ಕನ್ನಡತಿ ಚೈತ್ರಾ ಆಚಾರ್ ಮೊದಲ ತಮಿಳು ಸಿನಿಮಾಕ್ಕೆ ಭರಪೂರ ಪ್ರಶಂಸೆ

Siddharth-Chaithra Achar: 3 ಬಿಎಚ್​​ಕೆ ಸಿನಿಮಾ ಮಧ್ಯಮ ವರ್ಗದ ಕುಟುಂಬವೊಂದರ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಕನ್ನಡತಿ ಚೈತ್ರಾ ಆಚಾರ್ ನಾಯಕಿ. ಇಂದು (ಜುಲೈ 3) ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ನೋಡಿದ ಬಹುತೇಕ ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಕನ್ನಡತಿ ಚೈತ್ರಾ ಆಚಾರ್ ಮೊದಲ ತಮಿಳು ಸಿನಿಮಾಕ್ಕೆ ಭರಪೂರ ಪ್ರಶಂಸೆ
3 Bhk Twitter Review

Updated on: Jul 04, 2025 | 12:15 PM

‘ಸಪ್ತ ಸಾಗರದಾಚೆ ಎಲ್ಲೊ’, ‘ಟೋಬಿ’ ಇನ್ನೂ ಹಲವು ಉತ್ತಮ ಕನ್ನಡ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿರುವ ನಟಿ ಚೈತ್ರಾ ಆಚಾರ್ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಖ್ಯಾತ ನಟ ಸಿದ್ಧಾರ್ಥ್ ಎದುರು ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದು, ಸಿನಿಮಾದ ಹೆಸರು ‘3 ಬಿಎಚ್​​ಕೆ’. ಮಧ್ಯಮ ವರ್ಗದ ಕುಟುಂಬವೊಂದರ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾನಲ್ಲಿ ಚೈತ್ರಾ ಆಚಾರ್ ನಾಯಕಿ. ಇಂದು (ಜುಲೈ 3) ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ನೋಡಿದ ಬಹುತೇಕ ಎಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಖ್ಯಾತ ನಟ, ನಿರ್ಮಾಪಕ ಸಿಂಭು ಕೆಲ ದಿನಗಳ ಮುಂಚೆಯೇ ‘3 ಬಿಎಚ್​​ಕೆ’ ಸಿನಿಮಾ ನೋಡಿದ್ದು, ಸಿನಿಮಾ ಅದ್ಬುತವಾಗಿದೆ ಎಂದಿದ್ದಾರೆ. ನಟ ಸಿದ್ಧಾರ್ಥ್, ಶರತ್​​ಕುಮಾರ್ ಮತ್ತು ನಿರ್ದೇಶಕ ಶ್ರೀಗಣೇಶ್ ಅವರನ್ನು ಕೊಂಡಾಡಿದ್ದಾರೆ. ಇದೊಂದು ಸುಂದರವಾದ ಸಿನಿಮಾ, ನಿಮ್ಮನ್ನು ಭಾವುಕ ಪ್ರಪಂಚದ ಒಳಕ್ಕೆ ಇದು ಕರೆದೊಯ್ಯುತ್ತದೆ. ಅದ್ಭುತವಾದ ಸಿನಿಮಾ ನೀಡಿದ್ದಕ್ಕೆ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ರಾಜೇಶ್ ಕುಮಾರ್ ರೆಡ್ಡಿ ಎಂಬುವರು ಟ್ವೀಟ್ ಮಾಡಿ, ‘3 ಬಿಎಚ್​ಕೆ ಸಿನಿಮಾ ಎಲ್ಲರಿಗೂ ತಾಗುವಂಥಹಾ, ತಮ್ಮನ್ನು ತಾವು ನೋಡಿಕೊಳ್ಳುವಂಥಹಾ ಸಿನಿಮಾ. ಇಡೀ ಸಿನಿಮಾ ಮೌನವಾಗಿಯೇ ಮಧ್ಯಮ ವರ್ಗದ ನೋವುಗಳನ್ನು ಒಂದೊಂದನ್ನಾಗಿ ಮುಟ್ಟುತ್ತದೆ. ಎಂದೂ ಪೂರ್ಣವಾಗದ ಕನಸುಗಳು, ಕನಸುಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಎದುರಾಗುವ ನೋವುಗಳನ್ನು ಸಿನಿಮಾ ತೋರಿಸಿದೆ’ ಎಂದಿದ್ದಾರೆ.

ಅಮಾಮುತ್ತ ಸೂರ್ಯ ಎಂಬುವರು ಟ್ವೀಟ್ ಮಾಡಿ, ‘3 ಬಿಎಚ್​​ಕೆ ಸಿನಿಮಾ ಯಾವುದೋ ಒಂದು ದೃಶ್ಯದಲ್ಲಿ ನಾನು ಅಳುವಂತೆ ಮಾಡಲಿಲ್ಲ ಬದಲಿಗೆ ಇಡೀ ಸಿನಿಮಾ ಒಂದೊಂದೇ ದೃಶ್ಯದಲ್ಲಿ ನನ್ನನ್ನು ಮೌನವಾಗಿ ಬಾಧಿಸಿತು, ಕೊನೆಗೆ ದುಖಃದ ಕಟ್ಟೆ ಒಡೆಯಿತು. ಏಕೆಂದರೆ ಎಷ್ಟೋ ಬಾರಿ ಒಂದು ವೇದನೆಯಿಂದ ನೋವಾಗುತ್ತದೆ. ಆದರೆ ಹಲವು ಬಾರಿ ಒಂದೊಂದೆ ನೋವುಗಳು ಸೇರಿ ದುಖಃದ ಕಟ್ಟೆ ಒಡೆಯುತ್ತದೆ’ ಎಂದಿದ್ದಾರೆ.

ಪ್ರಕಾಶ್ ರಾಜ್ ಎಂಬುವರು ಟ್ವೀಟ್ ಮಾಡಿ, ‘3 ಬಿಎಚ್​​ಕೆ ಕೇವಲ ಸಿನಿಮಾ ಅಲ್ಲ. ಇದು ಪ್ರತಿ ಮಧ್ಯಮವರ್ಗ ಕುಟುಂಬದ ಕತೆ. ನಿರಾಕರಣೆ, ಸೋಲು ಎಲ್ಲವೂ ಪ್ರತಿದಿನವೂ ನಮಗೆ ಎದುರಾಗುತ್ತಲೇ ಇರುತ್ತದೆ. ಆದರೆ ಒಂದು ಭರವಸೆಯ ಮೇಲೆ ನಾವು ಬದುಕುತ್ತಿರುತ್ತೇವೆ. ನಾವು ಪ್ರತಿದಿನ ಎದುರಿಸುವ ನೋವು, ಹತಾಶೆ ಎಲ್ಲವನ್ನೂ ಈ ಸಿನಿಮಾ ತೋರಿಸಿದೆ’ ಎಂದಿದ್ದಾರೆ.

ಆದಿಲ್ ಎಂಬುವರು ಟ್ವೀಟ್ ಮಾಡಿ, ‘3ಬಿಎಚ್​​ಕೆ, ಒಂದೊಳ್ಳೆ ಕತೆ ಹೇಳುವ ಪ್ರಮಾಣಿಕ ಪ್ರಯತ್ನ. ಮಧ್ಯಮ ವರ್ಗದ ಜನ ತಮ್ಮನ್ನು ತಾವು ಈ ಸಿನಿಮಾನಲ್ಲಿ ನೋಡಿಕೊಳ್ಳುತ್ತಾರೆ. ಸಿನಿಮಾದಲ್ಲಿ ಹಲವು ನೆನಪುಳಿವ ದೃಶ್ಯಗಳು ಇವೆ. ಉದ್ದೇಶಪೂರ್ವಕ ನರೇಶನ್ ಇದ್ದಾಗಿಯೂ ಸಾಕಷ್ಟು ಆಳವೂ ಸಹ ಸಿನಿಮಾದ ಸಂಭಾಷಣೆಗಳಲ್ಲಿ ಇದೆ. ಒಂದೊಳ್ಳೆ ಹಾಗೂ ನೋಡಲೇ ಬೇಕಾದ ಸಿನಿಮಾ ಇದು’ ಎಂದಿದ್ದಾರೆ.

 

Published On - 12:08 pm, Fri, 4 July 25