ಯಶ್ (Yash) ಅಭಿಮಾನಿಗಳಿಗೆ ಇಂದು (ಜನವರಿ 8) ಖುಷಿಯ ದಿನ. ಇಂದು ರಾಕಿಂಗ್ ಸ್ಟಾರ್ ಬರ್ತ್ಡೇ. ಅನೇಕ ಕಡೆಗಳಲ್ಲಿ ಯಶ್ ಬರ್ತ್ಡೇ ಆಚರಿಸಲಾಗುತ್ತಿದೆ. ಈ ದಿನವೇ ಒಂದು ದುರ್ಘಟನೆ ನಡೆದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಬರ್ತ್ಡೇ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ಪ್ರವಹಿಸಿ ಮೂವರು ಯಶ್ ಅಭಿಮಾನಿಗಳು ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಯಶ್ ಅವರು ಗದಗಕ್ಕೆ ಭೇಟಿ ನೀಡಿ ಮೃತರ ಕುಟುಂಬದವರನ್ನು ಮಾತನಾಡಿಸಬೇಕು ಎನ್ನುವ ಆಗ್ರಹ ಜೋರಾಗಿದೆ.
ಹನಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಅವರು ಮೃತಪಟ್ಟ ದುರ್ದೈವಿಗಳು. ಮಂಜುನಾಥ್ ಹರಿಜನ, ಪ್ರಕಾಶ ಮ್ಯಾಗೇರಿ, ದೀಪಕ ಹರಿಜನ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಯಶ್ ಬರ್ತ್ಡೇ ಆಚರಿಸಲು ಇವರು ಸಿದ್ಧತೆ ಮಾಡಿಕೊಂಡಿದ್ದರು. ನೀಲಗಿರಿ ತೋಪಿಗೆ ಬ್ಯಾನರ್ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಗುಲಿದೆ. ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಸೂರಣಗಿ ಗ್ರಾಮಕ್ಕೆ ನಟ ಯಶ್ ಬರಬೇಕೆಂದು ಎಂಬ ಆಗ್ರಹ ಕೇಳಿ ಬಂದಿದೆ. ‘ಯಶ್ ನಮ್ಮೂರಿಗೆ ಬರಬೇಕು. ಬಂದು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು’ ಎಂದು ಮೃತ ಯುವಕರ ಗೆಳೆಯ ಪ್ರಕಾಶ ಮ್ಯಾಗೇರಿ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಶಾಸಕ ಚಂದ್ರು ಲಮಾಣಿ ಭೇಟಿ ನೀಡಿ ಗಾಯಾಳುಗಳ ಜೊತೆ ಮಾತನಾಡಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ಯಶ್ ಬರ್ತ್ಡೇಗೆ ವಿಶ್ ತಿಳಿಸಿದ ‘ಕೆವಿಎನ್ ಪ್ರೊಡಕ್ಷನ್ಸ್’; ಹೇಗಿದೆ ನೋಡಿ ಪೋಸ್ಟ್
ಯಶ್ ಅವರು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಬರ್ತ್ಡೇ ದಿನ ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಇಂದು ಅಭಿಮಾನಿಗಳನ್ನು ಭೇಟಿ ಮಾಡುವುದಿಲ್ಲ ಎಂದು ಅವರು ಹೇಳಿದ್ದರು. ಯಶ್ ಅವರ ಕಡೆಯಿಂದ ಕೊನೆಯಪಕ್ಷ ಒಂದು ಟ್ವೀಟ್ ಆದರೂ ಬರಲಿ ಎಂದು ಅನೇಕರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ