
ಶಿವರಾಜ್ಕುಮಾರ್ ಅವರಿಗೆ ಆರೋಗ್ಯ ಕೈಕೊಟ್ಟ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಇತ್ತೀಚೆಗೆ ಅವರೇ ಈ ವಿಚಾರವನ್ನು ಖಚಿಪಡಿಸಿದ್ದರು. ತಮಗೆ ಅನಾರೋಗ್ಯ ಆಗಿದೆ ಎಂಬುದನ್ನು ಹೇಳಿದ್ದರು ಶಿವಣ್ಣ. ಆದರೆ, ಏನಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಈಗ ಶಿವರಾಜ್ಕುಮಾರ್ ಅವರು ಅಮೆರಿಕ ಹೋಗುವ ದಿನ ಹತ್ತಿರ ಬಂದೇ ಬಿಟ್ಟಿದೆ. ಅಲ್ಲಿ ಅವರು ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ. ಇದಕ್ಕೆ ದಿನಾಂಕ ಕೂಡ ನಿಗದಿ ಆಗಿದೆ.
ಅನಾರೋಗ್ಯ ಉಂಟಾಗಿದೆ ಎಂಬ ವಿಚಾರವನ್ನು ಶಿವರಾಜ್ಕುಮಾರ್ ಅವರೇ ಒಪ್ಪಿಕೊಂಡಿದ್ದರು. ‘ಭೈರತಿ ರಣಗಲ್’ ಸಿನಿಮಾದ ಪ್ರಚಾರದ ವೇಳೆ ಈ ವಿಚಾರವನ್ನು ಅವರು ಖಚಿತಪಡಿಸಿದ್ದರು. ‘ಎಲ್ಲರಂತೆ ನಾನೂ ಮನುಷ್ಯ. ನನಗೂ ತೊಂದರೆ ಆಗಿದೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಆರಂಭದಲ್ಲಿ ಭಯ ಆಯ್ತು. ಈಗ ಧೈರ್ಯ ತೆಗೆದುಕೊಂಡಿದ್ದೇನೆ. ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಬೇಕು’ ಎಂದು ಶಿವಣ್ಣ ಹೇಳಿದ್ದರು.
ಈಗ ಶಿವರಾಜ್ಕುಮಾರ್ ಅವರು ಅಮೆರಿಕಕ್ಕೆ ತೆರಳುವ ದಿನಾಂಕ ಹತ್ತಿರ ಆಗಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಶಿವರಾಜ್ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಡಿಸೆಂಬರ್ 18ಕ್ಕೆ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದೆ.
ಶಿವರಾಜ್ಕುಮಾರ್ ಅವರೇ ಹೇಳಿರುವ ಪ್ರಕಾರ ಶಸ್ತ್ರಚಿಕಿತ್ಸೆ ಬಳಿಕ ಕೆಲ ತಿಂಗಳು ವಿಶ್ರಾಂತಿ ಪಡೆಯಲಿದ್ದಾರಂತೆ. ಅವರು ತಮ್ಮ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ನಿರಂತರವಾಗಿ ಶೂಟಿಂಗ್ನಲ್ಲಿ ತೊಡಗಿಕೊಳ್ಳುತ್ತಾ ಬಂದಿದ್ದಾರೆ. ಅಪ್ಪು ನಿಧನ ಹೊಂದಿದಾಗಲೂ ಸಣ್ಣ ಗ್ಯಾಪ್ ಪಡೆದು ಅವರು ನಟನೆಗೆ ಮರಳಿದರು. ಆದರೆ, ಈ ಬಾರಿ ಆರೋಗ್ಯದ ವಿಚಾರ ಆಗಿರುವುದರಿಂದ ಅವರು ಕೊಂಚ ದೀರ್ಘ ಬ್ರೇಕ್ ಪಡೆಯಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ತಿರುಪತಿ ಸನ್ನಿಧಾನಕ್ಕೆ ತೆರಳಿ ಮುಡಿ ಕೊಟ್ಟ ಶಿವರಾಜ್ಕುಮಾರ್-ಗೀತಾ
ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಸಿನಿಮಾ ‘ಮಫ್ತಿ’ ಚಿತ್ರದ ಪ್ರೀಕ್ವೆಲ್. ಇದಲ್ಲದೆ, ಅವರ ನಟನೆಯ ‘45’ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಈ ಸಿನಿಮಾ ಕೂಡ ಶೀಘ್ರವೇ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಜೊತೆ ಉಪೇಂದ್ರ, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೇಶನ ಇದೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:58 pm, Tue, 10 December 24