‘ನೀವು ಕರೆದರೆ ಬರದೇ ಇರಲು ಆಗುತ್ತ’ ಐಟಿ ಇಲಾಖೆ ರಾಜ್ಯೋತ್ಸವದಲ್ಲಿ ಯಶ್

Yash: ನಟ ಯಶ್ ಅವರು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಇಲಾಖೆಯೊಂದು ಆಯೋಜಿಸಿದ್ದ ಸರಳವಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಯಶ್ ಭಾಗವಹಿಸಿದ್ದರು. ಮಾತ್ರವಲ್ಲದೆ ಯಶ್ ಅವರು ಹಾರಿಸಿದ ಹಾಸ್ಯ ಚಟಾಕಿಗೆ ಸಭಿಕರು ನಗೆ ಗಡಲಲ್ಲಿ ತೇಲಿದರು. ಕನ್ನಡದ ಬಗ್ಗೆ ಯಶ್ ಅರ್ಥಪೂರ್ಣ ಮಾತುಗಳನ್ನಾಡಿದರು.

‘ನೀವು ಕರೆದರೆ ಬರದೇ ಇರಲು ಆಗುತ್ತ’ ಐಟಿ ಇಲಾಖೆ ರಾಜ್ಯೋತ್ಸವದಲ್ಲಿ ಯಶ್
Yash

Updated on: Nov 27, 2025 | 9:44 AM

ಯಶ್ (Yash) ತಮ್ಮ ‘ಟಾಕ್ಸಿಕ್’ ಸಿನಿಮಾನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಅವರು ಯಾವುದೇ ಸಿನಿಮಾ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳನ್ನು ಸಹ ಅಟೆಂಡ್ ಮಾಡುತ್ತಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೂ ಸಹ ನೋ ಹೇಳುತ್ತಿದ್ದಾರೆ. ಆದರೆ ಸಣ್ಣ ಆಡಿಟೋರಿಯಮ್​​ನಲ್ಲಿ ನಡೆದ ಸರಳವಾದ ಆದರೆ ಅರ್ಥ ಪೂರ್ಣವಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಶ್ ಹಾಜರಾಗಿದ್ದರು. ಕನ್ನಡ ಭಾಷೆಯ ಪ್ರಸಾರ, ಕರ್ನಾಟಕ ಹಾಗೂ ಜನರ ಏಳ್ಗೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಯಶ್ ವೇದಿಕೆಯಲ್ಲಿ ಹಂಚಿಕೊಂಡರು. ಯಶ್ ಹಾರಿಸಿದ ಹಾಸ್ಯ ಚಟಾಕಿಗಳು ಸಹ ಜನರನ್ನು ನಗೆ ಗಡಲಲ್ಲಿ ತೇಲಿಸಿದವು.

ಇನ್‌ಕಂ ಟ್ಯಾಕ್ಸ್ ಸ್ಪೋರ್ಟ್ಸ್ ಮತ್ತು ರೀ ಕ್ರಿಯೇಷನ್ ಕ್ಲಬ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಟ ಯಶ್ ಮತ್ತು ರಾಧಿ ಪಂಡಿತ್ ಅವರು ನಿನ್ನೆ(ನವೆಂಬರ್ 25) ಭಾಗವಹಿಸಿದ್ದರು. ಕೆವಿಎನ್​​ನ ವೆಂಕಟ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಗೋವಾ ಹಾಗೂ ಕರ್ನಾಕಟ ಭಾಗದ ಚೀಫ್ ಕಮೀಷನರ್ ಆಫ್ ಇನ್‌ಕಂ ಟ್ಯಾಕ್ಸ್ ಐಆರ್‌ಎಸ್ ಅಧಿಕಾರಿ ಪ್ರೀತಿ ಗರ್ಗ್, ಡೈರೆಕ್ಟರ್ ಜನರಲ್ ಆಫ್ ಇನ್‌ಕಂ ಟ್ಯಾಕ್ಸ್ ಡಾ ನರೇಂದ್ರ ಕುಮಾರ್, ಚೀಫ್ ಕಮೀಷನರ್ ಇನ್‌ಕಂ ಟ್ಯಾಕ್ಸ್ ಐಆರ್‌ಎಸ್ ಅಧಿಕಾರಿ ಪ್ರಿಸ್ಸಿಲ್ಲಾ ಸಿಂಗ್ಸಿಟ್ ಸೇರಿ ಹಲವು ಗಣ್ಯರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ‘ನಾನು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹಳ ಸಮಯವಾಯ್ತು. ಚಿತ್ರೀಕರಣದಿಂದಾಗಿ ಎಲ್ಲಿಗೂ ಹೋಗಲಾಗುತ್ತಿಲ್ಲ. ಆದರೆ ಆದಾಯ ತೆರಿಗೆ ಇಲಾಖೆಯವರು ಕರೆದಾಗ ಇಲ್ಲ ಎನ್ನಲು ಆಗುವುದಿಲ್ಲ’ ಎಂದು ತಮಾಷೆ ಮಾಡಿದರು. ಮುಂದುವರೆದು, ‘ಅಲ್ಲದೆ, ನೀವು ಅತಿಥಿಗಳಾಗಿ ಬಂದಾಗ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ಬೇರೆ ಕೊಟ್ಟಿದ್ದರು, ಹಾಗಾಗಿ ಬಂದೆ’ ಎಂದು ತಮಾಷೆ ಮಾಡಿದರು.

ಇದನ್ನೂ ಓದಿ:ಹೇಗಿತ್ತು ನೋಡಿ ಯಶ್ ಮಗ ಯಥರ್ವ್ ಬರ್ತ್​ಡೇ ಸೆಲೆಬ್ರೇಷನ್; ಇಲ್ಲಿದೆ ವಿಡಿಯೋ

ಸಭೆಯಲ್ಲಿ ಕನ್ನಡಿಗರ ಜೊತೆಗೆ ಅನ್ಯ ಭಾಷಿಕರು ಸಹ ಹೆಚ್ಚಾಗಿದ್ದ ಕಾರಣ ಕನ್ನಡ, ಇಂಗ್ಲೀಷ್ ಎರಡೂ ಭಾಷೆಯಲ್ಲಿ ಮಾತನಾಡಿದ ಯಶ್, ‘ಕರ್ನಾಟಕ ರಾಜ್ಯ ದೇಶದಲ್ಲಿಯೇ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿರುವ ಮಾಹಿತಿ ಕೇಳಿ ಸಂತೋಷವಾಯ್ತು ಎಂದರು. ಯಾವುದೇ ಉದ್ಯಮಿ ನಷ್ಟವಾದಾಗ ಆತನಿಗೆ ತೆರಿಗೆ ವಿನಾಯಿತಿ ಮಾಡುವ ಪದ್ಧತಿ ಹೊರದೇಶಗಳಲ್ಲಿ ಇದೆ. ಅದು ಇಲ್ಲಿಯೂ ಬಂದರೆ ಉತ್ತಮ ಎಂಬ ಸಲಹೆಯನ್ನು ಅಧಿಕಾರಿಗಳಿಗೆ ನೀಡಿದರು.

ಕನ್ನಡ ಭಾಷೆಯ ಬಗ್ಗೆ ಮಾತನಾಡಿದ ಯಶ್, ‘ನೀವು ಎಲ್ಲೇ ಹೋಗಲಿ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವರಿಸಿದರೆ ನಿಮಗೆ ಅದು ದುಪ್ಪಟ್ಟಾಗಿ ಮರಳುತ್ತದೆ. ನಾನು ಇದನ್ನು ನನ್ನ ಜೀವನದಲ್ಲಿ ಅನುಭವಿಸಿದ್ದೇನೆ. ಕರ್ನಾಟಕ ಮತ್ತು ಕನ್ನಡ ಭಾಷೆ ನನಗೆ ಇತರೆ ಭಾಷೆಯನ್ನು ಗೌರವಿಸುವಂತೆಯೇ ಹೇಳಿದೆ. ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರು ಇಲ್ಲಿನ ಜನರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡುತ್ತಾರೆ ಅದು ನಿಜಕ್ಕೂ ಹೆಮ್ಮೆ ಎನಿಸುತ್ತದೆ’ ಎಂದಿದ್ದಾರೆ ಯಶ್.

ಮುಂದುವರೆದು, ‘ಬಲವಂತವಾಗಿ ಯಾರಿಗೂ ಏನನ್ನೂ ಕಲಿಸಲು ಸಾಧ್ಯವಿಲ್ಲ. ಜಗಳ ಮಾಡಿ, ಫೈಟ್ ಮಾಡಿ ನೀವು ಭಾಷೆಯನ್ನು ಕಲಿಸಲಾರಿರಿ. ಆದರೆ ಕನ್ನಡ ಕಲಿಯದಿದ್ದರೆ ನಷ್ಟವಾಗುತ್ತದೆ, ಹಿಂದುಳಿದಂತೆ ಆಗುತ್ತದೆ ಎಂಬ ಭಾವವನ್ನು ನಾವು ಸೃಷ್ಟಿಸಬೇಕಿದೆ. ನನಗೆ ಕನ್ನಡ ಬಾರದೇ ಇದ್ದರೆ ನಾನು ಏನನ್ನೋ ಕಳೆದುಕೊಳ್ಳಲಿದ್ದೇನೆ ಎಂಬ ಭಾವ ಬಂದರೆ ಆಗ ಎಲ್ಲರೂ ಕನ್ನಡ ಕಲಿಯುತ್ತಾರೆ’ ಎಂದು ಯಶ್ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ