ಕೊರೊನಾ ವೈರಸ್​ಗೆ ಬಲಿಯಾದ ಹಿರಿಯ ನಟ ಕಿಶೋರ್ ನಂದಲಸ್ಕರ್

Actor Kishore Nandlaskar Death: ಜೀವನದಲ್ಲಿ ಕಿಶೋರ್​ ತುಂಬಾ ನೊಂದಿದ್ದರು. ಅವರಿಗೆ ಸಂಸಾರದ ತೊಂದರೆಗಳು ಬಹಳಷ್ಟು ಇದ್ದವು. ಕುಟುಂಬ ಸದಸ್ಯರ ಜೊತೆ ಅವರು ವಾಸಿಸುತ್ತ ಇರಲಿಲ್ಲ.

ಕೊರೊನಾ ವೈರಸ್​ಗೆ ಬಲಿಯಾದ ಹಿರಿಯ ನಟ ಕಿಶೋರ್ ನಂದಲಸ್ಕರ್
ಕಿಶೋರ್ ನಂದಲಸ್ಕರ್

ದೇಶದೆಲ್ಲೆಡೆ ಕೊರೊನಾ ವೈರಸ್​ ರಣಕೇಕೆ ಮುಂದುವರಿದಿದೆ. ಪ್ರಮುಖ ನಗರಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಎಲ್ಲಾ ವಯಸ್ಸಿನವರೂ ಈ ಮಹಾಮಾರಿಗೆ ಟಾರ್ಗೆಟ್​ ಆಗುತ್ತಿದ್ದಾರೆ. ಕೊರೊನಾ ಎರಡನೇ ಅಲೆಗೆ ಅನೇಕ ಸೆಲೆಬ್ರಿಟಿಗಳು ಕೂಡ ನಿಧನರಾಗುತ್ತಿದ್ದಾರೆ. ಹಿರಿಯ ನಟ ಕಿಶೋರ್​ ನಂದಲಸ್ಕರ್​ ಅವರು ಮಂಗಳವಾರ (ಏ.20) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕಿಶೋರ್​ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

ಹಿಂದಿ ಮತ್ತು ಮರಾಠಿ ಸಿನಿಮಾಗಳ ಮೂಲಕ ಕಿಶೋರ್​ ನಂದಲಸ್ಕರ್​ ಫೇಮಸ್​ ಆಗಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಿಶೋರ್​ ನಿಧನರಾದ ಸುದ್ದಿಯನ್ನು ಅವರು ಮೊಮ್ಮಗ ಖಚಿತಪಡಿಸಿದ್ದಾರೆ. ಕಳೆದ ಬುಧವಾರ ಅವರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಏ.20ರಂದು ಮಧ್ಯಾಹ್ನ 12.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.

1989ರಲ್ಲಿ ಕಿಶೋರ್​ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟರು. ಅಂದಿನಿಂದಲೂ ಅವರು ಬೇಡಿಕೆಯ ಪೋಷಕನಟನಾಗಿದ್ದರು. ಖಾಕಿ, ವಾಸ್ತವ್​: ದ ರಿಯಾಲಿಟಿ, ಸಿಂಘಂ, ಜಿಸ್​ ದೇಶ್​ ಮೈ ಗಂಗಾ ರೆಹ್ತಾ ಹೈ, ಸಿಂಬಾ ಮುಂತಾದ ಹಿಂದಿ ಸಿನಿಮಾಗಳಲ್ಲಿ ಕಿಶೋರ್​ ನಟಿಸಿದ್ದರು. ಹಲವು ಮರಾಠಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.

ಜೀವನದಲ್ಲಿ ಕಿಶೋರ್​ ತುಂಬ ನೊಂದಿದ್ದರು. ಅವರಿಗೆ ಸಂಸಾರದ ತೊಂದರೆಗಳು ಬಹಳಷ್ಟು ಇದ್ದವು. ಕುಟುಂಬ ಸದಸ್ಯರ ಜೊತೆ ಅವರು ವಾಸಿಸುತ್ತ ಇರಲಿಲ್ಲ. ಹೆಚ್ಚಾಗಿ ಒಬ್ಬರೇ ಕಾಲ ಕಳೆಯುತ್ತಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡುವ ಸ್ವಭಾವ ಅವರದ್ದಾಗಿರಲಿಲ್ಲ. ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೂ ಅವರು ಬೇರೆ ಕಲಾವಿದರ ಜೊತೆ ಹೆಚ್ಚು ಬರೆಯುತ್ತಿರಲಿಲ್ಲ ಎಂದು ನಟಿ ಉಶಾ ನಂದಕರಣಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಹಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಯಾರೂ ತಮ್ಮನ್ನು ಗುರುತಿಸುತ್ತಿಲ್ಲ ಎಂದು ಕಿಶೋರ್​ ಬೇಸರ ಮಾಡಿಕೊಂಡಿದ್ದರು. ಜನಪ್ರಿಯತೆ ಇದ್ದಾಗ ಮಾತ್ರ ಎಲ್ಲರೂ ಮಾತನಾಡಿಸುತ್ತಾರೆ. ಒಮ್ಮೆ ತೆರೆಮರೆಗೆ ಸರಿದರೆ ಯಾರೂ ನಮ್ಮ ಬಗ್ಗೆ ಕಾಳಜಿ ತೋರಿಸುವುದಿಲ್ಲ ಎಂದು ನನ್ನ ಬಳಿ ಅವರು ಅಳಲು ತೋಡಿಕೊಂಡಿದ್ದರು’ ಎಂದು ಉಶಾ ಹೇಳಿದ್ದಾರೆ. ಉಶಾ ಮತ್ತು ಕಿಶೋರ್​ ಅವರು ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

Click on your DTH Provider to Add TV9 Kannada