ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್​ ನಗರ್​

|

Updated on: Apr 30, 2021 | 10:46 AM

ನನ್ನ ಮಗನಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಿದೆ. ಆದರೆ ನಾನು ಇಂದು ಇಂತಹ ಪರಿಸ್ಥಿತಿಯಲ್ಲಿ ಇದ್ದೇನೆ. ಒಡಹುಟ್ಟಿದವರು ಕೂಡ ಇದ್ದಾರೆ. ಆದರೆ ಯಾರೂ ಕೂಡ ಕಾಳಜಿ ತೋರಿಸುವುದಿಲ್ಲ ಎಂದು ನಟ ಸುನಿಲ್​ ನಗರ್​ ಹೇಳಿದ್ದಾರೆ.

ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್​ ನಗರ್​
ಶ್ರೀಕೃಷ್ಣ ಧಾರಾವಾಹಿ ನಟ ಸುನಿಲ್ ನಗರ್
Follow us on

ಲಾಕ್​ಡೌನ್​ ಸಮಯದಲ್ಲಿ ಅನೇಕರ ಬದುಕು ಬೀದಿಗೆ ಬರುವುದು ಖಚಿತ. ಕಳೆದ ವರ್ಷ ಲಾಕ್​ಡೌನ್​ ಆದಾಗ ಆರ್ಥಿಕ ಸಂಕಷ್ಟಕ್ಕೆ ಜನ ತತ್ತರಿಸಿದ್ದರು. ಅನೇಕ ಕಲಾವಿದರು ಕೂಡ ದಿನನಿತ್ಯದ ಖರ್ಚು ಭರಿಸಲಾಗದೇ ಕಣ್ಣೀರು ಹಾಕಿದ್ದರು. ಈ ವರ್ಷ ಕೂಡ ಅದು ಮುಂದುವರಿಯುತ್ತಿದೆ. ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಫೇಮಸ್​ ಆಗಿರುವ ನಟ ಸುನಿಲ್​ ನಗರ್​ ಅವರು ಈಗ ಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಬಾಡಿಗೆ ಕಟ್ಟಲು ಕೂಡ ಹಣವಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ರಮಾನಂದ್​ ಸಾಗರ್​ ನಿರ್ದೇಶನದ ‘ಶ್ರೀ ಕೃಷ್ಣ’ ಧಾರಾವಾಹಿಯಲ್ಲಿ ಭೀಷ್ಮ ಪಿತಾಮಹಾನ ಪಾತ್ರ ಮಾಡುವ ಮೂಲಕ ಸುನಿಲ್​ ನಗರ್​ ಹೆಚ್ಚು ಫೇಮಸ್​ ಆಗಿದ್ದರು. ಫಿಯರ್​ ಫೈಲ್ಸ್​, ಅದಾಲತ್​, ಸಿಯಾ ಕಾ ರಾಮ್​ ಮುಂತಾದ ಧಾರಾವಾಹಿಯಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅನೇಕ ಹಿಂದಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ಈಗ ಲಾಕ್​ಡೌನ್​ನಿಂದ ಸಂಕಷ್ಟ ಎದುರಾಗಿದೆ. ಕುಟುಂಬದ ಸದಸ್ಯರು ಕೂಡ ಅವರನ್ನು ನೋಡಿಕೊಳ್ಳುತ್ತಿಲ್ಲ.

ಲಾಕ್​ಡೌನ್​ನಿಂದ ಉಂಟಾಗಿರುವ ಈ ಕಷ್ಟದ ಪರಿಸ್ಥಿತಿಯ ಬಗ್ಗೆ ಸುನಿಲ್​ ನಗರ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕುಟುಂಬದವರು ನನ್ನ ಕೈ ಬಿಟ್ಟಿದ್ದಾರೆ. ನನ್ನ ಮಗನಿಗೆ ಒಳ್ಳೆಯ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಕೊಡಿಸಿದೆ. ಆದರೆ ನಾನು ಇಂದು ಇಂಥ ಪರಿಸ್ಥಿತಿಯಲ್ಲಿ ಇದ್ದೇನೆ. ಒಡಹುಟ್ಟಿದವರು ಕೂಡ ಇದ್ದಾರೆ. ಆದರೆ ಅವರು ಯಾರೂ ಕಾಳಜಿ ತೋರಿಸುವುದಿಲ್ಲ. ಪುಣ್ಯ ಎಂದರೆ ನನಗೆ ಸದ್ಯಕ್ಕೆ ಕೊವಿಡ್​ ಸೋಂಕು ತಗುಲಿಲ್ಲ. ಆದರೆ ಬೇರೆ ಆರೋಗ್ಯ ಸಮಸ್ಯೆಗಳಿವೆ’ ಎಂದು ಸುನಿಲ್​ ನಗರ್​ ಹೇಳಿದ್ದಾರೆ.

ನಟನೆ ಮಾತ್ರವಲ್ಲದೆ ಸುನಿಲ್​ ಹಾಡುಗಾರಿಕೆಯನ್ನೂ ಬಲ್ಲರು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅದನ್ನೇ ಅವರು ಜೀವನಕ್ಕೆ ಆಧಾರವಾಗಿ ಮಾಡಿಕೊಂಡಿದ್ದರು. ಒಂದು ರೆಸ್ಟೊರೆಂಟ್​ನಲ್ಲಿ ಹಾಡುವ ಮೂಲಕ ಹಣ ಗಳಿಸುತ್ತಿದ್ದರು. ‘ಆ ರೆಸ್ಟೊರೆಂಟ್​ನವರೇ ನನ್ನ ದಿನದ ಖರ್ಚು ನೋಡಿಕೊಳ್ಳುತ್ತಿದ್ದರು. ಆದರೆ ಲಾಕ್​ಡೌನ್​ ಘೋಷಣೆ ಆದ ಬಳಿಕ ರೆಸ್ಟೊರೆಂಟ್​ ಮುಚ್ಚಲಾಯಿತು. ಈಗ ನನಗೆ ಮನೆ ಬಾಡಿಗೆ ಕಟ್ಟಲು ಕೂಡ ಹಣವಿಲ್ಲ’ ಎಂದು ಸುನಿಲ್​ ನಗರ್​ ನೋವು ತೋಡಿಕೊಂಡಿದ್ದಾರೆ.

ಈ ಪರಿಸ್ಥಿತಿಯಲ್ಲಿ ಅವರು ಸಹಾಯಕ್ಕಾಗಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಒಕ್ಕೂಟಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅದರಿಂದಲೂ ಅವರಿಗೆ ಯಾವುದೇ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

Ramu Death: ನಿಧನಕ್ಕೂ ಮುನ್ನ ಫೋನ್​ನಲ್ಲಿ ಕೊವಿಡ್​ ಕಷ್ಟ ವಿವರಿಸಿದ್ದ ಕೋಟಿ ರಾಮು