AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀರಪ್ಪನ್​ ಕಪಿಮುಷ್ಠಿಯಿಂದ ಅಣ್ಣಾವ್ರನ್ನು ಬಿಡಿಸಿ ತಂದರು ಕೃಷ್ಣ, ಆದರೆ…

ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾಜ್​ಕುಮಾರ್ ಅಪಹರಣ ನಡೆದಿತ್ತು. ರಾಜ್ಯದ ಪಾಲಿಕೆ ಕರಾಳ ಘಟನೆಯಾಗಿದ್ದ ಅದನ್ನು ಸವಾಲಿನಿಂದ ನಿಭಾಯಿಸಿದ್ದರು ಎಸ್​ಎಂ ಕೃಷ್ಣ. ಆದರೆ ರಾಜ್​ಕುಮಾರ್ ಬಿಡುಗಡೆ ಆದ ಬಳಿಕ ನಡೆದ ಘಟನೆ ಅವರಿಗೆ ಸಣ್ಣ ಅಸಮಾಧಾನ ಮೂಡಿಸಿತ್ತು. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ.

ವೀರಪ್ಪನ್​ ಕಪಿಮುಷ್ಠಿಯಿಂದ ಅಣ್ಣಾವ್ರನ್ನು ಬಿಡಿಸಿ ತಂದರು ಕೃಷ್ಣ, ಆದರೆ...
ರಾಜ್​ಕುಮಾರ್-ಕೃಷ್ಣ
ಮಂಜುನಾಥ ಸಿ.
| Edited By: |

Updated on:Dec 10, 2024 | 12:08 PM

Share

ಕರ್ನಾಟಕ ಮಾಜಿ ಸಿಎಂ, ಮಾಜಿ ಮಹಾರಾಷ್ಟ್ರ ರಾಜ್ಯಪಾಲ ಎಸ್​ಎಂ ಕೃಷ್ಣ ಇಂದು (ಡಿಸೆಂಬರ್ 10) ನಿಧನ ಹೊಂದಿದ್ದಾರೆ. ಕರ್ನಾಟಕಕ್ಕೆ ಎಸ್​ಎಂ ಕೃಷ್ಣ ನೀಡಿದ ಕೊಡುಗೆ ಅಪಾರ. ಒಂದು ಅವಧಿಗೆ ಮಾತ್ರವೇ ಕೃಷ್ಣ ಸಿಎಂ ಆಗಿದ್ದರೂ ಸಹ ರಾಜ್ಯದ ಪ್ರಗತಿಗೆ ಅಪಾರ ಕೊಡುವೆಯನ್ನು ಅವರು ನೀಡಿದರು. ಬರ, ಕಾವೇರಿ ಸಮಸ್ಯೆಯ ಜೊತೆಗೆ ಅಣ್ಣಾವ್ರ ಅಪಹರಣದಂಥಹಾ ಕಠಿಣ ಸಮಸ್ಯೆಗಳು ಅವರ ಆಡಳಿತ ಅವಧಿಯಲ್ಲಿ ಬಂದರೂ ಸಹ ಅದನ್ನೆಲ್ಲ ನಿರ್ವಹಿಸಿ ರಾಜ್ಯದ ಪ್ರಗತಿಗೆ ಅಗತ್ಯವಾದ ಕಾರ್ಯಗಳನ್ನು ಕೃಷ್ಣ ಮಾಡಿದ್ದರು. ಕೃಷ್ಣ ಅವರ ಆಡಳಿತ ಅವಧಿಯಲ್ಲಿ ಅವರು ಎದುರಿಸಿ ಬಹುದೊಡ್ಡ ಸವಾಲೆಂದರೆ ಡಾ ರಾಜ್​ಕುಮಾರ್ ಅವರ ಅಪಹರಣ.

ರಾಜ್​ಕುಮಾರ್ ಅವರ ಅಪಹರಣ, ವಿಶ್ವದ ಗಮನ ಸೆಳೆದಿತ್ತು. ರಾಜ್ಯದಲ್ಲಿ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಗಲಭೆ, ಗಲಾಟೆಗಳು ಶುರುವಾಗಿದ್ದವು. ಆದರೂ ಎಲ್ಲ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ, ಸಂಧಾನಕಾರರನ್ನು ಬಳಸಿ ವೀರಪ್ಪನ್ ಜೊತೆಗೆ ಹಲವು ಸುತ್ತುಗಳ ಮಾತುಕತೆ ಆಡಿ 108 ದಿನಗಳ ಬಳಿಕ ರಾಜ್​ ಕುಮಾರ್ ಅವರನ್ನು ವೀರಪ್ಪನ್ ಕಪಿಮುಷ್ಠಿಯಿಂದ ಬಿಡಿಸಿ ತಂದರು ಕೃಷ್ಣ. ಆದರೆ ಅದಾದ ಬಳಿಕ ಅವರಲ್ಲಿ ಸಣ್ಣ ಅಸಮಾಧಾನವೊಂದು ಉಳಿದುಕೊಂಡಿತು.

ರಾಜ್​ಕುಮಾರ್ ಅವರು ಬಿಡುಗಡೆ ಆದ ದಿನ ವಿಧಾನಸೌದದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಗೋಷ್ಠಿಯಲ್ಲಿ ಸಿಎಂ ಸಹ ಭಾಗಿಯಾಗಿದ್ದರು. ಗಂಟೆಗಟ್ಟಲೆ ಗೋಷ್ಠಿ ನಡೆಯಿತು, ರಾಜ್​ಕುಮಾರ್ ಅವರು ತಮ್ಮ ಕಾಡಿನ ದಿನಗಳ ಬಗ್ಗೆ ಮಾತನಾಡಿದರು. ವಿದೇಶಿ ಪತ್ರಕರ್ತರೂ ಸಹ ನೆರೆದಿದ್ದ ಆ ಪತ್ರಿಕಾಗೋಷ್ಠಿಯಲ್ಲಿ ರಾಜ್​ಕುಮಾರ್ ಅವರಿಗೆ ಹಲವಾರು ಪ್ರಶ್ನೆಗಳು ಎದುರಾದವು. ಆದರೆ ಯಾವುದೇ ಭಾವೋದ್ವೇಗ ಇಲ್ಲದೆ ಸಹಜವಾಗಿ ಅವರು ಮಾತನಾಡಿದರು. ಆದರೆ ತಮ್ಮನ್ನು ಬಿಡಿಸಿಕೊಂಡು ಬರುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಸಿಎಂ ಎಸ್​ಎಂ ಕೃಷ್ಣ ಅವರಿಗೆ ಧನ್ಯವಾದ ಹೇಳಲು ಮರೆತರು. ಇದು ಕೃಷ್ಣ ಅವರ ಬೆಂಬಲಿಗರಿಗೆ ಸಣ್ಣ ಬೇಸರ ಉಂಟುಮಾಡಿತು. ಕೆಲವು ಮಾಧ್ಯಮಗಳೂ ಸಹ ಇದನ್ನು ಗುರುತಿಸಿ ವರದಿ ಮಾಡಿದ್ದವು.

ಇದನ್ನೂ ಓದಿ:ರಾಜ್​ಕುಮಾರ್-ಎಸ್​ಎಂ ಕೃಷ್ಣ ಮಧ್ಯೆ ಆಗಿತ್ತು ಒಪ್ಪಂದ; ಅದನ್ನು ಮೀರಿದಾಗ ನಡೆದಿತ್ತು ಅಪಹರಣ

ಅದಾದ ಎರಡು ವಾರದ ಬಳಿಕ ರಾಜ್​ಕುಮಾರ್ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಯ್ತು. ಅಲ್ಲಿಯೂ ಸಹ ಕಿಕ್ಕಿರಿದು ಪತ್ರಕರ್ತರು ತುಂಬಿದ್ದರು. ಆದರೆ ಆ ಪತ್ರಿಕಾಗೋಷ್ಠಿಯಲ್ಲಿಯೂ ಸಹ ಕೃಷ್ಣ ಅವರಿಗೆ ಧನ್ಯವಾದ ಹೇಳುವುದನ್ನು ರಾಜ್​ಕುಮಾರ್ ಮರೆತರು ಎಂದು ಆಗ ವಾರ್ತಾ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ಗುರುಪ್ರಸಾದ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ರಾಜ್​ಕುಮಾರ್ ಅವರು ಮರೆತರಾದರೂ ಅವರ ಕುಟುಂಬದವರು ಆ ಬಳಿಕ ಕೃಷ್ಣ ಅವರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸಿದರು. ಖಾಸಗಿಯಾಗಿ ಭೇಟಿಯಾಗಿ ಧನ್ಯವಾದ ಹೇಳಿದರು. ಚಿತ್ರರಂಗದ ಕೆಲವು ಗಣ್ಯರು ಸಹ ಎಸ್​ಎಂ ಕೃಷ್ಣ ಅವರಿಗೆ ಧನ್ಯವಾದ ಹೇಳಿದರು. ಚಿತ್ರರಂಗ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕೃಷ್ಣ ಅವರನ್ನು ಸನ್ಮಾನಿಸಲು ಯೋಜಿಸಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Tue, 10 December 24