ಕೊರೊನಾದಿಂದ ತನ್ನವರನ್ನು ಕಳೆದುಕೊಂಡ ಯುವ ನಟ; ವಿಡಿಯೋ ನೋಡಿ ಸಿದ್ದರಾಮಯ್ಯ ಹೇಳಿದ್ದೇನು?

ಗಟ್ಟಿಮೇಳ ಧಾರಾವಾಹಿ ನಟ ಪವನ್​ ಕುಮಾರ್​ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾರೆ. ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾದಿಂದ ತನ್ನವರನ್ನು ಕಳೆದುಕೊಂಡ ಯುವ ನಟ; ವಿಡಿಯೋ ನೋಡಿ ಸಿದ್ದರಾಮಯ್ಯ ಹೇಳಿದ್ದೇನು?
ಪವನ್​ ಕುಮಾರ್​ - ಸಿದ್ದರಾಮಯ್ಯ
Follow us
|

Updated on: Apr 24, 2021 | 1:44 PM

ಕೊರೊನಾ ವೈರಸ್​ ಎರಡನೇ ಅಲೆ ಕಾಟಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಸೂಕ್ತ ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ. ಆಕ್ಸಿಜನ್​ ಕೊರತೆ ಮತ್ತು ಬೆಡ್​ಗಳ ಕೊರತೆಯಿಂದ ಪರಿಸ್ಥಿತಿ ಚಿಂತಾಜನಕ ಆಗುತ್ತಿದೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗಟ್ಟಿಮೇಳ ಧಾರಾವಾಹಿ ನಟ ಪವನ್​ ಕುಮಾರ್​ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾರೆ. ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಎಲ್ಲೆಡೆ ವೈರಲ್​ ಆಗಿದ್ದು, ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.

‘ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ. ರಾಜ್ಯ ಸರ್ಕಾರ ಸಾಮೂಹಿಕ ಹತ್ಯೆ ನಡೆಸುತ್ತಿದೆ ಎನ್ನುತ್ತಿದ್ದಾನೆ’ ಎಂದು ಪವನ್​ ಕುಮಾರ್​ ಅವರ ವಿಡಿಯೋವನ್ನು ಟ್ವಿಟರ್​ನಲ್ಲಿ ಸಿದ್ದರಾಮಯ್ಯ ಶೇರ್​ ಮಾಡಿಕೊಂಡಿದ್ದಾರೆ.

‘ದಯವಿಟ್ಟು ನಾನು ಹೇಳುತ್ತಿರುವನ್ನು ಸರಿಯಾಗಿ ಕೇಳಿಸಿಕೊಳ್ಳಿ. ಈವಾಗ ಆಗುತ್ತಿರುವ ಕೊರೊನಾ ಕಳೆದ ವರ್ಷದ ರೀತಿ ಇಲ್ಲ. ತುಂಬ ಕೆಟ್ಟದಾಗಿದೆ. ರಾಜಕಾರಣಿಗಳು ಸುಳ್ಳು ಹೇಳುತ್ತಿದ್ದಾರೆ. ಗ್ರೌಂಡ್​ ರಿಯಾಲಿಟಿ ಬೇರೆಯೇ ಇದೆ. ಸರ್ಕಾರದ ಅವ್ಯವಸ್ಥೆಗೆ ನಾವೇ ಬಲಿಪಶು ಆಗಿದ್ದೇವೆ. ನನ್ನ ಕುಟುಂಬದಿಂದ ನಾನು ಇಬ್ಬರನ್ನು ಕಳೆದುಕೊಂಡಿದ್ದೇನೆ. ಎರಡು ದಿನದ ಗ್ಯಾಪ್​ನಲ್ಲಿ ಭಾವ ಮತ್ತು ಅವರ ತಂದೆ ನಿಧನರಾಗಿದ್ದಾರೆ’ ಎಂದು ಪವನ್​ ಕುಮಾರ್​ ಹೇಳಿದ್ದಾರೆ.

‘ಸಾವಿನ ಸಂಖ್ಯೆ ತೋರಿಸುತ್ತಿರುವುದೆಲ್ಲ ಸುಳ್ಳು. ನಾನು ನಿಮಗೆ ಸರಿಯಾಗ ಲೆಕ್ಕ ಹೇಳುತ್ತೇನೆ. ನಿಮಗೆ ಕೊರೊನಾ ಬಂದಿದೆಯೋ ಇಲ್ಲವೋ ಎಂಬುದಕ್ಕೆ ಆರ್​ಟಿಪಿಸಿಆರ್​ ಮಾಡಿಸುತ್ತಾರೆ. ಅದರಲ್ಲಿ ನೆಗೆಟಿವ್​ ಬಂದರೆ ನಿಮಗೆ ಕೊರೊನಾ ಇಲ್ಲ. ಆಗ ನಿಮಗೆ ಬಿಯು ನಂಬರ್​ ಜನರೇಟ್​ ಆಗುವುದಿಲ್ಲ. ಪಾಸಿಟಿವ್​ ಆದವರಿಗೆ ಬಿಯು ನಂಬರ್​ ಬರುತ್ತದೆ. ಅದನ್ನು ಇಟ್ಟುಕೊಂಡು ಬಿಬಿಎಂಪಿಗೆ ಕರೆ ಮಾಡಿ ಆಸ್ಪತ್ರೆ ನಿಗದಿ ಮಾಡಿಕೊಳ್ಳಬೇಕು. ಆದರೆ ಆ ನಂಬರ್​ಗೆ ಕರೆ ಕನೆಕ್ಟ್​ ಆಗುವುದೇ ಇಲ್ಲ’ ಎಂದು ಪವನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ಕುಟುಂಬದವರು ಆಕ್ಸಿಜನ್​ಗಾಗಿ ನಿಮ್ಮ ಕಣ್ಣೆದುರಿನಲ್ಲೇ ಒದ್ದಾಡುತ್ತ ಇರುತ್ತಾರೆ. ನೀವು ಕಂಗಾಲಾಗುತ್ತೀರಿ. ಬಿಯು ನಂಬರ್​ ಇಟ್ಟುಕೊಂಡು ಬಿಬಿಎಂಪಿಗೆ ಕರೆ ಮಾಡಿದರೆ ಯಾರೂ ಫೋನ್​ ಎತ್ತದೇ ಇದ್ದಾಗ ನಿಮಗೆ ಆಗುವ ಹತಾಶೆಯನ್ನು ತಿಳಿದುಕೊಳ್ಳಿ. ಆಸ್ಪತ್ರೆ ಬೆಡ್​ ಕೊಡಿಸಿ ದುಡ್ಡು ಹೊಡೆಯಲು ಇಲ್ಲಿ ಬ್ರೋಕರ್​ಗಳು ಇದ್ದಾರೆ. 10-20 ಸಾವಿರ ಕೊಟ್ಟರೆ ಎಲ್ಲೋ ಒಂದು ಕಡೆ ಬೆಡ್​ ವ್ಯವಸ್ತೆ ಮಾಡಿಸುತ್ತಾರೆ. ಅಲ್ಲಿ ಹೋದರೂ ಆಕ್ಸಿಜನ್​ ಇರುವುದಿಲ್ಲ. ನಿನ್ನೆ ನನ್ನ ಕಣ್ಣ ಎದುರಿನಲ್ಲಿಯೇ ಒಬ್ಬರು ಮಹಿಳೆ ಸತ್ತಿದನ್ನು ನೋಡಿದ್ದೇನೆ’ ಎಂದಿದ್ದಾರೆ ಪವನ್​ ಕುಮಾರ್​.

‘ಆಕ್ಸಿಜನ್​ಗೆ ಆಸ್ಪತ್ರೆಗಳಲ್ಲಿ ಹೆಚ್ಚವರಿ ದರ ನಿಗದಿ ಮಾಡಲಾಗಿದೆ. ಆಕ್ಸಿಜನ್​ ತುಂಬ ಬೇಸಿಕ್​. ಅದನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ಇನ್ನೇನು ಕೊಡುತ್ತಾರೆ? ನಿನ್ನೆ ಆಸ್ಪತ್ರೆ ವಾರ್ಡ್​ನಲ್ಲಿ ಒಂದೇ ದಿನ ಆರು ಜನರ ಸಾವನ್ನು ನಾನು ನೋಡಿದ್ದೇನೆ. ನನ್ನ ಕುಟುಂಬದ ಇನ್ನೂ ಮೂರು ಜನರು ಆಸ್ಪತ್ರೆಯಲ್ಲಿ ಇದ್ದಾರೆ’ ಎಂದು ಪವನ್​ ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅಮ್ಮ, ಮಗನ ದೂರ ಮಾಡಿದ ಕೊರೊನಾ; ಮಗನಿಗೆ ತಾಯಿಯ ಸಾವಿನ ಸುದ್ದಿ ಹೇಳದೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

(Siddaramaiah reacts to Gattimela actor Pawan Kumar angry video on Coronavirus mismanagement by government)