ಎಲ್ಲ ಕ್ಷೇತ್ರಗಳ ರೀತಿ ಬಾಲಿವುಡ್ನಲ್ಲಿಯೂ ಲಿಂಗ ತಾರತಮ್ಯ ಇದೆ. ಸಂಭಾವನೆ ವಿಚಾರದಲ್ಲಿ ನಟ-ನಟಿಯರ ನಡುವೆ ದೊಡ್ಡ ಅಂತರ ಇದೆ ಎಂಬುದು ಗೊತ್ತಿರುವ ವಿಚಾರ. ಕೆಲವು ನಟಿಯರು ಹಿಟ್ ಸಿನಿಮಾಗಳನ್ನು ನೀಡಿದ್ದರು ಕೂಡ ಅವರನ್ನು ಸ್ಟಾರ್ ನಟರಿಗೆ ಸರಿಸಮನಾಗಿ ಪರಿಗಣಿಸುವುದಿಲ್ಲ ಈ ಚಿತ್ರರಂಗ. ಈ ವಿಚಾರದ ಬಗ್ಗೆ ನಟಿ ವಿದ್ಯಾ ಬಾಲನ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಹಾನಿ, ದಿ ಡರ್ಟಿ ಪಿಕ್ಚರ್, ಶಕುಂತಲಾ ದೇವಿ ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದವರು ನಟಿ ವಿದ್ಯಾ ಬಾಲನ್. ‘ಚಿತ್ರರಂಗದಲ್ಲಿ ನಾವು ಲಿಂಗ ತಾರತಮ್ಯ ಎದುರಿಸುತ್ತಿದ್ದೇವೆ. ಪುರುಷರಿಂದ ಮಾತ್ರವಲ್ಲ, ಮಹಿಳೆಯರಿಂದಲೂ ಇದು ನಡೆಯುತ್ತದೆ. ಇಂದಿಗೂ ನಾನು ಅದನ್ನು ಅನುಭವಿಸುತ್ತಿದ್ದೇನೆ. ಅದು ನನಗೆ ತುಂಬ ಕಿರಿಕಿರಿ ಉಂಟು ಮಾಡುತ್ತದೆ’ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.
‘ಲಿಂಗ ತಾರತಮ್ಯ ಎಂಬುದು ಮೊದಲಿಗಿಂತಲೂ ಈಗ ಕಡಿಮೆ ಆಗಿದೆ. ಆದರೆ ಇಂದಿಗೂ ನಾನು ಆ ಸಮಸ್ಯೆ ಎದುರಿಸುತ್ತಿರುವುದು ನಿಜ. ನನ್ನ ಸುತ್ತಮುತ್ತ ಇರುವ ಅನೇಕರಿಗೆ ಹಾಗೆ ಆಗಿದೆ. ಆರಂಭದ ದಿನಗಳಲ್ಲಿ ನಟರ ಡೇಟ್ಸ್ಗೆ ಅನುಗುಣವಾಗಿ ನನ್ನ ಡೇಟ್ಸ್ ಹೊಂದಿಸಿಕೊಳ್ಳುವಂತೆ ನಿರ್ದೇಶಕರು ಹೇಳುತ್ತಿದ್ದರು. ಆ ನಟರಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರವನ್ನು ನಾನು ಮಾಡುತ್ತಿದ್ದರೂ ಕೂಡ ನಾನು ಅವರ ಡೇಟ್ಸ್ಗೆ ಹೊಂದಿಕೊಳ್ಳಬೇಕಿತ್ತು’ ಎಂದು ವಿದ್ಯಾ ಬೇಸರ ಹೊರಹಾಕಿದ್ದಾರೆ.
2005ರಲ್ಲಿ ತೆರೆಕಂಡ ‘ಪರಿಣೀತಾ’ ಸಿನಿಮಾದಿಂದ ವಿದ್ಯಾ ಬಾಲನ್ ಅವರು ಬಾಲಿವುಡ್ಗೆ ಕಾಲಿಟ್ಟರು. ಆ ಚಿತ್ರದಲ್ಲಿ ಅವರು ಸೈಫ್ ಅಲಿ ಖಾನ್ ಮತ್ತು ಸಂಜಯ್ ದತ್ ಜೊತೆ ತೆರೆ ಹಂಚಿಕೊಂಡರು. ಅಂಥ ಸ್ಟಾರ್ ನಟರ ನಡುವೆಯೂ ವಿದ್ಯಾ ಮಿಂಚಿದರು. ಮೊದಲ ಚಿತ್ರದಲ್ಲೇ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು. ಬಳಿಕ ಅನೇಕ ಮಹಿಳಾಪ್ರಧಾನ ಸಿನಿಮಾ ಮಾಡಿ ಗುರುತಿಸಿಕೊಂಡರು. ಯಾವುದೇ ಸ್ಟಾರ್ ನಟನ ಅನಿವಾರ್ಯತೆ ಇಲ್ಲದೆಯೋ ತಮ್ಮ ಸಿನಿಮಾವನ್ನು ಗೆಲ್ಲಿಸಬಲ್ಲ ನಟಿಯಾಗಿ ಅವರು ಬೆಳೆದುನಿಂತರು. ಅವರು ನಟಿಸಿರುವ ಹೊಸ ಸಿನಿಮಾ ‘ಶೇರ್ನಿ’ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಜೂ.18ರಂದು ಬಿಡುಗಡೆ ಆಗಿದೆ.
ಇದನ್ನೂ ಓದಿ:
‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್ ನಟಿ
ಯಾಮಿ ಗೌತಮ್ ಪೋಸ್ಟ್ನಲ್ಲಿ ಕಂಗನಾ ಕಿರಿಕ್; ಬಾಲಿವುಡ್ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ