‘ಆರ್ಆರ್ಆರ್’ (RRR) ಸಿನಿಮಾ ಬಳಿಕ ರಾಮ್ ಚರಣ್ (Ram Charan) ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಅವರೀಗ ಕಡಿಮೆ ಬಜೆಟ್ ಸಿನಿಮಾಗಳತ್ತ ಮುಖ ಸಹ ತಿರುಗಿಸುವುದಿಲ್ಲ. ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಮ್ ಚರಣ್ ಭಾರಿ ಬಜೆಟ್ನ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಅದುವೇ ‘ಗೇಮ್ ಚೇಂಜರ್’. ದಕ್ಷಿಣ ಭಾರತದ ಬಡಾ ನಿರ್ದೇಶಕರಲ್ಲಿ ಒಬ್ಬರಾದ ಶಂಕರ್ ಈ ಸಿನಿಮಾದ ನಿರ್ದೇಶಕ. ಯಾವುದೇ ಸಿನಿಮಾ ಮಾಡಿದರೂ ಭಾರಿ ದೊಡ್ಡ ಸ್ಕೇಲ್ನಲ್ಲಿ ಮಾಡುವುದು ಇವರ ಶೈಲಿ. ‘ರೋಬೋ’, ‘ಶಿವಾಜಿ’, ‘ಅನ್ನಿಯನ್’ ಹೀಗೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಇವರ ಖಾತೆಯಲ್ಲಿದೆ. ಇದೀಗ ರಾಮ್ ಚರಣ್ಗಾಗಿ ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ಶಂಕರ್, ಕೇವಲ ಹಾಡುಗಳ ಚಿತ್ರೀಕರಣಕ್ಕೆ 60 ಕೋಟಿಗೂ ಹೆಚ್ಚು ಮೊತ್ತ ವ್ಯಯಿಸಿದ್ದಾರಂತೆ.
ಶಂಕರ್ ಶೈಲಿಯೇ ಅದು. ಸಿನಿಮಾಗಳ ಹಾಡುಗಳು ಹಾಗೂ ಫೈಟ್ಗಳ ಬಗ್ಗೆ ಅತಿಯಾದ ಕಾಳಜಿವಹಿಸಿ ಸಂಪೂರ್ಣ ಭಿನ್ನವಾಗಿ ಹಾಗೂ ಸಖತ್ ರಿಚ್ ಆಗಿ ಚಿತ್ರೀಕರಣ ಮಾಡುತ್ತಾರೆ ಶಂಕರ್. ಸಾವಿರ-ಎರಡು ಸಾವಿರ ಮಂದಿ ಡ್ಯಾನ್ಸರ್ಗಳನ್ನು ಇಟ್ಟುಕೊಂಡು ಶೂಟ್ ಮಾಡುವುದು, ಐದು ನಿಮಿಷದ ಹಾಡಿಗೆ ಭಾರಿ ದೊಡ್ಡ ಸೆಟ್ ಹಾಕುವುದು, ಹಾಡಿನಲ್ಲಿ ಹೊಸದಂದು ಕತೆಯನ್ನೇ ಹೇಳಿಬಿಡುವುದು ಹೀಗೆ ಒಟ್ಟಾರೆ ಸಿನಿಮಾಕ್ಕೆ ಎಷ್ಟು ಹಣ ವ್ಯಯಿಸುತ್ತಾರೆಯೇ ಅಷ್ಟೆ ಹಣವನ್ನು ಹಾಡುಗಳ ಚಿತ್ರೀಕರಣಕ್ಕೂ ಶಂಕರ್ ವ್ಯಯಿಸುತ್ತಾರೆ.
ಇದನ್ನೂ ಓದಿ:ರಾಮ್ ಚರಣ್ ಅನ್ನು ಅವಮಾನಿಸಿದರೇ ಶಾರುಖ್ ಖಾನ್? ಇಲ್ಲಿದೆ ಸತ್ಯ
ಈಗ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದು ಈ ಸಿನಿಮಾದ ಐದು ಹಾಡುಗಳಿಗೆ ಈಗಾಗಲೇ 60 ಕೋಟಿಗೂ ಹೆಚ್ಚು ಮೊತ್ತವನ್ನು ಶಂಕರ್ ಖರ್ಚು ಮಾಡಿದ್ದಾರಂತೆ. ಇದು ಊಹಾ-ಪೋಹದ ಕತೆಯಲ್ಲ. ಈ ವಿಷಯವನ್ನು ಸಿನಿಮಾದ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ‘ಗೇಮ್ ಚೇಂಜರ್’ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಿದ್ದು, ಇತ್ತೀಚೆಗಿನ ಸಂದರ್ಶನದಲ್ಲಿ ಶಂಕರ್, ಹಾಡುಗಳಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದಾಗಿ ಹೇಳಿದ್ದಾರೆ.
‘ಸಿನಿಮಾದ ಶೂಟಿಂಗ್ ತುಂಬಾ ಚೆನ್ನಾಗಿ ಸಾಗುತ್ತಿದೆ. ಈ ವರೆಗೆ 75% ಶೂಟಿಂಗ್ ಅನ್ನು ನಾವು ಮುಗಿಸಿದ್ದೇವೆ. ಶಂಕರ್, ತಮ್ಮದೇ ರೀತಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ವರೆಗೆ ಚಿತ್ರೀಕರಿಸಲಾದ ಐದು ಹಾಡುಗಳಿಗೆ ಪ್ರತಿ ಹಾಡಿಗೆ, 10 ರಿಂದ 12 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಅದು ಅವರ ಶೈಲಿ, ನಾನು ಈಗ ಅವರ ಶೈಲಿಗೆ ನನ್ನ ಬಜೆಟ್ ಅನ್ನು ಅಡ್ಜೆಸ್ಟ್ ಮಾಡಿಕೊಂಡು ಬಿಟ್ಟಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಶಂಕರ್, ರಾಮ್ ಚರಣ್ಗೆ ಚೆನ್ನಾಗಿ ಹೊಂದುವ ಕತೆಯನ್ನು ಆರಿಸಿ ಸಿನಿಮಾ ಮಾಡುತ್ತಿದ್ದಾರೆ’ ಎಂದಿದ್ದಾರೆ.
ರಾಮ್ ಚರಣ್ ಹಾಗೂ ಶಂಕರ್ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಶಂಕರ್, ‘ಗೇಮ್ ಚೇಂಜರ್’ ಸಿನಿಮಾದ ಜೊತೆಗೆ ಕಮಲ್ ಹಾಸನ್ ಜೊತೆಗೆ ‘ಇಂಡಿಯನ್ 2’ ಸಿನಿಮಾದ ನಿರ್ದೇಶನವನ್ನೂ ಮಾಡಿದ್ದಾರೆ. ‘ಗೇಮ್ ಚೇಂಜರ್’ ಸಿನಿಮಾ, ರಾಜಕೀಯ ಥ್ರಿಲ್ಲರ್ ಕತೆಯಾಗಿದ್ದು, ಸಿನಿಮಾದಲ್ಲಿ ರಾಮ್ ಚರಣ್ ಎದುರು ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ತೆಲುಗಿನ ಜನಪ್ರಿಯ ನಟ ಸುನಿಲ್ ಸಹ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ