Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾ ವೈರಸ್ನಿಂದ ನಿಧನ; ಚಿತ್ರರಂಗಕ್ಕೆ ಆಘಾತ
Shravan Rathod Death: ಆಸ್ಪತ್ರೆಗೆ ದಾಖಲಿಸುವಾಗಲೇ ಶ್ರವಣ್ ರಾಥೋಡ್ ಅವರ ಆರೋಗ್ಯದ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ (ಏ.22) ರಾತ್ರಿ ಇಹಲೋಕ ತ್ಯಜಿಸಿದರು.
ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಅವರು ಕೊರೊನಾ ವೈರಸ್ನಿಂದಾಗಿ ಗುರುವಾರ (ಏ.22) ನಿಧನರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 10.15ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಶ್ರವಣ್ ರಾಥೋಡ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಕೇಳಿ ಬಾಲಿವುಡ್ಗೆ ತೀವ್ರ ನೋವಾಗಿದೆ.
ಕೆಲವೇ ದಿನಗಳ ಹಿಂದೆ ಶ್ರವಣ್ ರಾಥೋಡ್ ಅವರಿಗೆ ಕೊವಿಡ್ 19 ಸೋಂಕು ತಗುಲಿತ್ತು. ಸೋಮವಾರ (ಏ.20) ಅವರನ್ನು ಮುಂಬೈನ ಎಸ್.ಎಲ್. ರಹೇಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಅವರ ಆರೋಗ್ಯದ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.
‘ಶ್ರವಣ್ ಅವರು ನಿಧನರಾದರು ಎಂಬ ಸುದ್ದಿ ಕೇಳಿ ಶಾಕ್ ಆಗಿದೆ. ತುಂಬ ವಿನಯವಂತ ವ್ಯಕ್ತಿ ಆಗಿದ್ದರು. ನಮ್ಮ ಚಿತ್ರರಂಗದ ಮಹಾನ್ ಸಂಗೀತ ನಿರ್ದೇಶಕ. ಈ ಪ್ಯಾಂಡಮಿಕ್ನಿಂದಾದ ಇನ್ನೊಂದು ದೊಡ್ಡ ನಷ್ಟ ಇದು. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಶ್ರವಣ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಟ್ವೀಟ್ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
‘ಶ್ರವಣ್ ನಿಧನದಿಂದ ತೀವ್ರ ನೋವಾಗಿದೆ. ಈ ದುಸ್ವಪ್ನ ಯಾವಾಗ ಕೊನೆ ಆಗಲಿದೆ. ಶ್ರವಣ್ ಕುಟುಂಬದವರಿಗೆ ನನ್ನ ಸಂಪಾತಗಳು’ ಎಂದು ಸಂಗೀತ ನಿರ್ದೇಶಕ ಪ್ರೀತಮ್ ಕಂಬನಿ ಮಿಡಿದಿದ್ದಾರೆ. ಗಾಯಕ ಅದ್ನಾನ್ ಸಾಮಿ ಸೇರಿದಂತೆ ಅನೇಕರು ಶ್ರವಣ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸಂಗೀತ ನಿರ್ದೇಶಕ ನದೀಮ್ ಸೈಫಿ ಜೊತೆ ಸೇರಿ ಶ್ರವಣ್ ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದರು. ಈ ಜೋಡಿ ನದೀಮ್-ಶ್ರವಣ್ ಎಂದೇ ಫೇಮಸ್ ಆಗಿತ್ತು. 1975ರಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರಿಗೆ 1990ರ ದಶಕದಲ್ಲಿ ಹೆಚ್ಚು ಯಶಸ್ಸು ಸಿಕ್ಕಿತು. ಆಶಿಕಿ, ಸಾಜನ್, ಹಮ್ ಹೈ ರಾಹಿ ಪ್ಯಾರ್ ಕಿ, ಪರ್ದೇಸ್, ರಾಜಾ ಹಿಂದೂಸ್ತಾನಿ ಸಿನಿಮಾಗಳ ಮೂಲಕ ನದೀಮ್ ಶ್ರವಣ್ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಕೊರೊನಾ ವೈರಸ್ಗೆ ಬಲಿಯಾದ ಹಿರಿಯ ನಟ ಕಿಶೋರ್ ನಂದಲಸ್ಕರ್
ಸ್ಯಾಂಡಲ್ವುಡ್ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ
(Music Director Shravan Rathod of Nadeem Shravan fame dies due to Covid 19)
Published On - 8:12 am, Fri, 23 April 21