸಿನಿಮಾದ್ದೇ ಸದ್ದು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಿದೆ. ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಸಿನಿಪ್ರಿಯರು ಇನ್ನೊಂದು ಸಿನಿಮಾದ ಟ್ರೇಲರ್ ನೋಡಿ ವಾವ್ ಎನ್ನುತ್ತಿದ್ದಾರೆ. ಹೌದು, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಜೊತೆಗೆ ‘ಕೋಣ’ ಸಿನಿಮಾದ ಟ್ರೇಲರ್ (Kona Movie Trailer) ಕೂಡ ಬಿಡುಗಡೆ ಆಗಿದೆ. ‘ಕಾಂತಾರ: ಚಾಪ್ಟರ್ 1’ ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಗಳಲ್ಲಿ ‘ಕೋಣ’ ಟ್ರೇಲರ್ ಕೂಡ ಬಿತ್ತರ ಆಗುತ್ತಿದೆ. ನಟ ಕೋಮಲ್ ಕುಮಾರ್ (Komal Kumar) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ಈಗಾಗಲೇ ಅನೇಕ ಬಗೆಯ ಪಾತ್ರಗಳನ್ನು ಮಾಡಿರುವ ಕೋಮಲ್ ಕುಮಾರ್ ಅವರು ‘ಕೋಣ’ ಸಿನಿಮಾದಲ್ಲಿ ಹೊಸದೊಂದು ಪಾತ್ರ ಮಾಡಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್ ಮೂಲಕ ಚಿತ್ರದ ಮೇಲೆ ಕುತೂಹಲ ಹೆಚ್ಚಿಸಲಾಗಿತ್ತು. ಈಗ ‘ಕೋಣ’ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಕಾಮಿಡಿ, ಆ್ಯಕ್ಷನ್, ಸಸ್ಪೆನ್ಸ್ ಮುಂತಾದ ಅಂಶಗಳು ಟ್ರೇಲರ್ನಲ್ಲಿ ಕಾಣಿಸಿದೆ.
ನಟ ಕೋಮಲ್ ಕುಮಾರ್ ಅವರಿಗೆ ಇದು ಹೊಸ ಬಗೆಯ ಪಾತ್ರ . ಈ ಸಿನಿಮಾದ ನಿರ್ಮಾಣದಲ್ಲಿ ತನಿಷಾ ಕುಪ್ಪಂಡ ಅವರು ಕೈ ಜೋಡಿಸಿದ್ದಾರೆ. ಅಲ್ಲದೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿತ್ವಿ ಜಗದೀಶ್, ಕೀರ್ತಿರಾಜ್, ನಮ್ರತಾ ಗೌಡ, ರಾಘು ರಾಮನಕೊಪ್ಪ, ವಿನಯ್ ಗೌಡ, ವಿಜಯ್ ಚೆಂಡೂರ್, ರಂಜಿತ್ ಗೌಡ, ಎಂ.ಕೆ. ಮಠ, ತುಕಾಲಿ ಸಂತೋಷ್, ನಿರಂಜನ್, ಹುಲಿ ಕಾರ್ತಿಕ್, ಅನಂತ್, ಶಿಶಿರ್ ಶಾಸ್ತ್ರಿ, ಸುಷ್ಮಿತಾ, ಜಗ್ಗಪ್ಪ, ಗೋಲ್ಡ್ ಸುರೇಶ್, ಮಂಜು ಪಾವಗಡ, ಮೋಹನ್ ಕೃಷ್ಣರಾಜ್, ಕುರಿ ಸುನಿಲ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
‘ಕೋಣ’ ಸಿನಿಮಾದ ಟ್ರೇಲರ್:
ಇದು ಡಾರ್ಕ್ ಕಾಮಿಡಿ ಶೈಲಿಯ ಸಿನಿಮಾ ಎಂದು ‘ಕೋಣ’ ಚಿತ್ರತಂಡ ಹೇಳಿದೆ. ಜಗ್ಗೇಶ್ ಅಭಿನಯದ ‘8 ಎಂಎಂ’ ಸಿನಿಮಾಗೆ ನಿರ್ದೇಶನ ಮಾಡಿದ್ದ ಎಸ್. ಹರಿಕೃಷ್ಣ ಅವರು ಈಗ ‘ಕೋಣ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರೇ ಸಿನಿಮಾಗೆ ಕಥೆ ಕೂಡ ಬರೆದಿದ್ದಾರೆ. ಈ ಚಿತ್ರಕ್ಕೆ ನಾಗೇಶ್ ಎನ್. ಅವರು ಸಹ-ನಿರ್ದೇಶಕನಾಗಿದ್ದಾರೆ.
ಇದನ್ನೂ ಓದಿ: ತುಳು ಕಲಿಯಲು ಪ್ರಯತ್ನಿಸುತ್ತಿರುವ ನಟ ಕೋಮಲ್
ಒಂದು ನೈಜ ಘಟನೆ ಆಧರಿಸಿ ‘ಕೋಣ’ ಸಿನಿಮಾ ತಯಾರಾಗುತ್ತಿದೆ. ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ‘ಕುಪ್ಪಂಡಾಸ್ ಪ್ರೊಡಕ್ಷನ್’ ಬ್ಯಾನರ್ ಮೂಲಕ ತನಿಷಾ ಕುಪ್ಪಂಡ, ರವಿಕಿರಣ್ ಎನ್, ಕಾರ್ತಿಕ್ ಕಿರಣ್ ಸಂಕಪಾಲ್ ಅವರು ‘ಕೋಣ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್‌ಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅವರೊಂದಿಗೆ ವಿಶಾಲ್ ಗೌಡ ಕೈ ಜೋಡಿಸಿದ್ದಾರೆ. ಉಮೇಶ್ ಆರ್.ಬಿ. ಸಂಕಲನ ಮಾಡಿದ್ದಾರೆ. ವಿನೋದ್ ಕುಮಾರ್ ಅವರ ಸಾಹಸ ನಿರ್ದೇಶನ, ಮುರುಗನ್ ಅವರ ನೃತ್ಯ ನಿರ್ದೇಶನ, ಶಶಿಕುಮಾರ್, ಸಂದೀಪ್ ಆಚಾರ್ಯ ಅವರ ಸಂಭಾಷಣೆ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




