‘ಬಿಗ್ ಬಾಸ್ ಕನ್ನಡ ಸೀಸನ್ 8’ ಅರ್ಧಕ್ಕೆ ನಿಂತಿದ್ದರಿಂದ ಕಿರುತೆರೆ ವೀಕ್ಷಕರಿಗೆ ಬೇಜಾರಾಯಿತು. ಕೊವಿಡ್-19 ಮಿತಿ ಮೀರಿ ಹರಡುತ್ತಿರುವುದರಿಂದ ಗಡಿಬಿಡಿಯಲ್ಲಿ ಶೋ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಯಿತು. ಮನೆಯಿಂದ ಹೊರಬಂದ ಸ್ಪರ್ಧಿಗಳಿಗೆ ಕೊನೇ ಕ್ಷಣದಲ್ಲಿ ಸುದೀಪ್ ಜೊತೆ ಮಾತನಾಡಲು ಕೂಡ ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರೆಲ್ಲರಿಗೂ ಮತ್ತೆ ಕಿಚ್ಚಿನ ಜೊತೆ ಮಾತನಾಡಲು ಕಲರ್ಸ್ ಕನ್ನಡ ವಾಹಿನಿ ಒಂದು ಅವಕಾಶ ಮಾಡಿಕೊಟ್ಟಿದೆ. ವರ್ಚುವಲ್ ಮೀಟ್ ಮೂಲಕ ಸುದೀಪ್ ಜೊತೆ ಬಿಗ್ ಬಾಸ್ ಸ್ಪರ್ಧಿಗಳು ಮಾತನಾಡಿದ್ದಾರೆ. ಈ ವೇಳೆ ನಟಿ ಶುಭಾ ಪೂಂಜಾ ಕೆಲವು ವಿಚಾರಗಳನ್ನು ಹಂಚಿಕೊಂಡರು.
ಬಿಗ್ ಬಾಸ್ನಲ್ಲಿ ಭಾಗವಹಿಸಿದ್ದಕ್ಕಾಗಿ ಶುಭಾ ಪೂಂಜಾ ಬದುಕಿನಲ್ಲಿ ಅನೇಕ ಬದಲಾವಣೆಗಳಾಗಿವೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ‘ಇದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡು ಬೆಸ್ಟ್ ನಿರ್ಧಾರವಾಗಿತ್ತು. ಬಿಗ್ ಬಾಸ್ನಲ್ಲಿ ಭಾಗವಹಿಸಿ ಬಂದ ಬಳಿಕ ನನ್ನ ಇಮೇಜ್ ಬದಲಾಗಿದೆ. ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ನನ್ನ ಹುಡುಗ (ಫಿಯಾನ್ಸೆ ಸುಮಂತ್) ಹೇಳಿದ. ಜನರು ನನ್ನನ್ನು ಮತ್ತೆ ಇಷ್ಟಪಡಲು ಆರಂಭಿಸಿದ್ದಾರೆ’ ಎಂದು ಶುಭಾ ಪೂಂಜಾ ಮಾತು ಆರಂಭಿಸಿದರು.
‘ಮೊಗ್ಗಿನ ಮನಸು ಸಿನಿಮಾ ಆದ ಬಳಿಕ ನನಗೆ ಹೆಚ್ಚು ಮಹಿಳಾಭಿಮಾನಿಗಳು ಇದ್ದರು. ಆದರೆ ನಂತರ ಎಲ್ಲೋ ಒಂದು ಕಡೆ ಆ ಫೀಮೇಲ್ ಫ್ಯಾನ್ ಫಾಲೋಯಿಂಗ್ ಸಂಪೂರ್ಣ ಕುಸಿದು ಹೋಗಿತ್ತು. ಈ ವಿಚಾರದಲ್ಲಿ ನಾನು ಸುಳ್ಳು ಹೇಳಬಾರದು. ಬರೀ ಪಡ್ಡೆ ಹುಡುಗರ ಫ್ಯಾನ್ ಫಾಲೋಯಿಂಗ್ ಇತ್ತು. ಆದರೆ ಇವತ್ತು ನಂಬಲಾರದ ರೀತಿಯಲ್ಲಿ ಮಹಿಳಾಭಿಮಾನಿಗಳು ಮತ್ತೆ ಸಿಕ್ಕಿದ್ದಾರೆ. ದಿನಕ್ಕೆ ಸಾವಿರಾರು ಮೆಸೇಜ್ಗಳು ಬರುತ್ತಿವೆ’ ಎಂದು ಶುಭಾ ಪೂಂಜಾ ಖುಷಿ ವ್ಯಕ್ತಪಡಿಸಿದ್ದಾರೆ.
‘ಮಹಿಳಾಭಿಮಾನಿಗಳ ಮನೆಯಲ್ಲಿ ಇರುವ ತಂದೆ-ತಾಯಿ, ಚಿಕ್ಕ ಮಕ್ಕಳು ಕೂಡ ನನಗೆ ಅಭಿಮಾನಿಗಳಾಗಿದ್ದಾರಂತೆ. ಅದನ್ನು ಕೇಳಿ ನನಗೆ ಅಪಾರ ಖುಷಿ ಆಯಿತು. ಭಾವುಕಳಾಗಿ ಅತ್ತುಬಿಟ್ಟೆ. ಮತ್ತೆ ಇಷ್ಟೊಂದು ಫ್ಯಾನ್ ಫಾಲೋಯಿಂಗ್ ಸಿಕ್ಕಿದ್ದು ಬಿಗ್ ಬಾಸ್ನಿಂದಾಗಿ. ಈ ಶೋನಿಂದ ಯಾರಿಗೆ ಏನು ಸಿಕ್ಕಿದೆಯೋ ಗೊತ್ತಿಲ್ಲ. ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಇಂದು ಬಿಗ್ ಬಾಸ್ ನನಗೆ ಖುಷಿ ನೀಡಿದೆ’ ಎಂದು ಶುಭಾ ಪೂಂಜಾ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಕೂಡ ಶುಭಾ ಪೂಂಜಾ ತಮ್ಮ ವೃತ್ತಿಜೀವನದ ಏರಿಳಿತಗಳ ಬಗ್ಗೆ ಮಾತನಾಡಿದ್ದರು. ಅಪಾರ ಯಶಸ್ಸು ಕಂಡ ಬಳಿಕ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಆಗಿದ್ದ ಕಾಲದ ಬಗ್ಗೆಯೂ ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ:
ಬಿಗ್ ಬಾಸ್ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್ ಕಿಟ್ ನೀಡಿದ ನಟಿ