13ನೇ ವಯಸ್ಸಿಗೆ ವಿವಾಹ, ಇಸ್ಲಾಂಗೆ ಮತಾಂತರ: ಸರೋಜ್ ಖಾನ್ ಜೀವನದ ಕರಾಳ ಸತ್ಯ

ಸರೋಜ್ ಖಾನ್, 'ಏಕ್ ದೋ ತೀನ್', 'ಡೋಲಾ ರೇ ಡೋಲಾ' ನಂತಹ ಹಾಡುಗಳಿಗೆ ನೃತ್ಯ ಸಂಯೋಜಿಸಿದವರು. ಅವರ ವೃತ್ತಿಜೀವನ ಯಶಸ್ವಿಯಾದರೂ, ಬಾಲ್ಯವಿವಾಹ, ಮೋಸಗಳಿಂದ ಕೂಡಿದ ವೈಯಕ್ತಿಕ ಜೀವನ ಸಂಘರ್ಷಮಯವಾಗಿತ್ತು. ನೋವುಗಳ ನಡುವೆಯೂ ನೃತ್ಯದ ಮೇಲಿನ ಅವರ ಪ್ರೀತಿ ಮತ್ತು ದೃಢತೆ ಅವರನ್ನು ಮಹಾನ್ ಕಲಾವಿದೆಯಾಗಿ ರೂಪಿಸಿತು, ಅನೇಕರಿಗೆ ಸ್ಫೂರ್ತಿಯಾದರು.

13ನೇ ವಯಸ್ಸಿಗೆ ವಿವಾಹ, ಇಸ್ಲಾಂಗೆ ಮತಾಂತರ: ಸರೋಜ್ ಖಾನ್ ಜೀವನದ ಕರಾಳ ಸತ್ಯ
ಸರೋಜ್ ಖಾನ್
Edited By:

Updated on: May 02, 2026 | 10:45 AM

ಬಾಲಿವುಡ್‌ನ ಐಕಾನಿಕ್ ಹಾಡುಗಳಾದ ‘ಏಕ್ ದೋ ತೀನ್’ ಮತ್ತು ‘ಡೋಲಾ ರೇ ಡೋಲಾ’ ಹಾಡುಗಳಿಗೆ ನೃತ್ಯ ಸಂಯೋಜಿಸಿ ಗಮನ ಸೆಳೆದವರು ಸರೋಜ್ ಖಾನ್. ತೆರೆಯ ಮೇಲೆ ಬಣ್ಣದ ಲೋಕವನ್ನು ಸೃಷ್ಟಿಸಿದ ಅವರ ವೈಯಕ್ತಿಕ ಜೀವನ ಮಾತ್ರ ಕಣ್ಣೀರಿನ ಕಥೆಯಂತಿತ್ತು. ಬಾಲ್ಯವಿವಾಹ, ಮೋಸ ಮತ್ತು ಜೀವನದ ಸಂಘರ್ಷಗಳ ನಡುವೆಯೇ ಅವರು ಬೆಳೆದು ಬಂದ ಹಾದಿ ನಿಜಕ್ಕೂ ರೋಚಕ.

1948 ರಲ್ಲಿ ಮುಂಬೈನಲ್ಲಿ ನಿರ್ಮಲಾ ನಾಗಪಾಲ್ ಆಗಿ ಜನಿಸಿದ ಇವರು, ಬಡತನದ ಕಾರಣದಿಂದ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಕೇವಲ 13 ವರ್ಷದವರಿದ್ದಾಗ ತಮ್ಮ ನೃತ್ಯ ಗುರುಗಳಾದ 43 ವರ್ಷದ ಬಿ. ಸೋಹನ್‌ಲಾಲ್ ಅವರೊಂದಿಗೆ ವಿವಾಹವಾದರು. ‘ಮದುವೆ ಎಂದರೆ ಏನು ಎಂದು ತಿಳಿಯದ ವಯಸ್ಸಿನಲ್ಲಿ, ಅವರು ನನ್ನ ಕುತ್ತಿಗೆಗೆ ತಾಳಿ ಕಟ್ಟಿದರು. ನಾನು ಮದುವೆಯಾಯಿತು ಎಂದು ನಂಬಿದೆ’ ಎಂದು ಸರೋಜ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವಿವಾಹದ ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸರೋಜ್ ಖಾನ್ ಎಂಬ ಹೆಸರನ್ನು ಪಡೆದರು.

ಸರೋಜ್ ಖಾನ್ 14ನೇ ವಯಸ್ಸಿನಲ್ಲಿ ಗರ್ಭಿಣಿಯಾದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಪತಿ ಸೋಹನ್‌ಲಾಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅವರಿಗೆ ನಾಲ್ವರು ಮಕ್ಕಳಿದ್ದಾರೆ ಎಂಬ ಸತ್ಯ ಬಯಲಾಯಿತು. ಅಷ್ಟೇ ಅಲ್ಲದೆ, ಸೋಹನ್‌ಲಾಲ್ ಅವರು ಸರೋಜ್ ಖಾನ್ ಅವರ ಮಕ್ಕಳಿಗೆ ತಂದೆಯ ಹೆಸರನ್ನು ನೀಡಲು ನಿರಾಕರಿಸಿದರು. ಈ ದ್ರೋಹ ಮತ್ತು ನೋವಿನಿಂದ ಅವರು ಮಾನಸಿಕವಾಗಿ ಕುಗ್ಗಿಹೋದರೂ, ಧೈರ್ಯಗೆಡದೆ ತಮ್ಮ ಮಕ್ಕಳನ್ನು ಒಬ್ಬಂಟಿಯಾಗಿ ಸಾಕಲು ನಿರ್ಧರಿಸಿದರು.

1975 ರಲ್ಲಿ ಸರ್ದಾರ್ ರೋಷನ್ ಖಾನ್ ಅವರು ಸರೋಜ್ ಅವರನ್ನು ಮದುವೆಯಾಗಲು ಪ್ರಸ್ತಾಪಿಸಿದರು. ‘ನನ್ನ ಮಕ್ಕಳನ್ನು ಸ್ವೀಕರಿಸುವುದಾದರೆ ಮಾತ್ರ ನಾನು ಮದುವೆಯಾಗುತ್ತೇನೆ’ ಎಂಬ ಸರೋಜ್ ಅವರ ಷರತ್ತಿಗೆ ರೋಷನ್ ಒಪ್ಪಿದರು. ಈ ದಂಪತಿಗೆ ಸುಕೈನಾ ಎಂಬ ಮಗಳಿದ್ದಾಳೆ. ವೈಯಕ್ತಿಕವಾಗಿ ನೋವುಗಳನ್ನು ಕಂಡರೂ ಸರೋಜ್ ಖಾನ್ ವೃತ್ತಿಜೀವನದಲ್ಲಿ ಸೋಲಲಿಲ್ಲ.

ಇದನ್ನೂ ಓದಿ: ‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

ಸಂಜಯ್ ಲೀಲಾ ಭನ್ಸಾಲಿ ಅವರ ಪ್ರಕಾರ, ಸರೋಜ್ ಖಾನ್ ಅವರಿಗೆ ನೃತ್ಯವೆಂದರೆ ಪ್ರಾಣವಾಗಿತ್ತು. ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗಲೂ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ, ‘ಡೋಲಾ ರೇ ಡೋಲಾ ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ನಾಣ್ಯಗಳನ್ನು ಎಸೆದರೇ?’ ಎಂಬುದಾಗಿತ್ತು. ನೋವಿನಲ್ಲೂ ನಗು ಮೂಡಿಸುತ್ತಾ, ಸಾವಿರಾರು ಜನರಿಗೆ ನೃತ್ಯ ಕಲಿಸಿದ ಈ ಮಹಾನ್ ಚೇತನದ ಬದುಕು ಇಂದಿಗೂ ಅನೇಕರಿಗೆ ಸ್ಫೂರ್ತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us