ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ 125ನೇ ಚಿತ್ರ ವೇದಾ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಶಿವರಾಜ್ ಕುಮಾರ್ ಸ್ಯಾಂಡಲ್ವುಡ್ಗೆ ನಿರ್ಮಾಪಕರಾಗಿ ಅಡಿಯಿಡುತ್ತಿದ್ದಾರೆ. ವೇದಾ ಚಿತ್ರವನ್ನು ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಭಜರಂಗಿ ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಇದು ಶಿವಣ್ಣ-ಹರ್ಷ ಜೋಡಿಯ 4ನೇ ಚಿತ್ರ ಎಂಬುದು ಮತ್ತೊಂದು ವಿಶೇಷ. ಈ ಹಿಂದೆ ಶಿವಣ್ಣ ಅಭಿನಯದ ಭಜರಂಗಿ, ವಜ್ರಕಾಯ ಮತ್ತು ಭಜರಂಗಿ 2 ಚಿತ್ರಗಳನ್ನು ಹರ್ಷ ಅವರು ನಿರ್ದೇಶಿಸಿದ್ದರು. ಇದೀಗ ನಾಲ್ಕನೇ ಬಾರಿ ಶಿವಣ್ಣನಿಗಾಗಿ ವಿಶೇಷ ಕಥೆಯೊಂದನ್ನು ಹರ್ಷ ಸಿದ್ದಪಡಿಸಿದ್ದು, ಇದೇ ಕಥೆಯ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಹೊಸ ಹೆಜ್ಜೆಯಿಡಲು ಮುಂದಾಗಿದ್ದಾರೆ.
ಇನ್ನು ವೇದಾ ಚಿತ್ರವು 1960ರ ದಶಕದಲ್ಲಿ ನಡೆಯುವ ಕಥೆಹಂದರ ಹೊಂದಿದೆ. ಮೋಷನ್ ಪೋಸ್ಟರ್ ಅನ್ನು ಕಿಚ್ಚಿನ ನಡುವೆ ರೂಪಿಸಲಾಗಿದ್ದು, ಇದಾಗ್ಯೂ ಚಿತ್ರಕಥೆ ಹೇಗೆ ಸಾಗಲಿದೆ ಎಂಬುದರ ಬಗ್ಗೆ ನಿರ್ದೇಶಕರು ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಈ ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಾಯಕಿಯಾಗಿ ಮಗಳು ಜಾನಕಿ ನಟಿ ಗಾನವಿ ಬಣ್ಣ ಹಚ್ಚಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಅಣ್ಣಾವ್ರ ಕುಟುಂಬ ಜೊತೆಯಾಗಿ ಕಾಣಿಸಿಕೊಂಡಿದ್ದು ವಿಶೇಷ. ಅದರಲ್ಲೂ ಡಾ ರಾಜ್ ಕುಮಾರ್ ಮೊಮ್ಮಕ್ಕಳು ಶಿವಣ್ಣ ಅವರೊಂದಿಗೆ ಸ್ಟೇಜ್ನಲ್ಲಿ ಜೊತೆಯಾಗಿದ್ದರು. ಎಲ್ಲರೂ ಇದ್ದರೂ ಅಲ್ಲಿ ಅಭಿಮಾನಿಗಳ ದೇವರು ಅಪ್ಪು ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದರು ಎಂಬುದು ಕೂಡ ಅಷ್ಟೇ ಸತ್ಯ.
ಚಿತ್ರಕ್ಕೆ ಡೋಂಟ್ ಫಿಯರ್, ಡೋಂಟ್ ಫರ್ಗಿವ್ ಎನ್ನುವ ಟ್ಯಾಗ್ ಲೈನ್ ನೀಡಲಾಗಿದ್ದು, ಅಂದರೆ ಹೆದರಬೇಡ.. ಕ್ಷಮಿಸಬೇಡ..ಎಂದರ್ಥ. ಇಲ್ಲಿ ಶಿವಣ್ಣ ಯಾರನ್ನು ಕ್ಷಮಿಸಲ್ಲ, ಯಾರಿಗೆ ಹೆದರಲ್ಲ ಎಂಬುದು ಸಸ್ಪೆನ್ಸ್.
ಅಂದಹಾಗೆ ಇಂದು ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು, ಹೀಗಾಗಿ ಇದೇ ದಿನದಂದು ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್ ನಾಗ್, ಅರುಣ್ ಸಾಗರ್, ದುನಿಯಾ ವಿಜಯ್, ನಿರ್ಮಾಪಕರಾದ ಕೆಪಿ ಶ್ರೀಕಾಂತ್, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖ ಗಣ್ಯರು ಕಾಣಿಸಿಕೊಂಡಿದ್ದರು. ಅಲ್ಲದೆ ಇದೇ ವೇಳೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ವೇದಾ ಚಿತ್ರದ ಟೈಟಲ್ ಲಾಂಚ್‌ನಲ್ಲಿ ನಟ ಅನಂತ್ ನಾಗ್ ಅವರ ಹೇಳಿದ್ದೇನು? ಇಲ್ಲಿದೆ ವೀಡಿಯೋ
ಕಾರ್ಯಕ್ರಮದಲ್ಲಿ ಶಿವಣ್ಣ ಹೇಳಿದ್ದೇನು?
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 pm, Wed, 22 June 22