Chalapathi Rao Passes Away: ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಿರಿಯ ನಟ ಚಲಪತಿ ರಾವ್‌ ಹೃದಯಾಘಾತದಿಂದ ನಿಧನ

| Updated By: Vinay Bhat

Updated on: Dec 25, 2022 | 9:37 AM

Chalapathi Rao: ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್‌ (Chalapathi Rao) ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Chalapathi Rao Passes Away: ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಿರಿಯ ನಟ ಚಲಪತಿ ರಾವ್‌ ಹೃದಯಾಘಾತದಿಂದ ನಿಧನ
Chalapathi Rao
Follow us on

ತೆಲುಗು ಚಿತ್ರರಂಗಕ್ಕೆ ಒಂದರ ಮೇಲೊಂದು ಆಘಾತ ಉಂಟಾಗುತ್ತಿದೆ. ಇತ್ತೀಚೆಗಷ್ಟೆ ಸೂಪರ್‌ ಸ್ಟಾರ್‌ ಕೃಷ್ಣ ನಿಧನರಾಗಿದ್ದರು. ಆ ನೋವಿನಿಂದ ಹೊರಬರುವ ಮುನ್ನವೇ ಕೈಕಲಾ ಸತ್ಯನಾರಾಯಣ್‌ (Kaikala Satyanarayana) ಇಹಲೋಕ ತ್ಯಜಿಸಿದರು. ನಿನ್ನೆ ಶನಿವಾರವಷ್ಟೇ ಇವರ ಅಂತ್ಯಸಂಸ್ಕಾರ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್‌ (Chalapathi Rao) ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರು ಪುತ್ರಿಯರು, ಪುತ್ರ ಹಾಗೂ ಪತಿಯನ್ನು ಚಲಪತಿ ರಾವ್‌ ಅಗಲಿದ್ದಾರೆ.

ತೆಲುಗಿನಲ್ಲಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಚಲಪತಿ ರಾವ್‌ ಅವರಿಗೆ 78 ವರ್ಷ ವಯಸ್ಸಾಗಿತ್ತು. ಪೋಷಕ ನಟನಾಗಿ, ಖಳ ನಟನಾಗಿ, ಹಾಸ್ಯಪಾತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. 1944 ರಲ್ಲಿ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಬಲ್ಲಿಪರ್ರುದಲ್ಲಿ ಜನಿಸಿದ ಇವರನ್ನು ಎನ್‌ಟಿಆರ್ ಚಿತ್ರರಂಗಕ್ಕೆ ಕರೆತಂದರು. 1966 ರಲ್ಲಿ ಬಿಡುಗಡೆಯಾದ ‘ಗುಡಾಚಾರಿ 116’ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ತೆಲುಗು ಚಿತ್ರರಂಗದ ಖ್ಯಾತ ನಟರಾದ ಎನ್​ಟಿಆರ್, ಕೃಷ್ಣ, ಅಕ್ಕಿನೇನಿ ನಾಗಾರ್ಜುನ, ಚಿರಂಜೀವಿ, ವೆಂಕಟೇಶ್ ಸೇರಿದಂತೆ ಅನೇಕ ನಾಯಕರ ಜೊತೆ ಪೋಷಕ ನಟ ಮತ್ತು ಖಳನಾಯಕನಾಗಿ ಅಭಿನಯಿಸಿ ಪ್ರಶಂಸೆಗೆ ಪಾತ್ರರಾದರು.

ರಾವ್ ಅವರು ಐದು ದಶಕಗಳ ಸಿನಿಮಾ ವೃತ್ತಿಜೀವನದಲ್ಲಿ 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ನಿರ್ಮಾಣಕ್ಕೂ ಪ್ರವೇಶಿಸಿ ‘ಕಲಿಯುಗ ಕೃಷ್ಣಡು’, ‘ಕಡಪ ರೆಡ್ಡಮ್ಮ’, ‘ಜಗನ್ನಾಟಕಂ’ ‘ಪೆಲ್ಲಂತೆ ನೂರೆಲ್ಲ ಪಂತ’, ‘ಅಧ್ಯಕ್ಷರಿಗಾಗಿ ಅಲ್ಲುಡು’, ‘ಅರ್ಧರಾತ್ರಿ ಹತ್ಯಾಲು’ ಮತ್ತು ‘ರಕ್ತ ಚಿಂದಿನ ರಾತ್ರಿ’ ಚಿತ್ರಗಳನ್ನು ನಿರ್ಮಿಸಿದ್ದರು.

ಇದನ್ನೂ ಓದಿ
Amulya Gowda: ಬಿಗ್ ಬಾಸ್ ಎಲಿಮಿನೇಷನ್‌ಗೆ ಟ್ವಿಸ್ಟ್‌; ಅಮೂಲ್ಯ ಔಟ್, ಇಂದು ಮತ್ತೋರ್ವ ಸ್ಪರ್ಧಿ‌ ಎಲಿಮಿನೇಟ್
Pathaan: ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದ: ಬಾಲಿವುಡ್​ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿರಿಯ ನಟಿ ಆಶಾ ಪರೇಖ್   
Tunisha Sharma: ಧಾರಾವಾಹಿಯ ಶೂಟಿಂಗ್​ ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ
ಬಿಗ್ ಬಾಸ್ ಗೆದ್ರೆ ಆರ್ಯವರ್ಧನ್​-ರೂಪೇಶ್​ ಸ್ಪೀಚ್ ಹೇಗಿರುತ್ತದೆ? ಸುದೀಪ್​ ಎದುರು ಮಿಮಿಕ್ರಿ ಮಾಡಿ ತೋರಿಸಿದ ಮನೆ ಮಂದಿ

‘ಧಾರ್ಮಿಕ ಭಯೋತ್ಪಾದನೆ ತಡೆಗೆ ತೆರಿಗೆ ಹಣ ಬಳಕೆ ಆಗುತ್ತಿದೆ’; ಬೊಬ್ಬೆ ಹೊಡೆದವರಿಗೆ ವಿವೇಕ್ ಅಗ್ನಿಹೋತ್ರಿ ತಿರುಗೇಟು

ಎನ್​ಟಿಆರ್ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದ ರಾವ್ ಮೂರು ತಲೆಮಾರಿನ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ‘ಯಮಗೋಳ’, ‘ಯುಗಪುರುಷ’, ‘ಡ್ರೈವರ್ ರಾಮ’, ‘ಅಕ್ಬರ್ ಸಲೀಂ ಅನಾರ್ಕಲಿ’, ‘ಭಲೇ ಕೃಷ್ಣ’, ‘ಸಾರದಾ ರಾಮ’, ‘ಜಸ್ಟೀಸ್ ಚೌಧರಿ’, ‘ಬೊಬ್ಬಿಲಿ ಪುಲಿ’, ‘ಮುಂತಾದ ಚಿತ್ರಗಳಿಗೆ ಅವರು ಚಿರಪರಿಚಿತರು. ‘ಕಳ್ಳ ರಾಮ’, ‘ಅಲ್ಲಾರಿ ಅಲ್ಲುಡು’, ‘ಅಲ್ಲರಿ’, ‘ನಿನ್ನೆ ಪೆಲ್ಲದಾತ’, ‘ನುವ್ವೇ ಕಾವಲಿ’, ‘ಸಿಂಹಾದ್ರಿ’, ‘ಬನ್ನಿ’, ‘ಬೊಮ್ಮರಿಲ್ಲು’, ‘ಅರುಂಧತಿ’, ‘ಸಿಂಹ’ ಮತ್ತು ‘ ದಮ್ಮು’ ಇವರ ನಟನೆಯ ಪ್ರಸಿದ್ಧ ಸಿನಿಮಾಗಳು. ಕಳೆದ ವರ್ಷ ಬಿಡುಗಡೆ ಆದ ‘ಬಂಗಾರ್ರಾಜು’ ನಂತರ ಬೆಳ್ಳಿತೆರೆಯಲ್ಲಿ ಇವರು ಕಾಣಿಸಿಕೊಂಡಿರಲಿಲ್ಲ.

ಚಲಪತಿ ರಾವ್ ಅವರ ಮಗಳು ಅಮೆರಿಕದಿಂದ ಬಂದ ನಂತರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪಾರ್ಥಿವ ಶರೀರವನ್ನು ಭಾನುವಾರ ಮಧ್ಯಾಹ್ನದವರೆಗೆ ಅಭಿಮಾನಿಗಳ ಭೇಟಿಗಾಗಿ ಬಂಜಾರಾ ಹಿಲ್ಸ್‌ನಲ್ಲಿರುವ ರವಿಬಾಬು ಅವರ ಮನೆಯಲ್ಲಿ ಇರಿಸಲಾಗಿದ್ದು, ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಲಿದ್ದಾರೆ. ಬುಧವಾರ (ಡಿಸೆಂಬರ್ 28) ಮಧ್ಯಾಹ್ನ 3 ಗಂಟೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:26 am, Sun, 25 December 22