Year Ender 2021: ಕೊವಿಡ್​ನಿಂದ ಈ ವರ್ಷ ಚಿತ್ರರಂಗ ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Dec 24, 2021 | 5:43 PM

Year Ender 2021: ವರ್ಷಾಂತ್ಯಕ್ಕೆ ಚಿತ್ರರಂಗದಲ್ಲಿ ಮೊದಲಿನ ಕಳೆ ಕಾಣಿಸಿಕೊಂಡಿದೆ. ಆದಾಗ್ಯೂ ಮೂರನೇ ಅಲೆಯ ಭಯದ ಛಾಯೆ ಹಾಗೆಯೇ ಇದೆ. ಹಾಗಾದರೆ, ಈ ಬಾರಿ ಕೊವಿಡ್​ ತಂದ ಅವಾಂತರಗಳೇನು? ಚಿತ್ರರಂಗಕ್ಕೆ ಕೊವಿಡ್​ನಿಂದ ಆದ ನಷ್ಟಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

Year Ender 2021: ಕೊವಿಡ್​ನಿಂದ ಈ ವರ್ಷ ಚಿತ್ರರಂಗ ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ವೈರಸ್ ಮೊದಲನೇ ಅಲೆ ತಣ್ಣಗಾಯಿತು ಎನ್ನುವಾಗಲೇ ಎರಡನೇ ಅಲೆ ಕಾಣಿಸಿಕೊಂಡಿತ್ತು. 2021ರ ಕೆಲವೇ ತಿಂಗಳು ಕಳೆಯುವ ಮೊದಲೇ ಕೊರೊನಾ ಅಬ್ಬರ ಜೋರಾಗಿತ್ತು. ಎಲ್ಲಾ ಇಂಡಸ್ಟ್ರಿಗಳಂತೆ ಚಿತ್ರರಂಗ ಕೂಡ ಕೊವಿಡ್​ ಹೊಡೆತಕ್ಕೆ ತತ್ತರಿಸಿ ಹೋಗಿತ್ತು. ವರ್ಷಾಂತ್ಯಕ್ಕೆ ಚಿತ್ರರಂಗದಲ್ಲಿ ಮೊದಲಿನ ಕಳೆ ಕಾಣಿಸಿಕೊಂಡಿದೆ. ಆದಾಗ್ಯೂ ಮೂರನೇ ಅಲೆಯ ಭಯದ ಛಾಯೆ ಹಾಗೆಯೇ ಇದೆ. ಹಾಗಾದರೆ, ಈ ಬಾರಿ ಕೊವಿಡ್​ ತಂದ ಅವಾಂತರಗಳೇನು? ಚಿತ್ರರಂಗಕ್ಕೆ ಕೊವಿಡ್​ನಿಂದ ಆದ ನಷ್ಟಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಸಿನಿಮಾ ಕೆಲಸಗಳಿಗೆ ಬ್ರೇಕ್​

2021 ಆರಂಭವಾಗಿ ಕೆಲವೇ ತಿಂಗಳಲ್ಲಿ ಕೊವಿಡ್​ ಎರಡನೇ ಅಲೆ ಕಾಣಿಸಿಕೊಂಡಿತ್ತು. ಹೀಗಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳಿಗೆ ಬ್ರೇಕ್​​ ಹಾಕುವುದು ಅನಿವಾರ್ಯವಾಗಿತ್ತು. ಸಿನಿಮಾ ಶೂಟಿಂಗ್​ ಹಲವು ತಿಂಗಳ ಕಾಲ ನಿಂತಿತ್ತು. ಇದರಿಂದ ಹಲವು ಸ್ಟಾರ್​ ನಟರ ಚಿತ್ರಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು.

ಬಾಕ್ಸ್ ಆಫೀಸ್​ ಕಲೆಕ್ಷನ್​ಗೆ ಹೊಡೆತ

ಸ್ಯಾಂಡಲ್​ವುಡ್​ನಲ್ಲಿ ವರ್ಷದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಕೊವಿಡ್​ ಭಯದಿಂದ ಹಲವು ಸಿನಿಮಾಗಳ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ ಬಿದ್ದಿತ್ತು. ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಇದಕ್ಕೆ ಉತ್ತಮ ಉದಾಹರಣೆ. ಏಪ್ರಿಲ್​ 1ಕ್ಕೆ ಚಿತ್ರ ರಿಲೀಸ್​ ಆಗಿತ್ತು. ಸಿನಿಮಾ ತೆರೆಗೆ ಬಂದ ಕೆಲವೇ ದಿನಗಳಲ್ಲಿ ಕೊವಿಡ್​ ಸಂಖ್ಯೆ ಹೆಚ್ಚಿತ್ತು. ಇದರಿಂದ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಆದೇಶ ಹೊರಡಿಸಲಾಗಿತ್ತು. ಹೀಗಾಗಿ, ಸಿನಿಮಾದ ಕಲೆಕ್ಷನ್​ ಕುಗ್ಗಿತ್ತು.

ಬಡವಾದ ಬಾಲಿವುಡ್​

ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ಬಾಲಿವುಡ್​ ಮೇಲೂ ಕೊರೊನಾ ವಕ್ರದೃಷ್ಟಿ ಬಿದ್ದಿತ್ತು. ಕೋಟಿಕೋಟಿ ಕಲೆಕ್ಷನ್​ ಮಾಡುತ್ತಿದ್ದ ಸ್ಟಾರ್​ ನಟರ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಡಲ್​ ಹೊಡೆದವು. ಕೊವಿಡ್​ನಿಂದ ಹೇರಲಾದ ಲಾಕ್​ಡೌನ್​ ಸಡಿಲ ಮಾಡುತ್ತಿದ್ದಂತೆ ಸ್ಟಾರ್​ ನಟ ಅಕ್ಷಯ್​ ಕುಮಾರ್​ ಅವರ ‘ಬೆಲ್​ ಬಾಟಂ’ ಚಿತ್ರ ರಿಲೀಸ್ ಆಗಿತ್ತು. ಈ ಸಿನಿಮಾ ಕಲೆಕ್ಷನ್​ನಲ್ಲಿ ಹಿಂದೆ ಬಿದ್ದಿತ್ತು. ಸಲ್ಮಾನ್​ ಖಾನ್​ ನಟನೆಯ ‘ಅಂತಿಮ್​-ದಿ ಫೈನಲ್​ ಟ್ರುತ್​’ ಚಿತ್ರವೂ ಅಂಥ ಕಲೆಕ್ಷನ್ ಮಾಡಲಿಲ್ಲ. ‘ಸೂರ್ಯವಂಶಿ’ ಸೇರಿ ಕೆಲವೇ ಕೆಲವು ಚಿತ್ರಗಳು ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ 100 ಕೋಟಿ ರೂಪಾಯಿ ದಾಟಿದೆ.

ಒಟಿಟಿ ಹಾದಿ ಹಿಡಿದ ನಿರ್ಮಾಪಕರು

ಹಲವು ಸಿನಿಮಾಗಳು ಕೊವಿಡ್​ ಕಾರಣದಿಂದ ಒಟಿಟಿ ಹಾದಿ ಹಿಡಿದವು. ಚಿತ್ರಮಂದಿರದಲ್ಲಿ ಮಿಂಚಬಹುದಾದ ಚಿತ್ರಗಳೂ ಒಟಿಟಿಯಲ್ಲಿ ರಿಲೀಸ್​ ಆದವು. ಇದು ಕೆಲ ನಿರ್ಮಾಪಕರಿಗೆ ಲಾಭವಾದರೆ, ಇನ್ನೂ ಕೆಲ ನಿರ್ಮಾಪಕರಿಗೆ ನಷ್ಟವನ್ನುಂಟು ಮಾಡಿದೆ. ಒಟಿಟಿ ವಲಯದ ವ್ಯಾಪ್ತಿ ಹೆಚ್ಚಿದೆ.

ಮೂರನೇ ಅಲೆಯ ಭಯ

ಕೊವಿಡ್​ ಕಡಿಮೆ ಆಗುತ್ತಿದ್ದಂತೆ ಸ್ಟಾರ್​ ನಟರು ಸಿನಿಮಾ ರಿಲೀಸ್​ ಘೋಷಣೆ ಮಾಡಿದ್ದಾರೆ. ಈ ಮಧ್ಯೆ, ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದೆ. ಹೀಗಾಗಿ, ಚಿತ್ರರಂಗದಲ್ಲಿ ಮತ್ತೆ ಅನಿಶ್ಚಿತತೆ ಎದುರಾಗುವ ಭಯ ಕಾಡಿದೆ. ಮುಂದೇನಾಗುತ್ತದೆ ಎನ್ನುವ ಭಯದಲ್ಲೇ ಚಿತ್ರತಂಡದವರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರಿಗೆ ‘ಬಡವ ರಾಸ್ಕಲ್​’ ಚಿತ್ರ ಇಷ್ಟವಾಯ್ತಾ? ಧನಂಜಯ ಅಭಿಮಾನಿಗಳು ಹೇಳಿದ್ದೇನು?