ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದ ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಗುರುವಾರ (ಏ.22) ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಅಂಟಿದ ನಂತರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೂ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಿಲ್ಲ. ಕೊರೊನಾ ಬರುವುದಕ್ಕೂ ಮೊದಲು ಅವರು ಕುಂಭಮೇಳಕ್ಕೆ ತೆರಳಿದ್ದರು ಎನ್ನುವ ವಿಚಾರ ಈಗ ಗೊತ್ತಾಗಿದೆ.
ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಕುಂಭಮೇಳ ಆರಂಭವಾಗಿತ್ತು. ಲಕ್ಷಾಂತರ ಜನರು ಇದರಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡಿದ್ದರು. ಕೊರೊನಾ ಹರಡುತ್ತಿರುವ ಮಧ್ಯೆಯೂ ಲಕ್ಷಾಂತರ ಜನ ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಕುಂಭಮೇಳವನ್ನು ಸಾಂಕೇತಿಕವಾಗಿ ಮಾಡುವಂತೆ ಕೋರಿದ್ದರು. ಈ ಮನವಿಗೆ ಬೆಲೆಕೊಟ್ಟು ಕುಂಭಮೇಳವನ್ನು ಸಾಂಕೇತಿಕವಾಗಿ ನೆರವೇರಿಸಲು ನಿರ್ಧರಿಸಲಾಯಿತು.
ಕುಂಭಮೇಳಕ್ಕೆ ಹೋಗಿದ್ದ ಅನೇಕರಿಗೆ ಕೊರೊನಾ ವೈರಸ್ ತಗುಲಿತ್ತು. ಶ್ರವಣ್ ರಾಥೋಡ್ ಹಾಗೂ ಅವರ ಪತ್ನಿ ಕೂಡ ಕುಂಭಮೇಳಕ್ಕೆ ತೆರಳಿದ್ದರಂತೆ. ಕುಂಭಮೇಳ ಮುಗಿಸಿ ಬಂದ ಬೆನ್ನಲ್ಲೇ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೊರೊನಾ ಲಕ್ಷಣ ಇದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ ಅವರಿಗೆ ಕೊರೊನಾ ಇರುವ ವಿಚಾರ ಅಧಿಕೃತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಸಂಗೀತ ನಿರ್ದೇಶಕ ನದೀಮ್ ಸೈಫಿ ಜೊತೆ ಸೇರಿ ಶ್ರವಣ್ ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದರು. ಈ ಜೋಡಿ ನದೀಮ್-ಶ್ರವಣ್ ಎಂದೇ ಫೇಮಸ್ ಆಗಿತ್ತು. 1975ರಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರಿಗೆ 1990ರ ದಶಕದಲ್ಲಿ ಹೆಚ್ಚು ಯಶಸ್ಸು ಸಿಕ್ಕಿತು. ಆಶಿಕಿ, ಸಾಜನ್, ಹಮ್ ಹೈ ರಾಹಿ ಪ್ಯಾರ್ ಕಿ, ಪರ್ದೇಸ್, ರಾಜಾ ಹಿಂದೂಸ್ತಾನಿ ಸಿನಿಮಾಗಳ ಮೂಲಕ ನದೀಮ್ ಶ್ರವಣ್ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಇದನ್ನೂ ಓದಿ: Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾ ವೈರಸ್ನಿಂದ ನಿಧನ; ಚಿತ್ರರಂಗಕ್ಕೆ ಆಘಾತ