
ಇದೊಂದು ಅಚ್ಚರಿಯ ಪ್ರಸಂಗವೇ ಸರಿ. ಕೆಲವು ದಿನಗಳ ಹಿಂದೆ ಮಲಯಾಳಂ ನಟ ಶೈನ್ ಟಾಮ್ ಚಾಕೋ (Shine Tom Chacko) ಮೇಲೆ ಸಾಕಷ್ಟು ಆರೋಪಗಳು ಎದುರಾಗಿದ್ದವು. ಡ್ರಗ್ಸ್ (Drugs) ಸೇವನೆ ಮಾಡುತ್ತಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂದಿತ್ತು. ಆದರೆ ಈಗ ಅದೇ ಶೈನ್ ಟಾಮ್ ಚಾಕೋ ಅವರು ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ! ಅಂದಹಾಗೆ, ಈ ಸಿನಿಮಾಗೆ ಬೆಂಗಳೂರಿನ ನಂಟು ಕೂಡ ಇದೆ. ಇತ್ತೀಚೆಗಷ್ಟೇ ಈ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ‘ಬೆಂಗಳೂರು ಹೈ’ (Bangalore High) ಎಂದು ಹೆಸರು ಇಡಲಾಗಿದೆ.
ಜುಲೈ 21ರಂದು ಬೆಂಗಳೂರಿನಲ್ಲೇ ‘ಬೆಂಗಳೂರು ಹೈ’ ಸಿನಿಮಾ ಲಾಂಚ್ ಮಾಡಲಾಗಿದೆ. ಕಾನ್ಫಿಡೆಂಟ್ ಗ್ರೂಪ್ನ ಡಾ. ರಾಯ್ ಸಿಜೆ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿ.ಕೆ. ಪ್ರಕಾಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರತಂಡದಿಂದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ವಾಸನೆ ಜೋರಾಗಿ ಹರಡಿತ್ತು. ಶೈನ್ ಟಾಮ್ ಚಾಕೋ ಅವರು ಉಳಿದುಕೊಂಡಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆಗ ಶೈನ್ ಟಾಮ್ ಚಾಕೋ ಅವರು ತಪ್ಪಿಸಿಕೊಂಡು ಹೋಗಿದ್ದರು. ಬಳಿಕ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಕೆಲವು ನಟಿಯರು ಕೂಡ ಈ ನಟನ ವಿರುದ್ಧ ಆರೋಪ ಮಾಡಿದ್ದರು.
ಕೊಚ್ಚಿ ನಗರ ಪೊಲೀಸರು ಶೈನ್ ಟಾಮ್ ಚಾಕೋ ಅವರನ್ನು ವಶಕ್ಕೆ ಪಡೆದಿದ್ದರು. ಮಾದಕ ವಸ್ತು ಬಳಕೆ ಮತ್ತು ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕೇಸ್ನಲ್ಲಿ ಅವರನ್ನು ಬಂಧಿಸಲಾಗಿತ್ತು. ಹೋಟೆಲ್ನಿಂದ ಪರಾರಿಯಾಗಿದ್ದರ ಕುರಿತು ಪೊಲೀಸರು ದೀರ್ಘವಾಗಿ ವಿಚಾರಣೆ ನಡೆಸಿದ್ದರು. ಶೈನ್ ಟಾಮ್ ಚಾಕೋ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಮಾದಕ ವಸ್ತು ಪತ್ತೆ ಆಗಿಲ್ಲ ಎಂಬ ಕಾರಣದಿಂದ ಅವರನ್ನು ವಿಚಾರಣೆ ಬಳಿಕ ಬಿಟ್ಟು ಕಳಿಸಲಾಯಿತು.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನಟ ಶೈನ್ ಟಾಮ್ ಚಾಕೊಗೆ ಗಂಭೀರ ಗಾಯ; ಸ್ಥಳದಲ್ಲೇ ತಂದೆ ನಿಧನ
ಇಷ್ಟೆಲ್ಲ ವಿವಾದ ಮಾಡಿಕೊಂಡ ಶೈನ್ ಟಾಮ್ ಚಾಕೋ ಅವರು ಈಗ ಡ್ರಗ್ಸ್ ವಿರೋಧಿ ಸಂದೇಶ ಇರುವ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ನಲ್ಲಿ ‘ಸೇ ನೋ ಟು ಡ್ರಗ್ಸ್’ ಎಂದು ಅವರು ಸಂದೇಶ ನೀಡಿದ್ದಾರೆ. ಶೈನ್ ಟಾಮ್ ಚಾಕೋ ಅವರಿಗೆ ಪ್ರಾಯಶ್ಚಿತ್ತ ಆಗಿದ್ದು, ಆ ಕಾರಣದಿಂದಲೇ ಅವರು ‘ಬೆಂಗಳೂರು ಹೈ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.