ಈ ಬಾರಿಯೂ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೈಗೆ ಸಿಗಲ್ಲ ಯಶ್

|

Updated on: Jan 04, 2024 | 7:38 PM

Yash: ಯಶ್ ಇತ್ತೀಚೆಗಷ್ಟೆ ‘ಟಾಕ್ಸಿಕ್’ ಸಿನಿಮಾದ ಘೋಷಣೆ ಮಾಡಿದ್ದಾರೆ. ಇದೀಗ ತಮ್ಮ ಹುಟ್ಟುಹಬ್ಬದ ಕುರಿತಾಗಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಈ ಬಾರಿಯೂ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೈಗೆ ಸಿಗಲ್ಲ ಯಶ್
Follow us on

ಹಲವು ವರ್ಷ ಕಾಯಿಸಿದ ಬಳಿಕ ಇತ್ತೀಚೆಗಷ್ಟೆ ನಟ ಯಶ್ (Yash) ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ. ಯಶ್​ರ ಸಿನಿಮಾ ಘೋಷಣೆಯಾಗಿದ್ದನ್ನು ಅಭಿಮಾನಿಗಳು ಅದ್ಭುತವಾಗಿ ಸ್ವಾಗತಿಸಿದ್ದಾರೆ. ಅಂತೆಯೇ ಯಶ್ ಹುಟ್ಟುಹಬ್ಬ ಹತ್ತಿರವಾಗಿದ್ದು, ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತಯಾರಾಗಿದ್ದರು. ಆದರೆ ಇದೀಗ ಯಶ್ ತಮ್ಮ ಹುಟ್ಟುಹಬ್ಬದ ಕುರಿತಾಗಿ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜನವರಿ 8, ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ, ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ, ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ, ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ, ನನ್ನ ಅನುಪಸ್ಥಿತಿಯನ್ನು, ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ’ ಎಂದಿದ್ದಾರೆ ಯಶ್.

‘‘ಟಾಕ್ಸಿಕ್’ ಸಿನಿಮಾದ ಘೋಷಣೆ ಮಾಡಿ ಒಂದು ತಿಂಗಳಾಗಿದೆ. ನೀವು ಅದಕ್ಕೆ ತೋರುತ್ತಿರುವ ಪ್ರೀತಿ, ಪ್ರಶಂಸೆ ನನಗೆ ಸರ್ವಸ್ವವೇ ಆಗಿದೆ. ನಿಮ್ಮ ಉತ್ಸಾಹ, ನಿರೀಕ್ಷೆ, ಕತೆಯ ಬಗ್ಗೆ ನೀವು ಯೋಚಿಸುತ್ತಿರುವ ರೀತಿ, ಹಂಚಿಕೊಳ್ಳುತ್ತಿರುವ ಅಭಿಪ್ರಾಯಗಳು ಇನ್ನೂ ಹೆಚ್ಚಿಗೆ ಕೆಲಸ ಮಾಡಲು ನನಗೆ ಸ್ಪೂರ್ತಿ ನೀಡುತ್ತಿವೆ’’ ಎಂದಿದ್ದಾರೆ ಯಶ್.

ಇದನ್ನೂ ಓದಿ:‘ಟಾಕ್ಸಿಕ್’ನಲ್ಲಿ ಯಶ್​ಗೆ ಜೊತೆಯಾಗುತ್ತಿದ್ದಾರೆ ಬಾಲಿವುಡ್ ಬೆಡಗಿ: ಯಾರದು?

‘‘ನನಗೆ ಗೊತ್ತಿದೆ ನೀವು ಹಲವರು ನನ್ನನ್ನು ಖಾಸಗಿಯಾಗಿ ಭೇಟಿಯಾಗಿ ನಿಮ್ಮ ಅಭಿಪ್ರಾಯಗಳನ್ನು ನನ್ನೊಟ್ಟಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದೀರಿ. ನಿಮ್ಮೊಂದಿಗೆ ಬೆರೆಯುವುದು, ಮಾತನಾಡುವುದು ನಾನು ಉಳಿಸಿಕೊಳ್ಳುವ ಅತ್ಯಮೂಲ್ಯ ನೆನಪು, ಇದು ಸತ್ಯ. ಆದರೆ ಆ ಭೇಟಿಗೆ ಇನ್ನೂ ಸ್ವಲ್ಪ ದಿನ ಕಾಯಬೇಕಾಗಬಹುದು ಏಕೆಂದರೆ ಜನವರಿ 8ರಂದು ನಾನು ಲಭ್ಯವಿರಲು ಆಗುತ್ತಿಲ್ಲ. ವೈಯಕ್ತಿಕ ಭೇಟಿ ಸಾಧ್ಯವಾಗದಿದ್ದರೂ ನಿಮ್ಮ ಒಂದು ಹಾರೈಕೆ ನನಗೆ ಬಹಳ ಅಮೂಲ್ಯ’ ಎಂದು ಬರೆದುಕೊಂಡಿದ್ದಾರೆ ಯಶ್.

ಜನವರಿ 8ರಂದು ಯಶ್​ರ ಹುಟ್ಟುಹಬ್ಬ. ಹಲವು ವರ್ಷಗಳಿಂದ ಯಶ್, ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಂಡಿಲ್ಲ. ಕೋವಿಡ್, ಸಿನಿಮಾ ಇನ್ನಿತರೆ ಕಾರಣಗಳಿಂದ ಹುಟ್ಟುಹಬ್ಬದಂದು ಯಶ್ ಲಭ್ಯವಿರುವುದಿಲ್ಲ. ಈ ವರ್ಷ ಯಶ್, ಖಂಡಿತ ತಮ್ಮ ಅಭಿಮಾನಿಗಳನ್ನು ಭೇಟಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಈ ವರ್ಷವೂ ಸಹ ಯಶ್, ಸಿನಿಮಾ ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತಿರುವ ಕಾರಣ ಈ ವರ್ಷವೂ ಹುಟ್ಟುಹಬ್ಬ ಆಚರಣೆಗೆ ಲಭ್ಯವಿಲ್ಲ ಎಂದಿದ್ದಾರೆ.

ಕಳೆದ ವರ್ಷ ಹಲವು ಸಿನಿಮಾ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಟ್ಟಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ರಿಷಬ್ ಶೆಟ್ಟಿ, ಡಾಲಿ ಧನಂಜಯ್, ಕಿಚ್ಚ ಸುದೀಪ್, ಧ್ರುವ ಸರ್ಜಾ ಅವರುಗಳು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಅಭಿಮಾನಿಗಳೊಟ್ಟಿಗೆ ವಿಶೇಷವಾಗಿ ಆಚರಣೆ ಮಾಡಿಕೊಂಡರು. ಯಶ್ ಸಹ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.

ಯಶ್ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾ ‘ಟಾಕ್ಸಿಕ್’ನ ಘೋಷಣೆ ಮಾಡಿದ್ದು, ಸಿನಿಮಾದ ಕುರಿತು ಕೆಲಸ ಪ್ರಾರಂಭ ಮಾಡಿದ್ದಾರೆ. ಸಿನಿಮಾವನ್ನು ಮಲಯಾಳಂ ಜನಪ್ರಿಯ ನಟಿ, ನಿರ್ದೇಶಕಿ ನೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Thu, 4 January 24