ಸೈನಿಕರ ಬಗ್ಗೆ ಸಾಯಿ ಪಲ್ಲವಿ ಮಾತು: ಹಳೆ ವಿಡಿಯೋ ಹಂಚಿಕೊಂಡು ಟ್ರೋಲ್

|

Updated on: Oct 25, 2024 | 4:05 PM

ಸಾಯಿ ಪಲ್ಲವಿ ಹೇಟರ್ಸ್ ಇಲ್ಲದ ನಟಿ ಎಂದೇ ಖ್ಯಾತರು. ಅವರನ್ನು ವಿರೋಧಿಸುವ ಸಿನಿಮಾ ಪ್ರೇಮಿಗಳು ಸಿಗುವುದು ಕಡಿಮೆ. ಅವರ ನಟನೆಯ ‘ಅಮರನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಕೆಲವರು ಸಾಯಿ ಪಲ್ಲವಿಯ ಹಳೆಯ ವಿಡಿಯೋ ಇರಿಸಿಕೊಂಡು ಅವರನ್ನು ಟ್ರೋಲ್ ಮಾಡುವ ಯತ್ನ ಮಾಡುತ್ತಿದ್ದಾರೆ.

ಸೈನಿಕರ ಬಗ್ಗೆ ಸಾಯಿ ಪಲ್ಲವಿ ಮಾತು: ಹಳೆ ವಿಡಿಯೋ ಹಂಚಿಕೊಂಡು ಟ್ರೋಲ್
Follow us on

ದ್ವೇಷ ಮಾಡುವವರೇ ಇಲ್ಲದ ನಟಿ ಸಾಯಿ ಪಲ್ಲವಿ. ನಟಿಯನ್ನು ಇಷ್ಟಪಡದ ಸಿನಿಮಾ ಪ್ರೇಮಿ ಇಲ್ಲ ಎನ್ನಬಹುದು. ಲೇಡಿ ಸೂಪರ್ ಸ್ಟಾರ್ ಆಗುವ ಎಲ್ಲ ಲಕ್ಷಣಗಳು ಇರುವ ನಟಿ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ಹಲವು ಸಿನಿಮಾ ನಟ-ನಟಿಯರೇ ಸಾಯಿ ಪಲ್ಲವಿ ನಟನೆಯ, ಅಂದದ ಎಲ್ಲದಕ್ಕಿಂತಲೂ ಹೆಚ್ಚಾಗಿ ಸಾಯಿ ಪಲ್ಲವಿಯ ವ್ಯಕ್ತಿತ್ವದ ಅಭಿಮಾನಿಗಳು. ಯಾವುದೇ ವಿವಾದದಲ್ಲೂ ಸಾಯಿ ಪಲ್ಲವಿ ಸಿಲುಕಿಕೊಳ್ಳುವುದಿಲ್ಲ. ಆದರೆ ಈಗ ಕೆಲವರು ಸಾಯಿ ಪಲ್ಲವಿಯ ಹಳೆಯ ವಿಡಿಯೋ ಹಂಚಿಕೊಂಡು ನಟಿಯನ್ನು ಟ್ರೋಲ್ ಮಾಡಲು ಯತ್ನಿಸುತ್ತಿದ್ದಾರೆ.

ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ, ಹುತಾತ್ಮ ಯೋಧ ಮೇಜರ್ ಮುಕುಂಧನ್ ಪತ್ನಿ ರೆಬೆಕಾ ವರ್ಗೀಸ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಮೇಜರ್ ಮುಕುಂಧನ್ ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸೆಣಸುವಾಗ ಹುತಾತ್ಮರಾದರು. ಮೇಜರ್ ಮುಕುಂಧನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸುತ್ತಿದ್ದಾರೆ. ಈಗ ಸಾಯಿ ಪಲ್ಲವಿ ಸಿನಿಮಾ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಕೆಲವರು ಸಾಯಿ ಪಲ್ಲವಿಯ ಹಳೆಯ ವಿಡಿಯೋ ಇರಿಸಿಕೊಂಡು ಟ್ರೋಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಸಾಯಿ ಪಲ್ಲವಿ, ‘ವಿರಾಟ ಪರ್ವಂ’ ಹೆಸರಿನ ಸಿನಿಮಾ ಮಾಡಿದ್ದರು. ಸಿನಿಮಾದಲ್ಲಿ ಸಾಯಿ ಪಲ್ಲವಿಯದ್ದು ನಕ್ಸಲ್ ಒಬ್ಬನನ್ನು ಪ್ರೀತಿಸುವ ಹಾಗೂ ಸ್ವತಃ ತಾನೂ ನಕ್ಸಲ್ ಆಗುವ ಪಾತ್ರ. ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನಕ್ಸಲ್ ರ ಹಿಂಸಾಚಾರದ ಬಗ್ಗೆ ಸಾಯಿ ಪಲ್ಲವಿಗೆ ಪ್ರಶ್ನೆ ಮಾಡಲಾಗಿತ್ತು. ಪ್ರಶ್ನೆಗೆ ಸುದೀರ್ಘ ಉತ್ತರ ನೀಡಿದ್ದ ಸಾಯಿ ಪಲ್ಲವಿ, ಹಿಂಸಾಚಾರ ಎಂಬುದು ನನಗೆ ಅರ್ಥ ಆಗುವುದಿಲ್ಲ. ಪಾಕಿಸ್ತಾನದವರಿಗೆ ನಾವು (ಭಾರತೀಯರು) ನಮ್ಮ ಸೈನಿಕರನ್ನು ಕಂಡರೆ ಅಪಾಯ, ಭಯೋತ್ಪಾದಕರು ಎನಿಸುತ್ತದೆ. ನಮಗೆ ಅವರನ್ನು ನೋಡಿದರೆ ಭಯೋತ್ಪಾದಕರು ಎನಿಸುತ್ತಾರೆ’ ಎಂದಿದ್ದರು. ಈ ವಿಡಿಯೋ ಕ್ಲಿಪ್ ಇಟ್ಟುಕೊಂಡು ಭಾರತೀಯ ಸೈನಿಕರನ್ನು ಸಾಯಿ ಪಲ್ಲವಿ ಭಯೋತ್ಪಾದರು ಎಂದಿದ್ದಾರೆ ಎಂಬ ಒಕ್ಕಣೆಯೊಂದಿಗೆ ವೈರಲ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ:ಎಲ್ಲಿ ಹೋದರು ಸಾಯಿ ಪಲ್ಲವಿ, ಈಗ ಕೈಯಲ್ಲಿರುವ ಸಿನಿಮಾಗಳು ಯಾವುವು?

ಈ ಹಿಂದೆ ಅದೇ ಸಿನಿಮಾದ ಮತ್ತೊಂದು ಕಾರ್ಯಕ್ರಮದಲ್ಲಿ ಸಂದರ್ಶಕನೊಬ್ಬ ನೀವು ಎಡಪಂಥೀಯರಾ ಅಥವಾ ಬಲಪಂಥೀಯರಾ? ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಸಾಯಿ ಪಲ್ಲವಿ, ನಾನು ಯಾವುದೇ ಪಂಥಕ್ಕೆ ಸೇರಿದವಳಲ್ಲ. ಆದರೆ ಹಿಂಸೆಗೆ ಧರ್ಮದ ಕಾರಣ ನೀಡುವುದನ್ನು ನಾನು ವಿರೋಧಿಸುತ್ತೀನಿ. ‘ಕಾಶ್ಮೀರ ಫೈಲ್ಸ್’ ಹೇಗೆ ಮುಸ್ಲೀಮರು ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದರು ಎಂದು ತೋರಿಸಿದೆ. ಅದೇ ರೀತಿ ಇತ್ತೀಚೆಗೆ ಹಸುವನ್ನು ಸಾಗಿಸುತ್ತಿದ್ದ ಮುಸ್ಲಿಂ ಲಾರಿ ಡ್ರೈವರ್​ ಅನ್ನು ಹೊಡೆದು ಕೊಲ್ಲಲಾಯ್ತು, ‘ಜೈ ಶ್ರೀರಾಂ’ ಘೋಷಣೆಯನ್ನು ಕೂಗಲಾಯ್ತು. ನನ್ನ ಪಾಲಿಗೆ ಈ ಎರಡೂ ಘಟನೆಗಳೂ ಒಂದೇ ಎಂದಿದ್ದರು. ಸಾಯಿ ಪಲ್ಲವಿಯ ಈ ಹೇಳಿಕೆ ಬಗ್ಗೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಾಯಿ ಪಲ್ಲವಿ, ಯಾವುದೇ ವ್ಯಕ್ತಿ, ಘಟನೆ, ಸನ್ನಿವೇಶವನ್ನು ಧರ್ಮದ ಕೋನದಲ್ಲಿ ವಿಂಗಡಿಸಿ ನೋಡುವುದಕ್ಕೆ ನನ್ನ ವಿರೋಧ ಇದೆಯೆಂದೇ ಹೇಳಿದರು.

ಸಾಯಿ ಪಲ್ಲವಿ, ಶಿವಕಾರ್ತಿಕೇಯನ್ ನಟಿಸಿರುವ ‘ಅಮರನ್’ ಕಮಲ್ ಹಾಸನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ರಾಜಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಶಿವ ಅರೂರು ಸಿನಿಮಾದ ಕತೆ ಬರೆದಿದ್ದಾರೆ. ಜಿವಿ ಪ್ರಕಾಶ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ